ಲೋಕಸಭೆ ಚುನಾವಣೆ ರಣರಂಗವಾಗದೆ, ಕ್ರೀಡಾಂಗಣವಾಗಲಿ: ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

| Published : Dec 30 2023, 01:15 AM IST

ಲೋಕಸಭೆ ಚುನಾವಣೆ ರಣರಂಗವಾಗದೆ, ಕ್ರೀಡಾಂಗಣವಾಗಲಿ: ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿರಿಗೆರೆಯಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಮೂರು ದಿನಗಳ ಕಾಲ ಆಯೋಜನೆಗೊಂಡಿರುವ ತರಳಬಾಳು ಕ್ರೀಡಾಮೇಳದ ಉದ್ಘಾಟನಾ ಸಮಾರಂಭ, ಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳನ್ನು ಒಂದೆಡೆ ಸೇರಿಸಿ ಅವರಿಗೆ ಕ್ರೀಡಾ ಪ್ರತಿಜ್ಞೆ ಸ್ವೀಕಾರದಂತೆ ಪ್ರತಿಜ್ಞಾ ವಿಧಿ ಬೋಧಿಸುವಂತಾಗಬೇಕೆಂದರು

ಕನ್ನಡಪ್ರಭ ವಾರ್ತೆ ಸಿರಿಗೆರೆ

ಬರುವ ಲೋಕಸಭೆ ಚುನಾವಣೆಯನ್ನು ಎಲ್ಲಾ ಪಕ್ಷಗಳು ಅಭ್ಯರ್ಥಿಗಳು ರಣರಂಗವನ್ನಾಗಿಸದೆ ಅದನ್ನು ಸ್ಪೂರ್ತಿಯ ಕ್ರೀಡಾಂಗಣವಾಗಿಸಬೇಕೆಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶಯ ವ್ಯಕ್ತಪಡಿಸಿದ್ದಾರೆ.

ಸಿರಿಗೆರೆಯಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಮೂರು ದಿನಗಳ ಕಾಲ ಆಯೋಜನೆಗೊಂಡಿರುವ ತರಳಬಾಳು ಕ್ರೀಡಾಮೇಳದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳನ್ನು ಒಂದೆಡೆ ಸೇರಿಸಿ ಅವರಿಗೆ ಕ್ರೀಡಾ ಪ್ರತಿಜ್ಞೆ ಸ್ವೀಕಾರದಂತೆ ಪ್ರತಿಜ್ಞಾ ವಿಧಿ ಬೋಧಿಸುವಂತಾಗಬೇಕೆಂದರು.

ಅಭ್ಯರ್ಥಿಗಳು ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ, ಮತದಾರರಿಗೆ ಯಾವುದೇ ತಾರತಮ್ಯ ಮಾಡದೆ, ದೇಶದ ಅಭಿವೃದ್ಧಿಗೆ, ದೇಶದ ಹಿರಿಮೆಗೆ ಶ್ರಮಿಸುತ್ತೇನೆಂಬ ಶಪಥ ಕೈಗೊಳ್ಳುವಂತಹ ಕೆಲಸ ಆಗಬೇಕು. ಆಗ ಒಂದಿಷ್ಟಾದರೂ ಮಾನಸಿಕ ಬದಲಾವಣೆ ಆಗಬಹುದು ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ತರಳಬಾಳು ಕ್ರೀಡಾಮೇಳದ ಆಯೋಜನೆ, ನಿಮ್ಮೆಲ್ಲರ ಭಾಗವಹಿಸುವಿಕೆ ನಮ್ಮ ಮನಸ್ಸು ತುಂಬಿಸಿದೆ. ಬಾಲ್ಯಾವಸ್ಥೆಯಲ್ಲಿರುವ ನಿಮ್ಮನ್ನು ಈ ಕ್ರೀಡಾಂಗಣದಲ್ಲಿ ನೋಡಿದಾಗ ನಾವು ಕೂಡ ಬಾಲಕರಾಗಿ ಈ ಸೊಬಗನ್ನು ಅನುಭವಿಸಬೇಕೆಂಬ ಹಂಬಲ ಉಂಟಾಗಿದೆ. ನಿಮ್ಮಂತಾಗಿ ಈಗ ದೊರೆಯುತ್ತಿರುವ ಆಧುನಿಕ ತಂತ್ರಜ್ಞಾನ ಮಾದರಿ ಶಿಕ್ಷಣ ಕಲಿಯಬೇಕೆಂಬ ಆಸೆಯೂ ಮೂಡಿದೆ ಎಂದು ಶ್ರೀಗಳು ಹೇಳಿದರು.ತರಳಬಾಳು ಕ್ರೀಡಾಕೂಟದಿಂದ ಪ್ರೇರಿತರಾಗಿ, ಸಂಕಲ್ಪ ಮಾಡಿಕೊಂಡು ಗುರಿ ಮುಟ್ಟುವ ಹೆಜ್ಜೆ ವಿದ್ಯಾರ್ಥಿಗಳು ಇಡಬೇಕು ಎಂದು ಶ್ರೀಗಳು ಅಪೇಕ್ಷೆ ವ್ಯಕ್ತಪಡಿಸಿದರು.

ಹಿರಿಯ ಬಿಜೆಪಿ ನಾಯಕ ಡಿ.ಎಚ್.‌ ಶಂಕರಮೂರ್ತಿ ಕ್ರೀಡಾಧ್ವಜವನ್ನು ಅನಾವರಣ ಮಾಡಿ, ಮಕ್ಕಳಲ್ಲಿ ಮಾನಸಿಕ ದೃಢತೆ ಬೆಳೆಯಬೇಕು. ಹಳ್ಳಿಗಳಲ್ಲಿರುವ ಶಾಲೆಗಳಲ್ಲಿ ಸೌಲಭ್ಯಗಳು ಇಲ್ಲದೆ ಅಲ್ಲಿ ಹೋಗುವ ಮಕ್ಕಳು ಮುಂದೇನು ಎಂಬ ಆತಂಕದಲ್ಲಿದ್ದಾರೆ. ಇಂತಹ ಪರಿಸ್ಥಿತಿ ಬೇಗ ದೂರ ಆಗಬೇಕು. ಸಿರಿಗೆರೆಯಲ್ಲಿ ವಿದ್ಯೆಯ ಜೊತೆಗೆ ಕ್ರೀಡೆಗೂ ಆದ್ಯತೆ ದೊರೆತಿದೆ. ದೇಶಕ್ಕೆ ೧೯೪೭ ರಲ್ಲಿ ಸ್ವಾತಂತ್ರ್ಯ ಬಂದಿದ್ದರೂ ಅದನ್ನು ಅನುಭವಿಸಲು ನಾವಿನ್ನೂ ದೈಹಿಕವಾಗಿ, ಮಾನಸಿಕವಾಗಿ ಗಟ್ಟಿಯಾಗಿಲ್ಲ ಎಂದರು.

ತರಳಬಾಳು ಕ್ರೀಡಾ ಅಕಾಡೆಮಿ:

ಸಂಸ್ಥೆಯಲ್ಲಿ ಓದುತ್ತಿರುವ ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಒಲವು ಮೂಡಿಸಲು ಈ ವರ್ಷದಿಂದಲೇ ಜಾರಿಗೆ ಬರುವಂತೆ ತರಳಬಾಳು ಕ್ರೀಡಾ ಅಕಾಡೆಮಿ ಆರಂಭಿಸಲಾಗುವುದು ಎಂದು ಆಡಳಿತಾಧಿಕಾರಿ ಡಾ. ಎಚ್.ವಿ. ವಾಮದೇವಪ್ಪ ಪ್ರಕಟಿಸಿದರು.

ಕ್ರೀಡಾಮೇಳದ ಉದ್ಘಾಟನೆಗೂ ಪೂರ್ವದಲ್ಲಿ ವಿನೂತನ ಜಾನಪದ ಸಂಭ್ರಮವೇ ನಡೆಯಿತು. ಅತಿಥಿಗಳ ಸ್ವಾಗತ ಸಂದರ್ಭದಲ್ಲಿ ನಡೆದ ವಿದ್ಯಾರ್ಥಿಗಳ ಡೊಳ್ಳು, ನೃತ್ಯ, ಕೀಲುಕುದುರೆ, ಗೊಂಬೆ ಪ್ರದರ್ಶನ, ಕುಂಭಗಳ ನೃತ್ಯ, ಲಂಬಾಣಿ ನೃತ್ಯ, ಪೂಜಾ ನೃತ್ಯಗಳು ನೋಡುಗರ ಕಣ್ಮನ ಸೆಳೆದವು. ಕ್ರೀಡಾಮೇಳದಲ್ಲಿ ಭಾಗವಹಿಸಲು ದೂರದೂರುಗಳಿಂದ ಆಗಮಿಸಿದ್ದ ತರಳಬಾಳು ಸಂಸ್ಥೆಯ ಮಕ್ಕಳಿಗೆ ಇದೊಂದು ವಿಸ್ಮಯದ ಘಟನೆಯಾಗಿತ್ತು. ಜಾನಪದ ಮೆರವಣಿಗೆಯು ಒಟ್ಟಾರೆ ಕ್ರೀಡಾಮೇಳಕ್ಕೆ ಮೆರುಗು ತಂದಿತ್ತು.

ವಿಶೇಷಾಧಿಕಾರಿ ವೀರಣ್ಣ ಜತ್ತಿ, ಕೆ.ಸಿ. ಸರೋಜಾ ನಾಗರಾಜ್‌, ರಕ್ಷಿತಾ ರಾಜು, ನಂದಿನಿ ಅಗಸರ ಮಾತನಾಡಿದರು. ಈ ಸಂದರ್ಭದಲ್ಲಿ ಸರೋಜಾ ನಾಗರಾಜ್‌ ಅವರ ಮೂರು ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಶಿಕ್ಷಕ ಅರುಣ್‌ ಸ್ವಾಗತಿಸಿದರು. ಶಾಲಾ ಕಾಲೇಜುಗಳ ಮಕ್ಕಳ ಆಕರ್ಷಕ ಕವಾಯತು ನಡೆಯಿತು. ಅಧ್ಯಾಪಕಿ ಬಿ.ಎಸ್.‌ ರೇಖಾ ವಂದಿಸಿದರು.