ಸಾರಾಂಶ
ಕಾನಹೊಸಹಳ್ಳಿಯಲ್ಲಿ ಬೆಳಗ್ಗೆ ಐದು ಗಂಟೆಯಿಂದ ಪರಿಶೀಲನೆ ನಡೆಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಹೇಮಾವತಿ ಅವರ ತಂದೆ ಮುದ್ದಪ್ಪರ ತಿಪ್ಪೇಸ್ವಾಮಿ ಅವರ ಸಮ್ಮುಖದಲ್ಲಿ ದಾಖಲೆ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಕೂಡ್ಲಿಗಿ
ಹಾವೇರಿಯಲ್ಲಿ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ(ಆರ್‌ಎಫ್‌ಒ) ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಣಿಬೆನ್ನೂರಿನ ಮಹಾಂತೇಶ್ ಅವರ ಪತ್ನಿಯ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಬೆಳಗ್ಗೆ ದಾಳಿ ನಡೆಸಿ ಪರಿಶೀಲಿಸಿದರು. ತಾಲೂಕಿನ ಕಾನಹೊಸಹಳ್ಳಿಯಲ್ಲಿ ಮಹಾಂತೇಶ್ ಅವರ ಪತ್ನಿ ಹೇಮಾವತಿ ಹೆಸರಿನಲ್ಲಿ ಮನೆ ಇದೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಲೋಕಾಯುಕ್ತ ಇನ್ಸ್‌ಪೆಕ್ಟರ್ ಸಿ. ಮಧಸೂದನ್ ನೇತೃತ್ವದ ಎಂಟು ಜನರ ತಂಡ ಪರಿಶೀಲನೆ ನಡೆಸಿತು. ಕಾನಹೊಸಹಳ್ಳಿಯಲ್ಲಿ ಬೆಳಗ್ಗೆ ಐದು ಗಂಟೆಯಿಂದ ಪರಿಶೀಲನೆ ನಡೆಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಹೇಮಾವತಿ ಅವರ ತಂದೆ ಮುದ್ದಪ್ಪರ ತಿಪ್ಪೇಸ್ವಾಮಿ ಅವರ ಸಮ್ಮುಖದಲ್ಲಿ ದಾಖಲೆ ಪರಿಶೀಲನೆ ನಡೆಸಿದ್ದು, ಆರ್‌ಎಫ್ಒ ಮಹಾಂತೇಶ್ ಅವರ ಪತ್ನಿ ಹೇಮಾವತಿ ಹೆಸರಿನಲ್ಲಿ ಮನೆ ಇರುವುದು ದೃಢಪಟ್ಟಿದ್ದು, ಆ ಮನೆಯನ್ನು ಬಾಡಿಗೆಗೆ ನೀಡಲಾಗಿದೆ. ಮಹತ್ವದ ದಾಖಲೆಗಳು ದೊರೆತಿಲ್ಲ ಎಂದು ದಾವಣಗೆರೆ ಜಿಲ್ಲಾ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರ ತಿಳಿಸಿದರು.