ಲೋಕಸಭೆ ಪಾಳೆಗಾರಿಕೆ ವಿರುದ್ಧದ ಚುನಾವಣೆ: ಶ್ರೇಯಸ್ ಪಟೇಲ್

| Published : Mar 22 2024, 01:10 AM IST

ಲೋಕಸಭೆ ಪಾಳೆಗಾರಿಕೆ ವಿರುದ್ಧದ ಚುನಾವಣೆ: ಶ್ರೇಯಸ್ ಪಟೇಲ್
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ಜಿಲ್ಲೆಯ ಲೋಕಸಭಾ ಚುನಾವಣೆ ದರ್ಪ, ದುರಹಂಕಾರ, ಪಾಳೆಗಾರಿಕೆ, ಕುಟುಂಬ ರಾಜಕಾರಣ ವಿರುದ್ಧ ನಡೆಯುತ್ತಿರುವ ಚುನಾವಣೆಯಾಗಿದೆ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಹೇಳಿದರು.

ಕಾಂಗ್ರೆಸ್‌ ಸದಸ್ಯರಲ್ಲಿ ಮನವಿ । ಬೂತ್‌ ಮಟ್ಟದ ಮುಖಂಡರು, ಕಾರ್ಯಕರ್ತರ ಸಭೆ । ಪಕ್ಷದ ಸಮಿತಿ ಆಯೋಜನೆ ಕನ್ನಡಪ್ರಭ ವಾರ್ತೆ ಅರಕಲಗೂಡು

ಜಿಲ್ಲೆಯ ಲೋಕಸಭಾ ಚುನಾವಣೆ ದರ್ಪ, ದುರಹಂಕಾರ, ಪಾಳೆಗಾರಿಕೆ, ಕುಟುಂಬ ರಾಜಕಾರಣ ವಿರುದ್ಧ ನಡೆಯುತ್ತಿರುವ ಚುನಾವಣೆಯಾಗಿದೆ. ಆದ್ದರಿಂದ ತಮ್ಮನ್ನು ಗೆಲ್ಲಿಸುವಂತೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಪಟ್ಟಣದ ಶ್ರೀ ಚನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಕಾಂಗ್ರೆಸ್ ಸಮಿತಿ ಗುರುವಾರ ಆಯೋಜಿಸಿದ್ದ ತಾಲೂಕಿನ ಎಲ್ಲಾ ಬೂತ್ ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ‘ನಾನು ಟಿಕೆಟ್ ಆಕಾಂಕ್ಷೆಯಾಗಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಸಾಹೇಬರ ಆದೇಶದ ಮೇರೆಗೆ ಚುನಾವಣೆಗೆ ನಿಂತಿದ್ದೇನೆ. ನಮ್ಮ ತಾತ ಪುಟ್ಟಸ್ವಾಮಿ ಗೌಡರು ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

‘ನಮ್ಮ ರಾಜಕೀಯ ಹಾದಿ ಅಷ್ಟು ಸುಗಮವಾಗಿಲ್ಲ. ಬರೀ ಕಲ್ಲು, ಮುಳ್ಳಿನ ಹಾದಿಯಾಗಿತ್ತು. ನಮ್ಮ ತಾಯಿ 2 ಬಾರಿ, ನಾನು 1 ಬಾರಿ ಸೋತಿದ್ದು, ಬಹಳಷ್ಟು ನೊಂದಿದ್ದೇನೆ. ಇಂದು 2 ನೇ ಬಾರಿ ಅಗ್ನಿ ಪರೀಕ್ಷೆಗೆ ನಿಂತಿದ್ದು, ನಿಮ್ಮೆಲ್ಲರ ಆಶೀರ್ವಾದ ಬೇಕಿದೆ. ಇಂದು ಎಲ್ಲಕಡೆ ಉತ್ಸಾಹವಿದ್ದು, ಚುನಾವಣೆವರೆಗೆ ಇದೇ ಉತ್ಸಾಹ ಇರಬೇಕು. ಇದು ಪಕ್ಷದ ಚುನಾವಣೆಯಲ್ಲ. ಕಾರ್ಯಕರ್ತರ ಚುನಾವಣೆ’ ಎಂದು ತಿಳಿಸಿದರು.

‘ಈ ಚುನಾವಣೆ ಪ್ರತಿಷ್ಠೆಯಾಗಿದ್ದು, ನಾವೆಲ್ಲ ನೆಮ್ಮದಿಯಿಂದ ಉಸಿರಾಡಬೇಕಾದರೆ ಗೆಲ್ಲಲೇಬೇಕಿದೆ. ಹಾಗಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಬೇಕು. ಚುನಾವಣೆಗೆ ಕೇವಲ 35ದಿನ ಬಾಕಿ ಇರುವುದರಿಂದ ಕಾರ್ಯಕರ್ತರು ಪಕ್ಷ ಸಂಘಟಿಸಬೇಕಿದೆ. ಒಂದು ಕುಟುಂಬಕ್ಕೆ ಪ್ರಧಾನಿಯಿಂದ ಜಿಪಂವರೆಗೂ ಅಧಿಕಾರ ನೀಡಿದ್ದೀರಿ. ಇದೊಂದು ಬಾರಿ ನನಗೆ ಅವಕಾಶ ಮಾಡಿಕೊಡಿ ಮನೆ ಸೇವಕ, ಮಗನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದು ಮನವಿ ಮಾಡಿದರು.

ಮುಖಂಡ ಶ್ರೀಧರ್ ಗೌಡ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಪುಟ್ಟಸ್ವಾಮಿಗೌಡ, ಶ್ರೀಕಂಠಯ್ಯ ಇವರಿಬ್ಬರ ಹೆಸರು ಅಜರಾಮರ. ಇಂದು ಶ್ರೇಯಸ್ ಪಟೇಲ್ ಅವರಿಗೆ ಪಕ್ಷ ಟಿಕೆಟ್ ನೀಡಿರುವುದು ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂತಂತಾಗಿದೆ. ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು. ಕಾಂಗ್ರೆಸ್ ಗೆದ್ದರೆ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗಲಿದ್ದಾರೆ ಎಂದರು.

‘ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡುವ ವೇಳೆ ಪಕ್ಷೇತರ ಅಭ್ಯರ್ಥಿಯನ್ನು ಕರೆದು ಎಂಪಿ ಟಿಕೆಟ್ ನೀಡುತ್ತೇವೆ. ನೀವು ಶ್ರೀಧರ್ ಗೌಡ ಅವರೊಂದಿಗೆ ಇರುವಂತೆ ಸಿಎಂ, ಡಿಸಿಎಂ ಹೇಳಿದ್ದರು. ಆದರೂ ಇಲ್ಲಸಲ್ಲದ ಆರೋಪ ಮಾಡಿ ಗೊಂದಲ ಸೃಷ್ಟಿಸಿದರು. ಇದರಿಂದ ಮತಗಳು ಇಬ್ಭಾಗವಾಗಿ ನನ್ನನ್ನು ಸೋಲಿಸಿ, ತಾವೂ ಸೋತು ಅವರ ಕಾರ್ಯಕರ್ತರಿಗೆ ಸಿಗದೆ ಜನರ ಕಷ್ಟಕ್ಕೂ ಸ್ಪಂದಿಸದೆ ಅಡಗಿ ಕುಳಿತಿರುವ ವ್ಯಕ್ತಿ ಪುನಃ ಕಾಂಗ್ರೆಸ್‌ಗೆ ಬರುವ ಸಂದರ್ಭ ಬಂದರೆ ಅವಕಾಶವಿಲ್ಲ’ ಎಂದು ಹೆಸರು ಹೇಳದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೃಷ್ಣಗೌಡರಿಗೆ ಕುಟುಕಿದರು.

ಮುಖಂಡರಾದ ಲಕ್ಷ್ಮಣ್, ಪಟೇಲ್ ಶಿವಪ್ಪ, ಗಣಪತಿ, ದೇವರಾಜೇಗೌಡ, ಮಹಮದ್, ರಾಮಚಂದ್ರ, ನಾಗರಾಜು, ಸಲೀಮ್, ದಿನೇಶ್, ಪ್ರಸನ್ನ, ಸುಭಾಷ್ ಷರೀಫ್, ಅಬ್ದುಲ್ ಬಾಸಿದ್ ಮತ್ತಿತರಿದ್ದರು.

ಅರಕಲಗೂಡು ಪಟ್ಟಣದ ಶ್ರೀ ಚನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲೂಕಿನ ಎಲ್ಲಾ ಬೂತ್ ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಉದ್ಘಾಟಿಸಿದರು.