ಲೋಕಾ ಬಲೆಗೆ ಪಪಂ ಮುಖ್ಯಾಧಿಕಾರಿ, ಸದಸ್ಯ

| Published : Jul 04 2024, 01:09 AM IST

ಸಾರಾಂಶ

ಪಪಂ ಮುಖ್ಯಾಧಿಕಾರಿ ಬೇಡಿಕೆಯಂತೆ ₹೨,೫೦,೦೦೦ಗಳಲ್ಲಿ ಮುಂಗಡವಾಗಿ ₹೬೦,೦೦೦ ಚಂದ್ರಹಾಸ ಮಧ್ಯವರ್ತಿ ಪಪಂ ಸದಸ್ಯನ ಮೂಲಕ ಬುಧವಾರ ಹಸ್ತಾಂತರ ಮಾಡುತ್ತಿದ್ದರು. ಈ ಸಮಯದಲ್ಲಿ ದಾಳಿ ನಡೆಸಿ ಹಣದ ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ.

ಹೊನ್ನಾವರ: ಆಸ್ತಿ ಇ- ಸ್ವತ್ತು ಮಾಡಿಸಲು ಲಂಚ ಸ್ವೀಕರಿಸುತ್ತಿದ್ದಾಗ ಇಲ್ಲಿನ ಪಪಂ ಮುಖ್ಯಾಧಿಕಾರಿ ಪ್ರವೀಣಕುಮಾರ ನಾಯಕ ಹಾಗೂ ಪಪಂ ಸದಸ್ಯ ವಿಜಯ ವೆಂಕಟೇಶ ಕಾಮತ್ ಇಬ್ಬರನ್ನು ಬುಧವಾರ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಬಂಧಿಸಿದ್ದಾರೆ.

ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಕುಮಾರಚಂದ್ರ ಮಾತನಾಡಿ, ಸ್ಥಳೀಯ ಚಂದ್ರಹಾಸ ಬಾಂದೇಕರ ಎಂಬವರಿಗೆ ಸೇರಿದ ಆಸ್ತಿಯನ್ನು ಇ- ಸ್ವತ್ತು ಮಾಡಿಸಲು ಪಪಂ ಮುಖ್ಯಾಧಿಕಾರಿ ₹೨,೫೦,೦೦೦ಕ್ಕೆ ಬೇಡಿಕೆ ಇಟ್ಟಿದ್ದರು. ಮಧ್ಯವರ್ತಿಯಾಗಿ ಪಪಂ ಸದಸ್ಯರೊಬ್ಬರು ಕಾರ್ಯ ನಿರ್ವಹಿಸಿದ್ದರು.

ಪಪಂ ಮುಖ್ಯಾಧಿಕಾರಿ ಬೇಡಿಕೆಯಂತೆ ₹೨,೫೦,೦೦೦ಗಳಲ್ಲಿ ಮುಂಗಡವಾಗಿ ₹೬೦,೦೦೦ ಚಂದ್ರಹಾಸ ಮಧ್ಯವರ್ತಿ ಪಪಂ ಸದಸ್ಯನ ಮೂಲಕ ಬುಧವಾರ ಹಸ್ತಾಂತರ ಮಾಡುತ್ತಿದ್ದರು. ಈ ಸಮಯದಲ್ಲಿ ದಾಳಿ ನಡೆಸಿ ಹಣದ ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಕಾರವಾದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದರು.

ದಾಳಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ವಿನಾಯಕ ಬಿಲ್ಲವ, ಪ್ರಸಾದ, ಸಿದ್ದರಾಜು, ಹೆಡ್ ಕಾನ್‌ಸ್ಟೇಬಲ್‌ಗಳಾದ ನಾರಾಯಣ ನಾಯ್ಕ, ಶ್ರೀಕೃಷ್ಣ, ಪ್ರದೀಪ್, ರಫಿಕ್ ಹಾಗೂ ಪೊಲೀಸರಾದ ಶಿವಕುಮಾರ, ಗಜೇಂದ್ರ, ಆನಂದ, ವಿಧ್ಯಾಜ್ಯೋತಿ, ಸಂಜೀವ, ಮೆಹಬೂಬ್, ಸತೀಶ್, ಮಹೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.ಕೆಲಸ ಕೊಡಿಸುವುದಾಗಿ ವಂಚನೆ

ಕಾರವಾರ: ನೌಕಾನೆಲೆಯಲ್ಲಿ ಕೆಲಸ ಕೊಡಿಸುವುದಾಗಿ ₹2 ಲಕ್ಷ ವಂಚಿಸಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.

ನಂದನಗದ್ದಾದ ರಾಘವೇಂದ್ರ ನಾಯ್ಕ ಈ ಕುರಿತು ದೂರು ನೀಡಿ, ನೌಕಾನೆಲೆಯಲ್ಲಿ ಕೆಲಸ ಕೊಡಿಸುವುದಾಗಿ ತಮ್ಮಿಂದ ₹2 ಲಕ್ಷ ಪಡೆದ ಪ್ರಸಾದ್ ಹಾಗೂ ಸಿದ್ದೇಶ್ ಎಂಬಿಬ್ಬರು ಕೆಲಸವನ್ನೂ ಕೊಡಿಸದೆ ಹಣವನ್ನೂ ಮರಳಿಸದೆ ವಂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.