ಸಾರಾಂಶ
ದಿನದ 24 ಗಂಟೆಯ ಕಾಲ ಹಗಲು ಹಾಗೂ ರಾತ್ರಿಯಲ್ಲೂ ವಾಹನಗಳ ನಿರಂತರ ತಪಾಸಣಾ ವ್ಯವಸ್ಥೆಯು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಮುಂದುವರಿಯಲಿದೆ.
ಅಂಕೋಲಾ: ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯ ಹಿನ್ನೆಲೆಯಲ್ಲಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಬಾಳೆಗುಳಿ ಕ್ರಾಸ್‌ನ ಚುನಾವಣಾ ಕಣ್ಗಾವಲು ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ತೀವ್ರಗೊಂಡಿದೆ.
ಡಿವೈಎಸ್ಪಿ ಗಿರೀಶ ಎಸ್.ವಿ. ಹಾಗೂ ಸಿಪಿಐ ಶ್ರೀಕಾಂತ ತೋಟಗಿ ಅವರು ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಮಾರ್ಗದರ್ಶನ ನೀಡಿದರು.ದಿನದ 24 ಗಂಟೆಯ ಕಾಲ ಹಗಲು ಹಾಗೂ ರಾತ್ರಿಯಲ್ಲೂ ವಾಹನಗಳ ನಿರಂತರ ತಪಾಸಣಾ ವ್ಯವಸ್ಥೆಯು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಮುಂದುವರಿಯಲಿದೆ. ಚೆಕ್‌ಪೋಸ್ಟ್‌ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಓರ್ವ ಹವಾಲ್ದಾರ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿ ಚೆಕ್‌ಪೋಸ್ಟ್‌ನಲ್ಲಿ ನಿಯೋಜಿಸಲಾಗಿದೆ.
ಡಿವೈಎಸ್ಪಿ ಗಿರೀಶ ಎಸ್.ವಿ. ಚೆಕ್‌ಪೋಸ್ಟ್ ಸಿಬ್ಬಂದಿಗೆ ಸೂಚನೆ ನೀಡಿ ಕಟ್ಟುನಿಟ್ಟಾಗಿ ವಾಹನ ತಪಾಸಣೆ ನಡೆಸಬೇಕು. ಸರಕು ಸಾಗಣೆ ಮಾಡುವವರು ಸೂಕ್ತ ಕಾನೂನು ದಾಖಲೆಗಳನ್ನು ಹೊಂದಿದ್ದಾರೆಯೆ? ಸರಕು ವಾಹನ ತಪಾಸಣೆ ವೇಳೆ ಮಾಲೀಕರು ಅಥವಾ ಸರಕು ಸಾಗಣೆದಾರರು ಜಿಎಸ್ಟಿ ಬಿಲ್ ಮತ ಇತರೆ ದಾಖಲೆಗಳನ್ನು ಇಟ್ಟುಕೊಂಡಿರುವುದು ಅತ್ಯಗತ್ಯ. ಇದಲ್ಲದೆ ವಸ್ತುವನ್ನು ಖರೀದಿಸಿದ ಸ್ಥಳ, ಉದ್ದೇಶ ಸೇರಿದಂತೆ ಇತರೆ ದಾಖಲೆಗಳನ್ನು ಇಟ್ಟುಕೊಂಡಿರುವದು ಪರಿಶೀಲಿಸಿ ಹಾಗೆ ಅಕ್ರಮ ಮದ್ಯದ ಬಗ್ಗೆ ತೀವ್ರ ನಿಗಾ ಇಡಬೇಕು ಎಂದು ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಪೊಲೀಸ್ ವಿಶೇಷ ಘಟಕದ ಸಿಬ್ಬಂದಿ ಪುನೀತ ನಾಯ್ಕ, ಚಾಲಕರಾದ ಗಣೇಶ ನಾಯ್ಕ, ಯತೀಶ ಪಾಟೀಲ ಉಪಸ್ಥಿತರಿದ್ದರು.ಲೋಕಸಭೆ ಚುನಾವಣೆ: 1272 ಪ್ರಚಾರ ಸಾಮಗ್ರಿಗಳ ತೆರವು
ಕಾರವಾರ: ಚುನಾವಣಾ ಆಯೋಗದ ನಿರ್ದೇಶನದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ 72 ಗಂಟೆಯ ಒಳಗಡೆ ಎಲ್ಲ ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಖಾಸಗಿ ಒಡೆತನದಲ್ಲಿರುವ ಸ್ಥಳ, ಕಟ್ಟಡಗಳ ಮೇಲೆ ಪ್ರಕಟಿಸಲಾಗಿದ್ದ ವಿವಿಧ ರೀತಿಯ ಪ್ರಚಾರ ಹಾಗೂ ಮತದಾರರ ಮೇಲೆ ಪ್ರಭಾವ ಬೀರುವಂತಹ 1272 ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.ಈ ಬಗ್ಗೆ ಪ್ರಕಟಣೆ ನೀಡಿದ್ದು, 251 ಗೋಡೆ ಬರಹಗಳು, 349 ಪೋಸ್ಟರ್‌ಗಳು, 255 ಬ್ಯಾನರ್‌ಗಳು ಹಾಗೂ 417 ಇತರ ಸೇರಿ ಒಟ್ಟೂ 1272 ಪ್ರಚಾರ ಸಾಮಗ್ರಿಗಳನ್ನು 33 ತಂಡದಿಂದ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ. ಜೋಯಿಡಾದಲ್ಲಿ 96, ದಾಂಡೇಲಿ 69, ಹಳಿಯಾಳ 85, ಕಾರವಾರ 229, ಅಂಕೋಲಾ 81, ಕುಮಟಾ 120, ಹೊನ್ನಾವರ 192, ಭಟ್ಕಳ 49, ಶಿರಸಿ 152, ಸಿದ್ದಾಪುರ 65, ಯಲ್ಲಾಪುರ 86 ಹಾಗೂ ಮುಂಡಗೋಡನಲ್ಲಿ 48 ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಮತ್ತು ಕೇಬಲ್ ಟಿವಿಗಳಲ್ಲಿ ಯಾವುದೇ ರೀತಿಯ ಚುನಾವಣಾ ಪ್ರಚಾರದ ಜಾಹೀರಾತುಗಳನ್ನು ನೀಡಲು ಜಿಲ್ಲಾ ಎಂಸಿಎಂಸಿ ಸಮಿತಿಯ ಪೂರ್ವಾನುಮತಿಯನ್ನು ಪಡೆಯುವುದು ಕಡ್ಡಾಯವಾಗಿದ್ದು, ಇದನ್ನು ಉಲ್ಲಂಘಿಸುವವರ ವಿರುದ್ಧ ಕಾಯ್ದೆಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.