ಸಾರಾಂಶ
ಮಂಗಳವಾರ ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿರುವ ಲೋಕಾಯುಕ್ತ ಅಧಿಕಾರಿಗಳು ನಿಪ್ಪಾಣಿ ತಾಲೂಕಿನ ಬೋರಗಾಂವ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಢವಳೇಶ್ವರ ಕಚೇರಿ ಹಾಗೂ ನಿಪ್ಪಾಣಿ ನಗರದ ಸಾವಂತ್ ಕಾಲೋನಿಯ ಬಾಡಿಗೆ ಬಂಗಲೆ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ನಿಪ್ಪಾಣಿ
ಮಂಗಳವಾರ ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿರುವ ಲೋಕಾಯುಕ್ತ ಅಧಿಕಾರಿಗಳು ನಿಪ್ಪಾಣಿ ತಾಲೂಕಿನ ಬೋರಗಾಂವ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಢವಳೇಶ್ವರ ಕಚೇರಿ ಹಾಗೂ ನಿಪ್ಪಾಣಿ ನಗರದ ಸಾವಂತ್ ಕಾಲೋನಿಯ ಬಾಡಿಗೆ ಬಂಗಲೆ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.ಬೆಳಗ್ಗೆ 6 ಗಂಟೆ ಸುಮಾರಿಗೆ 2 ವಾಹನಗಳಲ್ಲಿ ಆಗಮಿಸಿದ 8 ಜನ ಅಧಿಕಾರಿಗಳ ತಂಡ ಸಂಜೆಯವರೆಗೂ ತಪಾಸಣೆ ನಡೆಸಿದರು. ತಪಾಸಣೆ ವೇಳೆ ಸುಮಾರು ₹1.55 ಲಕ್ಷ ನಗದು, ₹3 ಲಕ್ಷ ಬೆಲೆಬಾಳುವ ಚಿನ್ನ, ಬೆಳ್ಳಿ ಆಭರಣ ಹಾಗೂ ₹3 ಕೋಟಿ ಮೌಲ್ಯದ ಆಸ್ತಿಗಳ ಒಪ್ಪಂದ ಪತ್ರಗಳು ಪತ್ತೆಯಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸ್ ನಿರೀಕ್ಷಕ ರವಿಕುಮಾರ್ ಧರ್ಮಟ್ಟಿ ತಿಳಿಸಿದರು.
ಈ ಹಿಂದೆ ಗ್ರಾಮಲೆಕ್ಕಿಗ ವಿಠ್ಠಲ ಢವಳೇಶ್ವರ ಬಾಗಲಕೋಟೆ ಕಡೆಗೆ ಅಕ್ರಮವಾಗಿ ಹಣ ಸಾಗಿಸುವಾಗ ಚೆಕ್ ಪೋಸ್ಟ್ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದರು. ₹1.10 ಕೋಟಿ ನಗದು ಸಿಕ್ಕಿತ್ತು. ಇದೇ ಜಾಡುಹಿಡಿದು ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಲೋಕಾಯುಕ್ತ ಪೊಲೀಸ್ ಅಧಿಕ್ಷಕ ಹನುಮಂತರಾಯ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿಎಸ್ಪಿ ಭರತ್ ರೆಡ್ಡಿ, ಪೊಲೀಸ್ ನಿರೀಕ್ಷಕ ರವೀಂದ್ರ ಧರ್ಮಟ್ಟಿ ನೇತೃತ್ವದಲ್ಲಿ 8 ಜನ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.ಸಾರ್ವಜನಿಕರ ಆಕ್ರೋಶ: ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಠ್ಠಲ ಹಿಂದೆ ₹1 ಕೋಟಿ ಅಕ್ರಮ ಹಣ ಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ. ಈಗ ಲೋಕಾಯುಕ್ತ ದಾಳಿಗೆ ಒಳಗಾಗಿದ್ದಾನೆ. ಇಂತಹ ಭ್ರಷ್ಟ ನೌಕರನನ್ನು ಸರ್ಕಾರಿ ಸೇವೆಯಿಂದಲೇ ವಜಾ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.