ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ:
ಸಾರ್ವಜನಿಕರ ಕೆಲಸಕ್ಕೆ ಅನಗತ್ಯ ವಿಳಂಬ ಮಾಡದೇ ನಿಗದಿತ ಅವಧಿಯಲ್ಲಿ ಮುಗಿಸಿಕೊಡಬೇಕು. ಕಚೇರಿಯ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳು ಅವ್ಯವಹಾರ ನಡೆಸದೇ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಜನರ ಕೆಲಸಕ್ಕೆ ವಿಳಂಬ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಬೆಳಗಾವಿ ಲೋಕಾಯುಕ್ತ ಎಸ್ಪಿ ಹನುಮಂತರಾಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಬುಧವಾರ ಲೋಕಾಯುಕ್ತ ಕಾನೂನು ಅರಿವು ಮತ್ತು ಸಾರ್ವಜನಿಕರ ಕುಂದು ಕೊರತೆ ಪರಿಶೀಲಿಸಿ ಅಹವಾಲು ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು, ತಾಲೂಕ ಮಟ್ಟದ ಕಚೇರಿಗಳ ಮುಂದೆ ಲೋಕಾಯುಕ್ತ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಒಳಗೊಂಡ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು. ಸಾರ್ವಜನಿಕರು ಯಾವುದೇ ದೂರುಗಳನ್ನು ನೀಡಬೇಕಾದರೆ ನಮೂನೆ ನಂಬರ್-1 ಮತ್ತು 2 ರಲ್ಲಿ ಸಮಗ್ರ ಮಾಹಿತಿ ನೀಡಬೇಕು. ಅಧಿಕಾರಿಗಳು ತಮ್ಮ ಕೆಲಸದಲ್ಲಿ ವಿಳಂಬ ಮಾಡುತ್ತಿದ್ದರೆ, ವಿನಾಕಾರಣ ತೊಂದರೆ ನೀಡುತ್ತಿದ್ದರೆ ತಾವು ನೇರವಾಗಿ ಇಲ್ಲವೇ ದೂರವಾಣಿ ಮೂಲಕ ದೂರು ನೀಡಬಹುದಾಗಿದೆ ಎಂದು ಹೇಳಿದರು.ನಿಗಾವಹಿಸಲು ಸೂಚನೆ:
ಅಥಣಿ ಪುರಸಭೆಗೆ ಸಂಬಂಧಿಸಿದಂತೆ ಕಸವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬದ ಕುರಿತು ದೂರುಗಳು ಬಂದಿದ್ದು, ಮುಖ್ಯ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಬೇಕು ಎಂದು ಸೂಚಿಸಿದರು. ಇದಲ್ಲದೆ ಸ್ಮಶಾನದ ಹತ್ತಿರ ಅಕ್ರಮವಾಗಿ ನಿರ್ಮಿಸಲಾದ ಗೂಡಂಗಡಿಗಳನ್ನು ತೆರುವು ಮಾಡುವಂತೆ ದೂರು ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಶಿಸ್ತು ಕ್ರಮ ಜರುಗಿಸುವಂತೆ ಸೂಚಿಸಿದರು.ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು:ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಅನಂತಪುರ ಮತ್ತು ಖಿಳೇಗಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ದುರಸ್ತಿ ಹಾಗೂ ಶಾಲಾ ಶೌಚಾಲಯಗಳ ಕೊರತೆಯ ಕುರಿತು ದೂರುಗಳು ಬಂದಿವೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ತ್ವರಿತವಾಗಿ ಮಕ್ಕಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು. ಅಥಣಿ ತಾಲೂಕಿನಲ್ಲಿ ಮರಳು ಮತ್ತು ಕೃಷ್ಣಾ ನದಿ ತೀರದಲ್ಲಿನ ಮಣ್ಣು ಅಕ್ರಮವಾಗಿ ಸಾಗಣೆಯಾಗುವ ಬಗ್ಗೆ ದೂರುಗಳು ಬಂದಿವೆ. ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಶಿಸ್ತು ಕ್ರಮ ಜರುಗಿಸುವಂತೆ ಹೇಳಿದರು.ತಾಲೂಕು ಅಧಿಕಾರಿಗಳಿಗೆ ಸೂಚನೆಇನ್ನು, ರೈತರ ಜಮೀನುಗಳ ಸರ್ವೇ ಕಾರ್ಯಕ್ಕೆ ಅಲ್ಲಲ್ಲಿ ತಂಟೆ ತಕರಾರುಗಳಿದ್ದು, ಭೂ ಮಾಪನ ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕು. ತಾಲೂಕಿನ ವಿವಿಧ ಇಲಾಖೆಗಳಲ್ಲಿ ಮತ್ತು ಗ್ರಾಮ ಪಂಚಾಯತಿಗಳಲ್ಲಿ ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ ಖಾಸಗಿ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭ್ರಷ್ಟಾಚಾರ ನಡೆಯುತ್ತಿರುವ ದೂರುಗಳು ಬಂದಿವೆ. ಆದ್ದರಿಂದ ತಾಲೂಕ ಮಟ್ಟದ ಎಲ್ಲ ಅಧಿಕಾರಿಗಳು ತಮ್ಮ ಕೆಳವರ್ಗದ ನೌಕರರ ಮೇಲೆ ನಿಗಾ ವಹಿಸಬೇಕೆಂಬ ಎಚ್ಚರಿಕೆ ನೀಡಿದರು.ಇದೇ ವೇಳೆ ಅಥಣಿ ಪಟ್ಟಣದ ಹಳ್ಯಾಳ ರಸ್ತೆ ಬಳಿಯಿರುವ ಸ್ಮಶಾನ ಭೂಮಿಯ ಅಕ್ರಮ ಅಂಗಡಿಗಳ ಪರಿಶೀಲನೆ ನಡೆಸಿದರು. ನಂತರ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು. ಈ ಸಭೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಬಿ.ಎಸ್.ಪಾಟೀಲ, ಭರತ್ ರೆಡ್ಡಿ, ಸಿಪಿಐ ರವಿಕುಮಾರ ಧರ್ಮಟ್ಟಿ, ನಿರಂಜನ ಪಾಟೀಲ, ತಹಸೀಲ್ದಾರ್ ವಾಣಿ.ಯು ಸೇರಿ ತಾಲೂಕ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
--------------------ಕೋಟ್
ಸಭೆಯಲ್ಲಿ ಸಿವಿಲ್ ಪ್ರಕರಣಗಳಿಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿ ಬಂದಿವೆ. ಅವುಗಳನ್ನು ತಕ್ಷಣ ಬಗೆಹರಿಸುವಂತೆ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತಾಲೂಕ ಮಟ್ಟದ ಅನೇಕ ಇಲಾಖೆಗಳಲ್ಲಿ ಭ್ರಷ್ಟಾಚಾರದ ದೂರುಗಳು ಕೇಳಿ ಬರುತ್ತಿವೆ. ಗ್ರಾಮ ಮಟ್ಟದ ಅಧಿಕಾರಿಗಳು ಗ್ರಾಮಗಳಿಗೆ ಹೋಗದೆ ಅಥಣಿ ಪಟ್ಟಣದಲ್ಲಿ ಖಾಸಗಿ ಕಾರ್ಯಾಲಯ ತೆರೆದಿರುವ ದೂರು ಬಂದಿವೆ. ಆದ್ದರಿಂದ ತಾಲೂಕ ಮಟ್ಟದ ಅಧಿಕಾರಿಗಳು ತಮ್ಮ ನೌಕರರ ಬಗ್ಗೆ ನಿಗಾ ವಹಿಸುವಂತೆ ಸೂಚನೆ ನೀಡಿದ್ದೇನೆ.ಹನುಮಂತರಾಯ, ಲೋಕಾಯುಕ್ತ ಎಸ್ಪಿ ಬೆಳಗಾವಿ.