ಸಾರಾಂಶ
ಧಾರವಾಡ:
ನಗರದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕೆಐಎಡಿಬಿ ಸಹಾಯಕ ಎಂಜಿನಿಯರ್ ಗೋವಿಂದಪ್ಪ ಭಜಂತ್ರಿ ನಿವಾಸದ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಲಾಗಿದೆ.ಗಾಂಧಿ ನಗರ ಬಡಾವಣೆಯಲ್ಲಿನ ಮನೆಗೆ ಡಿವೈಎಸ್ಪಿ ವೆಂಕನಗೌಡ ಪಾಟೀಲ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಧ್ಯಾಹ್ನ ವರೆಗೂ ಆಸ್ತಿ ದಾಖಲೆಗಳ ಪರಿಶೀಲನೆ ಮಾಡಲಾಯಿತು. ಬರೀ ಮನೆ ಮಾತ್ರವಲ್ಲದೇ ಮನೆ ಎದುರಿಗೆ ನಿಲ್ಲಿಸಿದ್ದ ಅವರಿಗೆ ಸಂಬಂಧಿಸಿದ ಎರಡು ಕಾರುಗಳನ್ನು ಸಹ ಪರಿಶೀಲಿಸಿದ್ದು, ಕಾರಿನ ಡಿಕ್ಕಿಯಲ್ಲಿದ್ದ ಕೆಲವೊಂದು ದಾಖಲೆ ಪತ್ರಗಳನ್ನು ಪಡೆದು ಪರಿಶೀಲನಾ ವರದಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ.
ಏಕಕಾಲಕ್ಕೆ ಇತರೆಡೆ ದಾಳಿ..ಹಾಗೆಯೇ, ಗೋವಿಂದಪ್ಪ ಅವರ ಸವದತ್ತಿ ತಾಲೂಕಿನ ಹೂಲಿ, ಉಗರಗೋಳ ಗ್ರಾಮದ ಫಾರ್ಮ್ ಹೌಸ್ ಮೇಲೂ ಮತ್ತೊಂದು ತಂಡ ದಾಳಿ ನಡೆಸಿ ಪರಿಶೀಲಿಸಿದೆ. ಹಾಗೆಯೇ, ನಗರದ ತೇಜಸ್ವಿ ನಗರ ಬಡಾವಣೆಯಲ್ಲಿರುವ ಅಳಿಯನ ಮನೆ, ಲಕಮನಹಳ್ಳಿ ಬಡಾವಣೆಯ ಕೆಐಎಡಿಬಿ ಕಚೇರಿ ಮತ್ತು ನರಗುಂದದಲ್ಲಿರುವ ಗೋವಿಂದಪ್ಪ ಅವರ ಸಹೋದರನ ಮನೆ ಮೇಲೆ ಏಕಕಾಲಕ್ಕೆ ವಿವಿಧ ತಂಡಗಳಲ್ಲಿ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
₹ 2.34 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಕೆಐಎಡಿಬಿ ಎಇಇ ಗೋವಿಂದ ಭಜಂತ್ರಿ ಬಳಿ ಲೋಕಾಯುಕ್ತ ಪರಿಶೀಲನೆಯಲ್ಲಿ ₹ 2.34 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಬೆಳಗ್ಗೆಯಿಂದ ನಡೆದ ಪರಿಶೀಲನೆಯಲ್ಲಿ ₹ 1.85 ಕೋಟಿ ಮೌಲ್ಯದ ಸ್ಥಿರಾಸ್ತಿ, ₹ 57 ಲಕ್ಷ ಮೌಲ್ಯದ ಸೈಟ್, ₹ 1.2 ಕೋಟಿ ಮೌಲ್ಯದ ಮನೆ, 7 ಎಕರೆ ಜಮೀನಿರೋ ಸ್ಥಿರಾಸ್ತಿ, ₹ 41.11 ಲಕ್ಷ ನಗದು ಸಹಿತ ₹ 94.22 ಲಕ್ಷ ಮೌಲ್ಯದ ಚರಾಸ್ತಿ, ₹ 27.11 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ, ₹ 20 ಲಕ್ಷ ಮೌಲ್ಯದ ಎರಡು ವಾಹನಗಳು ಪತ್ತೆಯಾಗಿವೆ.