ಲೋಕಸಭಾ ಚುನಾವಣೆ: ನಿಷೇಧಾಜ್ಞೆ

| Published : Apr 14 2024, 01:49 AM IST

ಸಾರಾಂಶ

ಏ. 24ರ ಸಂಜೆ 5ಗಂಟೆಯಿಂದ ಏ. 26ರ ಸಂಜೆ 5 ಗಂಟೆ ವರೆಗೆ ಕೊಡಗು ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಪಾರದರ್ಶಕ, ಸುಗಮ ಮತ್ತು ಶಾಂತಿಯುತವಾಗಿ ಲೋಕಸಭಾ ಚುನಾವಣೆ-2024 ರ ಮತದಾನ ನಡೆಸುವ ಸಂಬಂಧ ಮತ್ತು ಈ ಅವಧಿಯಲ್ಲಿ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಕಲಂ 126 ರಡಿ ವ್ಯಾಖ್ಯಾನಿಸಿದ ಅಂಶಗಳಂತೆ ಮತ್ತು ದಂಡ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 144 ರಡಿ ದತ್ತವಾದ ಅಧಿಕಾರದಂತೆ ಏ.24 ರ ಸಂಜೆ 5 ಗಂಟೆಯಿಂದ ಏ. 26 ರ ಸಂಜೆ 5 ಗಂಟೆವರೆಗೆ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಅಭ್ಯರ್ಥಿ ಅಥವಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ಪರ ಮತಯಾಚನೆ ನಡೆಸುವುದನ್ನು ಹೊರತುಪಡಿಸಿ, ಉಳಿದಂತೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಭೆ-ಸಮಾರಂಭ ನಡೆಸುವುದು, ಮೆರವಣಿಗೆ ಇನ್ನಿತರೆ ಕಾರ್ಯಕ್ರಮ ನಡೆಸುವುದು, ಛಾಯಾಗ್ರಹಣ, ದೂರದರ್ಶನ ಅಥವಾ ಇತರ ರೀತಿಯ ಉಪಕರಣಗಳ ಮೂಲಕ ಯಾವುದೇ ಚುನಾವಣಾ ವಿಷಯವನ್ನು ಸಾರ್ವಜನಿಕರಿಗೆ ಪ್ರದರ್ಶಿಸುವುದನ್ನು ನಿಷೇಧಿಸಿದೆ.

ಅಭ್ಯರ್ಥಿ ಅಥವಾ ಕಾರ್ಯಕರ್ತರು ಮತದಾರರನ್ನು ಮತಗಟ್ಟೆಗೆ ವಾಹನದಲ್ಲಿ ಕರೆತರುವುದು ಹಾಗೂ ಅಲ್ಲಿಂದ ಕರೆದುಕೊಂಡು ಹೋಗುವುದನ್ನು ನಿಷೇಧಿಸಿದೆ.

ಐದಕ್ಕಿಂತ ಹೆಚ್ಚಿನ ಜನ ಗುಂಪು ಸೇರುವುದು/ ಸಂಚರಿಸುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಎಲ್ಲ ಮತಗಟ್ಟೆಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಸ್ಥಳ ನಿರ್ಬಂಧಿತ ಪ್ರದೇಶವಾಗಿದ್ದು, ಈ ಪ್ರದೇಶಗಳಲ್ಲಿ ಖಾಸಗಿ ವಾಹನಗಳ ನಿಲುಗಡೆ, ಧ್ವನಿ ವರ್ಧಕ ಬಳಕೆ ಮುಂತಾದವುಗಳನ್ನು ನಿಷೇಧಿಸಿದೆ ಹಾಗೂ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಅಭ್ಯರ್ಥಿ ಪರ ಪ್ರಚಾರ, ಮತದಾರರ ಓಲೈಕೆ ಮುಂತಾದವುಗಳನ್ನು ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಹಾಗು ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.