ಕಂದಾಯ ಅಧಿಕಾರಿ ಮನೆ- ಕಚೇರಿ ಮೇಲೆ ಲೋಕಾಯುಕ್ತ ದಾಳಿ

| Published : Oct 31 2023, 01:15 AM IST

ಸಾರಾಂಶ

ಲೋಕಾಯುಕ್ತ ಎಸ್ಪಿ ಎಂ.ಎನ್. ಶಶಿಧರ್ ಮತ್ತು ಹೊಸಪೇಟೆಯ ಸಿಪಿಐ ಸುರೇಶ್ ಬಾಬು ಅವರು ದಾಳಿಯ ನೇತೃತ್ವ ವಹಿಸಿದ್ದರು

ಕನ್ನಡಪ್ರಭ ವಾರ್ತೆ ಬಳ್ಳಾರಿ

ಅಕ್ರಮ ಆಸ್ತಿ ಸಂಪಾದನೆಯ ಗುಮಾನಿ ಹಿನ್ನೆಲೆಯಲ್ಲಿ ನಗರದ ಕಂದಾಯ ಅಧಿಕಾರಿ(ಆರ್‌ಐ)

ಗುಗ್ಗರಹಟ್ಟಿ ಮಂಜುನಾಥ ಎಂಬವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ, ಪರಿಶೀಲನೆ ನಡೆಸಿದರು.

ಸೋಮವಾರ ಬೆಳ್ಳಂಬೆಳಗ್ಗೆ ದಾಳಿಗಿಳಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನಗರದ ಹಳೆಯ ತಾಲೂಕು ಕಚೇರಿ ಆವರಣದಲ್ಲಿನ ಕಂದಾಯ ಕಚೇರಿ ಹಾಗೂ ಗುಗ್ಗರಹಟ್ಟಿ ಪ್ರದೇಶದಲ್ಲಿನ ಮಂಜುನಾಥ ಅವರ ನಿವಾಸದ ಮೇಲೆ ದಾಳಿ ನಡೆಸಿ, ಕಡತಗಳನ್ನು ಪರಿಶೀಲಿಸಿದರು.

ಮನೆ ದಾಳಿ ವೇಳೆ 8ಕ್ಕೂ ಹೆಚ್ಚು ಲೋಕಾಯುಕ್ತರು ಹಾಗೂ ಕಚೇರಿ ದಾಳಿ ವೇಳೆ 6 ಜನ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು. ಮಂಜುನಾಥ ಅವರ ಮನೆಯಲ್ಲಿ ಬೇನಾಮಿ ಹೆಸರಿನಲ್ಲಿ ಮಾಡಿರುವ ಅಪಾರ ಪ್ರಮಾಣದ ಆಸ್ತಿಗೆ ಸಂಬಂಧಿಸಿದಂತೆ ಕಡಿತಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು, ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಮನೆಯಲ್ಲಿ ಬೆಲೆಬಾಳುವ ಅನೇಕ ವಸ್ತುಗಳು ಸಿಕ್ಕಿವೆ. ಮನೆಯ ಮೌಲ್ಯ ಸೇರಿದಂತೆ ದಾಳಿ ವೇಳೆ ದೊರೆತಿರುವ ಕಡತಗಳನ್ನು ಅಧಿಕಾರಿಗಳು ಪರಿಶೀಲನೆ ಕೈಗೊಂಡರು ಎಂದು ತಿಳಿದುಬಂದಿದೆ.

ಕಂದಾಯ ಅಧಿಕಾರಿ ಗುಗ್ಗರಹಟ್ಟಿ ಮಂಜುನಾಥ ಅವರು ನಗರ ಸೇರಿದಂತೆ ವಿವಿಧೆಡೆ ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ. ನಗರದ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಬೇನಾಮಿ ಆಸ್ತಿಯನ್ನು ಬೇರೆಯವರಿಗೆ ಅಕ್ರಮವಾಗಿ ನೋಂದಣಿ ಮಾಡಿಕೊಡಲು ಸಹಾಯ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಬೆಳಗ್ಗೆ 6 ಗಂಟೆಗೆ ಶುರುವಾದ ದಾಳಿ ಪ್ರಕ್ರಿಯೆ ಮಧ್ಯಾಹ್ನ 2 ಗಂಟೆಯವರೆಗೆ ಮುಂದುವರಿದಿತ್ತು. ಮಧ್ಯಾಹ್ನ ಊಟದ ಬಳಿಕವೂ ಕಂದಾಯ ಅಧಿಕಾರಿಯ ಆಸ್ತಿ ಮಾಹಿತಿ ಕಲೆ ಹಾಕುವ ಪ್ರಕ್ರಿಯೆ ಮುಂದುವರಿದಿತ್ತು.

ಲೋಕಾಯುಕ್ತ ಎಸ್ಪಿ ಎಂ.ಎನ್. ಶಶಿಧರ್ ಮತ್ತು ಹೊಸಪೇಟೆಯ ಸಿಪಿಐ ಸುರೇಶ್ ಬಾಬು ಅವರು ದಾಳಿಯ ನೇತೃತ್ವ ವಹಿಸಿದ್ದರು. ಚಿಕ್ಕಬಳ್ಳಾಪುರ, ಹೊಸಪೇಟೆ ಹಾಗೂ ಬಳ್ಳಾರಿಯ ಲೋಕಾಯುಕ್ತ ಪೊಲೀಸ್ ಸಿಬ್ಬಂದಿ ದಾಳಿಯ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.