ಖಾನಾಪುರ ತಹಸೀಲ್ದಾರ್ ಕಚೇರಿ ಮನೆಗಳ ಮೇಲೆ ಲೋಕಾಯುಕ್ತ ದಾಳಿ

| Published : Jan 09 2025, 12:50 AM IST

ಸಾರಾಂಶ

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ಇಲ್ಲಿನ ತಹಸೀಲ್ದಾರ್ ಪ್ರಕಾಶ ಗಾಯಕವಾಡ ಅವರ ಬಾಡಿಗೆ ಮನೆ ಹಾಗೂ ತಹಸೀಲ್ದಾರ್ ಕಚೇರಿ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಮಹತ್ವದ ದಾಖಲೆ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ಇಲ್ಲಿನ ತಹಸೀಲ್ದಾರ್ ಪ್ರಕಾಶ ಗಾಯಕವಾಡ ಅವರ ಬಾಡಿಗೆ ಮನೆ ಹಾಗೂ ತಹಸೀಲ್ದಾರ್ ಕಚೇರಿ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಮಹತ್ವದ ದಾಖಲೆ ಪರಿಶೀಲಿಸಿದರು.

ಡಿವೈಎಸ್‌ಪಿ ಭರತ ರೆಡ್ಡಿ ನೇತೃತ್ವದಲ್ಲಿ ಖಾನಾಪುರ ಹೊರವಲಯದ ಡುಕ್ಕರವಾಡಿ ರಸ್ತೆಯ ಬಾಡಿಗೆ ಮನೆ ಮತ್ತು ಡಿವೈಎಸ್‌ಪಿ ರವೀಂದ್ರ ಕುರಬಗಟ್ಟಿ ನೇತೃತ್ವದಲ್ಲಿ ಖಾನಾಪುರದ ತಹಸೀಲ್ದಾರ್ ಕಚೇರಿಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪ್ರಕಾಶ ಗಾಯಕವಾಡ ಅವರ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಮತ್ತು ಸಂಗ್ರಹ ನಡೆಯಿತು. ಈ ಸಂದರ್ಭದಲ್ಲಿ ಮಂಜುನಾಥ ವಾಲಿಕಾರ, ಸಂತೋಷ ಲಕ್ಕಮ್ಮನವರ, ರಮೇಶ ಪೂಜೇರ ಹಾಗೂ ಇತರರು ಇದ್ದರು.

ಮಹತ್ವದ ದಾಖಲೆಗಳು ಲಭ್ಯ: ದಾಳಿ ಸಂದರ್ಭದಲ್ಲಿ ಪ್ರಕಾಶ ಗಾಯಕವಾಡ ಅವರು ತಮ್ಮ ಹೆಸರಲ್ಲಿ ಕಳೆದ ವರ್ಷ ಖರೀದಿಸಿದ ಬೈಲಹೊಂಗಲ ತಾಲೂಕು ಕಲಕುಪ್ಪಿಯ ಜಮೀನು 8 ಎಕರೆ 24 ಗುಂಟೆ, ಪತ್ನಿ ಗೀತಾ ಹೆಸರಲ್ಲಿ ಖರೀದಿಸಿದ ಬೆಳಗಾವಿಯ ಕಲ್ಲೇಹೋಳದ 4 ಎಕರೆ 18 ಗುಂಟೆ ಮತ್ತು 31 ಗುಂಟೆ ಜಮೀನು, ಚಿಕ್ಕೋಡಿ ತಾಲೂಕು ರಾಂಪುರದ 4 ಎಕರೆ 9 ಗುಂಟೆ ಜಮೀನು, ತಾಲೂಕಿನ ಹಬ್ಬನಹಟ್ಟಿಯಲ್ಲಿ ಖರೀದಿಸಿದ 6 ಎಕರೆ ಜಮೀನು, ಮಗ ಶಶಾಂಕ ಹೆಸರಲ್ಲಿ ಜಾಂಬೋಟಿಯಲ್ಲಿ ಖರೀದಿಸಿದ 27 ಗುಂಟೆ ಜಮೀನು, 15 ಗುಂಟೆ ಜಮೀನುಗಳ ದಾಖಲೆಗಳನ್ನು ಪರಿಶೀಲಿಸಿದ್ದು, ಜೊತೆಗೆ ಅವರು ಹಳಿಯಾಳ, ಬೈಲಹೊಂಗಲ, ಚಿಕ್ಕೋಡಿ, ಗಂಗಾವತಿ, ಯಾದಗಿರಿ, ಕೊಪ್ಪಳ ಮತ್ತು ಖಾನಾಪುರ ತಾಲೂಕಿನ ಅನೇಕ ಕಡೆಗಳಲ್ಲಿ ತಮ್ಮ ಹೆಸರಲ್ಲಿ, ಹೆಂಡತಿ, ಮಗ ಹಾಗೂ ಸಂಬಂಧಿಕರ ಹೆಸರಲ್ಲಿ ಆಸ್ತಿ ಖರೀದಿಸಿದ ಬಗ್ಗೆ ಮತ್ತು ಚಿಕ್ಕೋಡಿಯಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಹೊಂದಿದ ಬಗ್ಗೆ ದಾಖಲೆಗಳು ಲಭ್ಯವಾಗಿವೆ ಎಂದು ಮೂಲಗಳು ತಿಳಿಸಿವೆ.