ಜಮೀನು ಪಹಣಿ ದಾಖಲೆಯಲ್ಲಿದ್ದ 15 ವರ್ಷಗಳ ಹಸ್ತಾಂತರ ನಿಷೇಧ ಷರತ್ತು ತೆರವುಗೊಳಿಸುವ ಆದೇಶ ಕೊಡಿಸುವುದಕ್ಕೆ ₹80,000 ಲಂಚಕ್ಕೆ ಬೇಡಿಕೆ ಇಟ್ಟು, ಅದನ್ನು ಮಧ್ಯವರ್ತಿ ಮೂಲಕ ಸ್ವೀಕರಿಸುತ್ತಿದ್ದ ವೇಳೆ ಕರ್ನಾಟಕ ಲೋಕಾಯುಕ್ತ ಪೊಲೀಸರು ರಾಯಬಾಗ ತಹಸೀಲ್ದಾರ್ ಕಚೇರಿಯಲ್ಲಿ ಭರ್ಜರಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ರೈತ ಶಿವಾನಂದ ಮಹಾಲಿಂಗಪ್ಪ ದುಂಡಗಿ ಅವರ ಅಜ್ಜನಿಗೆ 1974ರಲ್ಲಿ ಭೂ ನ್ಯಾಯಮಂಡಳಿ ಆದೇಶದಂತೆ ಮಂಜೂರಾಗಿದ್ದ ಜಮೀನಿನ ಪಹಣಿ ದಾಖಲೆಯಲ್ಲಿ ಕನಿಷ್ಠ 15 ವರ್ಷಗಳ ಕಾಲ ಜಮೀನು ಹಸ್ತಾಂತರ ಮಾಡಬಾರದು ಎಂಬ ನಿರ್ಬಂಧ ಇತ್ತು. ಈ ನಿರ್ಬಂಧ ತೆರವುಗೊಳಿಸುವಂತೆ ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು.ಈ ಅರ್ಜಿಯ ಮೇಲೆ ಕ್ರಮ ಜರುಗಿಸಿ ತಹಸೀಲ್ದಾರ್ ಆದೇಶ ಮಾಡಿಸಿಕೊಡುವುದಕ್ಕೆ ತಹಸೀಲ್ದಾರ್ ಕಚೇರಿಯ ಎಸ್‌ಡಿಎ ಚಂದ್ರಮಪ್ಪ ಮೊರಟಗಿ ₹80,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಲಂಚ ನೀಡಲು ನಿರಾಕರಿಸಿದ ದೂರುದಾರ ಶಿವಾನಂದ ಮಹಾಲಿಂಗಪ್ಪ ದುಂಡಗಿ ಮಂಗಳವಾರ ಕರ್ನಾಟಕ ಲೋಕಾಯುಕ್ತ ಠಾಣೆಗೆ ದೂರು ದಾಖಲಿಸಿದ್ದರು.ದೂರು ದಾಖಲಿಸಿಕೊಂಡ ಲೋಕಾಯುಕ್ತ ಎಸ್‌ಪಿ ಮಲ್ಲೇಶ್ ಟಿ. ಅವರ ಸೂಚನೆಯಂತೆ, ಪ್ರಕರಣದ ತನಿಖೆಯನ್ನು ಪಿಐ ನಿರಂಜನ್ ಪಾಟೀಲ್ ಅವರಿಗೆ ವಹಿಸಲಾಗಿತ್ತು. ಸಂಜೆ 5 ಗಂಟೆ ಸುಮಾರಿಗೆ ಆರೋಪಿತ ಚಂದ್ರಮಪ್ಪ ಮೊರಟಗಿ ಸೂಚನೆಯಂತೆ, ಮಧ್ಯವರ್ತಿಯಾಗಿದ್ದ ನಾಗೇಂದ್ರ ಕೃಷ್ಣ ಮಾರಸರ್ಕರ (61) ಮೂಲಕ ₹80,000 ಲಂಚದ ಹಣವನ್ನು ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಸ್ಥಳದಲ್ಲೇ ಲಂಚದ ಹಣದೊಂದಿಗೆ ಬಂಧಿಸಿದ್ದಾರೆ. ದಾಳಿಯಲ್ಲಿ ಇನ್ಸ್‌ಪೆಕ್ಟರ್‌ಗಳಾದ ಬಾಲಚಂದ್ರ ಲಕ್ಕಮ್ಮ, ಗೋವಿಂದಗೌಡ ಹಾಗೂ ಸಿಬ್ಬಂದಿಗಳಾದ ರವಿ, ರಾಜು, ಸಂತೋಷ, ಗಿರೀಶ್, ಅಭಿಜಿತ್, ಬಸವರಾಜ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.