ನಗರಸಭೆ ಸದಸ್ಯರ ವಿರುದ್ಧ ಸುಮೊಟೋ ಕೇಸ್‌

| Published : Mar 28 2025, 12:31 AM IST

ಸಾರಾಂಶ

ಲೇಔಟ್‌ಗಳಲ್ಲಿ ಪಾರ್ಕಿಂಗ್, ಸಿ.ಎ. ಇತ್ಯಾದಿ ಮೀಸಲಾಗಿರುವುದನ್ನು ಖಾತೆ ಮಾಡಲು ಯಾವ ಸದಸ್ಯರು ನನಗೆ ಒತ್ತಾಯಿಸಿಲ್ಲ, ಒಂದು ವೇಳೆ ಒತ್ತಾಯಿಸಿದರೂ ಸಹ ನಾನು ಮಾಡುವುದೂ ಇಲ್ಲ, ಅವರಿಗೆ ದೂರು ಬಂದಿರುವ ಬಗ್ಗೆ ವಿಚಾರಣೆ ನಡೆಸಿದ್ದಾರೆ ಹೊರತಾಗಿ ನಾನೇನು ದೂರು ನೀಡಿಲ್ಲ ಎಂದು ಕೋಲಾರ ನಗರಸಭೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರನಗರಸಭೆಯ ೨೦೨೫-೨೬ನೇ ಸಾಲಿನ ಅಯವ್ಯಯದ ಪೂರ್ವ ಭಾವಿ ಸ್ಥಾಯಿ ಸಭೆಯನ್ನು ಗುರುವಾರ ಬೆಳಗ್ಗೆ ೧೧ ಗಂಟೆಗೆ ನಿಗದಿ ಪಡಿಸಲಾಗಿತ್ತು, ಆದರೆ ಸದಸ್ಯರ ಕೋರಂ ಕೊರತೆಯಿಂದಾಗಿ ಶನಿವಾರಕ್ಕೆ ಮುಂದೂಡಲಾಯಿತು. ನಗರಸಭೆ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಲು ಅಧ್ಯಕ್ಷೆ ಲಕ್ಷ್ಮೀದೇವಮ್ಮ ಹಾಗೂ ಪೌರಾಯುಕ್ತ ಪ್ರಸಾದ್ ಸುಮಾರು ಅರ್ಧಗಂಟೆ ಕಾದರೂ ಸಭೆ ನಡೆಸಲು ಅಗತ್ಯವಾದ ಕೋರಂನಷ್ಟು (೧೩ ಸದಸ್ಯರು) ಸದಸ್ಯರು ಇಲ್ಲದ ಕಾರಣ ಸಭೆಯನ್ನು ಮುಂದೂಡಿದರು. ಆಯುಕ್ತರಿಗೆ ಸದಸ್ಯರ ತರಾಟೆ

ನಗರಸಭೆಯ ಸದಸ್ಯ ಮುರಳಿಗೌಡ ಮಾತನಾಡಿ, ಲೋಕಾಯುಕ್ತರು ನಗರಸಭೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಖಾತೆಗಳಿಗೆ ಸಂಬಂಧಪಟ್ಟಂತೆ ಕೆಲವೊಂದು ಕಾನೂನು ಬಾಹಿರವಾಗಿ ಖಾತೆಗಳು ಮಾಡಿರುವ ಕುರಿತು ನಗರಸಭಾ ಸದಸ್ಯರ ಒತ್ತಾಯಕ್ಕೆ ಮಾಡಲಾಗಿದೆ ಎಂದು ಲೋಕಾಯಕ್ತರ ಬಳಿ ದೂರಿದ್ದ ಹಿನ್ನೆಲೆಯಲ್ಲಿ ಇಂದು ನಗರಸಭೆಯ ಸದಸ್ಯರ ಮೇಲೆ ಸುಮೂಟೋ ಪ್ರಕರಣ ದಾಖಲಾಗಿದೆ. ನಿಮಗೆ ಯಾವ ಸದಸ್ಯರು ಒತ್ತಾಯಿಸಿದ್ದರೋ ಅವರ ಮೇಲೆ ನೇರವಾಗಿ ಆರೋಪಿಸದೆ ನಗರಸಭಾ ಸದಸ್ಯರು ಎಂದು ತಿಳಿಸಿರುವುದರಿಂದ ೩೫ ಸದಸ್ಯರ ಮೇಲೆ ಸುಮೊಟೋ ಪ್ರಕರಣ ದಾಖಲಾಗಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರ ಹಾಗೂ ಆಯುಕ್ತರ ನಡುವೆ ವಾಗ್ವಾದ ನಡೆಯಿತು. ಸದಸ್ಯರ ಮೇಲೆ ಆರೋಪಿಸಿರುವ ಕರಾಣ ಇಡೀ ನಗರಸಭೆಗೆ ಅಪಮಾನವಾಗಿದೆ ಎಂದು ಕಿಡಿಕಾರಿದರು. ಕ್ಷಮೆ ಕೋರಿದ ಆಯುಕ್ತರು

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು ನನಗೆ ಯಾವ ಸದಸ್ಯರ ಮೇಲೂ ವೈಯುಕ್ತಿಕ ದ್ವೇಷವಿಲ್ಲ ಕೆಲವೊಂದು ನಿವೇಶಗಳು ಪಂಚಾಯಿತಿಗಳಲ್ಲಿ ಕರಾರು ಪತ್ರದ ಮೇಲೆ ಖಾತೆ ಮಾಡಲಾಗಿದೆ. ಈಗ ನಗರಸಭಾ ವ್ಯಾಪ್ತಿಗೆ ಸೇರಿರುವುದರಿಂದ ಅಂತಹ ಕೆಲವೊಂದು ಬಡವರ ಖಾತೆಗಳನ್ನು ಮಾನವೀಯತೆ ಮೇರೆಗೆ ಮಾಡಲು ಒತ್ತಡ ಹೇರಿರುವುದರಿಂದ ೪೮ ಪಂಚಾಯಿತಿ ಖಾತೆಗಳ ಆಧಾರದ ಮೇರೆಗೆ ಇ-ಖಾತೆ ಮಾಡುವುದು ಅನಿವಾರ್ಯವಾಗಿ ಮಾಡಲಾಗಿರುವುದು ತಪ್ಪಾಗಿದೆ ದಯವಿಟ್ಟು ಕ್ಷಮಿಸಿ ಎಂದರು. ನನಗೆ ಲೇಔಟ್‌ಗಳಲ್ಲಿ ಪಾರ್ಕಿಂಗ್, ಸಿ.ಎ. ಇತ್ಯಾದಿ ಮೀಸಲಾಗಿರುವುದನ್ನು ಖಾತೆ ಮಾಡಲು ಯಾವ ಸದಸ್ಯರು ನನಗೆ ಒತ್ತಾಯಿಸಿಲ್ಲ, ಒಂದು ವೇಳೆ ಒತ್ತಾಯಿಸಿದರೂ ಸಹ ನಾನು ಮಾಡುವುದೂ ಇಲ್ಲ, ಅವರಿಗೆ ದೂರು ಬಂದಿರುವ ಬಗ್ಗೆ ವಿಚಾರಣೆ ನಡೆಸಿದ್ದಾರೆ ಹೊರತಾಗಿ ನಾನೇನು ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಹಾಲಿನ ಬೂತ್‌ ಸ್ಥಾಪನೆ ಅಕ್ರಮ

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನಗರಸಭೆ ಆಯುಕ್ತ ಪ್ರಸಾದ್, ಟೇಕಲ್ ರಸ್ತೆಯಲ್ಲಿನ ಅಂಬೇಡ್ಕರ್ ಮಕ್ಕಳ ಉದ್ಯಾನವನದ ಮುಂಭಾಗದ ಸಾರ್ವಜನಿಕರ ಪಾದಚಾರಿ ರಸ್ತೆ ಹಾಗೂ ಚರಂಡಿಯ ಮೇಲೆ ಅಕ್ರಮವಾಗಿ ಹಾಲಿನ ಬೂತ್ ನಿರ್ಮಿಸಲಾಗಿದೆ. ಈ ಸಂಬಂಧವಾಗಿ ಸಾರ್ವಜನಿಕರಿಂದ ದೂರು ಬಂದರೂ ಸಹ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ಹಾಲಿನ ಬೂತ್ ತೆರೆಯಲು ನಗರಸಭೆಯಿಂದ ಅನುಮತಿ ನೀಡಿಲ್ಲ, ಅವರು ಅಕ್ರಮವಾಗಿ ನಿರ್ಮಿಸಿದ್ದಾರೆ ಎಂಬ ಮಾಹಿತಿ ಬಂದಿದೆ, ಈ ಕುರಿತು ಸ್ಥಳ ಪರಿಶೀಲನೆ ನಡೆಸಿ ಕ್ರಮ ಜರುಗಿಸುವುದಾಗಿ ಪೌರಾಯುಕ್ತರು ಸ್ಪಷ್ಟಪಡಿಸಿದರು. ನಗರಸಭೆಯ ಆಯ-ವ್ಯಯ ಕುರಿತು ಈ ಸಂದರ್ಭದಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ, ಸಭೆಯಲ್ಲಿ ಚರ್ಚಿಸಿದ ನಂತರ ಅನುಮೋಧನೆ ನೀಡಲಾಗುವುದು, ಒಟ್ಟಾರೆಯಾಗಿ ಈ ಬಾರಿ ೧೩೦ ಕೋಟಿ ರೂ ಆದಾಯ, ೧.೨೮ ಕೋಟಿ ರೂ ವೆಚ್ಚ ಸೇರಿದಂತೆ ಸುಮಾರು ೧.೫ ಕೋಟಿ ರೂ ಉಳಿತಾಯದ ಬಜೆಟ್ ಮಂಡಿಸಲು ಸಿದ್ದತೆ ನಡೆಸಿದೆ ಎಂದು ಸೂಕ್ಷ್ಮವಾಗಿ ತಿಳಿಸಿದರು.

ಸಭೆಯಲ್ಲಿ ನಗರಸಭೆ ಸದಸ್ಯರಾದ ವಡಗೂರು ರಾಕೇಶ್, ಪ್ರವೀಣಗೌಡ, ಮಂಜುನಾಥ್, ವಿ.ಮಂಜುನಾಥ್ ಇದ್ದರು.