ಇಬ್ಬರು ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾ ದಾಳಿ

| Published : Feb 01 2025, 12:03 AM IST

ಸಾರಾಂಶ

ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇರೆಗೆ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತರು ಶುಕ್ರವಾರ ಬೆಳ್ಳಂಬೆಳಗ್ಗೆ ಬೆಳಗಾವಿ ಉತ್ತರ ಕ್ಷೇತ್ರದ ಪ್ರಭಾರಿ ಸಬ್‌ ರಿಜಿಸ್ಟರ್‌ ಸಚಿನ್‌ ಮಂಡೇದ ಹಾಗೂ ರಾಯಬಾಗ ತಾಲೂಕಿನ ನಿಲಜಿಯ ಪಶು ಆಸ್ಪತ್ರೆಯ ಇನ್ಸ್‌ಪೆಕ್ಟರ್‌ ಸಂಜಯ ದುರ್ಗಣ್ಣವರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇರೆಗೆ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತರು ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿ ಬಿಸಿ ಮುಟ್ಟಿಸಿದ್ದಾರೆ.

ಬೆಳಗಾವಿ ಉತ್ತರ ಕ್ಷೇತ್ರದ ಪ್ರಭಾರಿ ಸಬ್‌ ರಿಜಿಸ್ಟರ್‌ ಸಚಿನ್‌ ಮಂಡೇದ ಹಾಗೂ ರಾಯಬಾಗ ತಾಲೂಕಿನ ನಿಲಜಿಯ ಪಶು ಆಸ್ಪತ್ರೆಯ ಇನ್ಸ್‌ಪೆಕ್ಟರ್‌ ಸಂಜಯ ದುರ್ಗಣ್ಣವರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಬೆಳಗಾವಿ, ಆನಿಗೋಳ, ಹಾರೂಗೇರಿ ಮತ್ತು ಬೆಲ್ಲದ ಬಾಗೇವಾಡಿಯಲ್ಲಿ ದಾಳಿ ನಡೆಸಲಾಗಿದೆ. ಬೆಳಗಾವಿ ಲೋಕಾಯುಕ್ತ ಎಸ್ಪಿ ಹಣಮಂತರಾಯ ನೇತೃತ್ವದಲ್ಲಿ ಇಬ್ಬರು ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.

ಆನಿಗೋಳದಲ್ಲಿ ಲೋಕಾಯುಕ್ತ ಸಿಪಿಐ ನಿರಂಜನ ಪಾಟೀಲ ನೇತೃತ್ವದಲ್ಲಿ ಮಂಡೇದ ಮನೆ ಮೇಲೆ ದಾಳಿ ನಡೆದಿದ್ದು, ಸಚಿನ್‌ ಬ್ಯಾಂಕ್‌ ಲಾಕರ್‌ ಓಪನ್‌ ಮಾಡಿದ ವೇಳೆ ರಾಶಿ ರಾಶಿ ಚಿನ್ನಾಭರಣ, ಬೆಳ್ಳಿ ಆಭರಣ ಖರೀದಿಸಿ ಲಾಕರ್‌ನಲ್ಲಿ ಇಟ್ಟಿರುವುದು ಬೆಳಕಿಗೆ ಬಂದಿದೆ.ಪ್ರಭಾರಿ ಸಬ್‌ ರಿಜಿಸ್ಟರ್‌ ಮನೆಯಲ್ಲಿ ಸಿಕ್ಕಿದ್ದೇನು?:

ಪ್ರಭಾರಿ ಸಬ್‌ ರಿಜಿಸ್ಟರ್‌ ಸಚಿನ್‌ ಮನೆಯಲ್ಲಿ ಕೆಜಿಯಷ್ಟು ಬೆಳ್ಳಿ, ಅರ್ಧ ಕೆಜಿಯಷ್ಟು ಚಿನ್ನಾಭರಣ ಪತ್ತೆಯಾಗಿವೆ. ಬ್ಯಾಂಕ್‌ ಲಾಕರ್‌, ಹೂಡಿಕೆ ಆ್ಯಪ್‌ಗಳು, ಎಫ್‌ಡಿ ಸ್ಟೇಟ್‌ಮೆಂಟ್‌ ಗಳು ಹಾಗೂ ಆಸ್ತಿಗಳ ದಾಖಲೆ ಪರಿಶೀಲಿಸಲಾಯಿತು. ಮನೆಯಲ್ಲಿ ₹1.35 ಲಕ್ಷ ನಗದು, ₹2. 50 ಲಕ್ಷ ಮೌಲ್ಯದ ವಾಹನ, ₹81,98,243 ಮೌಲ್ಯದ 1 ಕೆಜಿ 430 ಗ್ರಾಂ ಚಿನ್ನಾಭರಣ, ₹5,29,316 ಮೌಲ್ಯದ 5 ಕೆಜಿ 571 ಗ್ರಾಂ ಬೆಳ್ಳಿ ಆಭರಣ ಪತ್ತೆಯಾಗಿವೆ. ₹ 58 ಲಕ್ಷ ಮೌಲ್ಯದ 1 ಎಕರೆ 12 ಗುಂಟೆ ಕೃಷಿ ಜಮೀನು, ₹ 2 ಲಕ್ಷ ಮೌಲ್ಯದ ಖಾಲಿ ನಿವೇಶನ, ₹50 ಲಕ್ಷ ಮೌಲ್ಯದ ನಿರ್ಮಾಣ ಹಂತದ ಮನೆ ಕಟ್ಟಡ, ₹ 68 ಲಕ್ಷ ಬ್ಯಾಂಕ್‌ ಠೇವಣಿ, ₹18 ಲಕ್ಷ ಮ್ಯುಚುವಲ್‌ ಫಂಡ್‌ ಕಾಗದಪತ್ರ, ₹15 ಲಕ್ಷ ಇಕ್ವಿಟಿ ಷೇರು ಹೀಗೆ ಒಟ್ಟು ₹2,50,12,559 ಆಸ್ತಿ ಪತ್ತೆಯಾಗಿದೆ.

ಪಶುವೈದ್ಯಾಧಿಕಾರಿ ಮನೆಯಲ್ಲಿ ಸಿಕ್ಕಿದ್ದೇನು?:ರಾಯಬಾಗ ತಾಲೂಕಿನ ನಿಲಜಿಯ ಪಶುವೈದ್ಯಾಧಿಕಾರಿ ಸಂಜಯ ಅನ್ನಪ್ಪ ದುರ್ಗಣ್ಣವರಗೆ ಸೇರಿದ ಮೂರು ಸ್ಥಳಗಳ ಮೇಲೆ ಲೋಕಾಯುಕ್ತರು ನಡೆಸಿದ ದಾಳಿಯಲ್ಲಿ ಒಟ್ಟು ₹7407514 ಮೌಲ್ಯದ ಆಸ್ತಿ ಪತ್ತೆಯಾಗಿದೆ. ₹ 50.77 ಲಕ್ಷ ಮೌಲ್ಯದ 4 ನಿವೇಶನ, 1 ಮನೆ, 1 ಎಕರೆ ಕೃಷಿ ಜಮೀನು ಇರುವುದು ಬೆಳಕಿಗೆ ಬಂದಿದೆ. 2190 ನಗದು, ₹8.86 ಲಕ್ಷ ಮೌಲ್ಯದ ವಾಹನ ಹಾಗೂ ಬೆಲೆಬಾಳುವ ಪಿಠೋಪಕರಣಗಳು ಪತ್ತೆಯಾಗಿವೆ.