ಜಿಲ್ಲಾ ಮಟ್ಟದಲ್ಲೂ ಸಹ ಲೋಕಾಯುಕ್ತ ಸಂಸ್ಥೆ ಆರಂಭಿಸುವಂತಾಗಬೇಕು. ಇದರಿಂದ ಜಿಲ್ಲಾ ಮಟ್ಟದಲ್ಲಿಯೇ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾ ಮಟ್ಟದಲ್ಲೂ ಸಹ ಲೋಕಾಯುಕ್ತ ಸಂಸ್ಥೆ ಆರಂಭಿಸುವಂತಾಗಬೇಕು. ಇದರಿಂದ ಜಿಲ್ಲಾ ಮಟ್ಟದಲ್ಲಿಯೇ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದ್ದಾರೆ.ಮಡಿಕೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಮಟ್ಟದಲ್ಲಿಯೇ ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದಾಗಿದೆ. ಆ ನಿಟ್ಟಿನಲ್ಲಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಮಾಡುವುದು ಸರ್ಕಾರದ ವಿವೇಚನೆಗೆ ಸೇರಿದೆ ಎಂದರು.ಜಿಲ್ಲೆಯಲ್ಲಿ ದಾಖಲಾಗಿದ್ದ 207 ಪ್ರಕರಣದಲ್ಲಿ 78 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರಲ್ಲಿ 20 ಮಂದಿ ದೂರುದಾರರು ವಿಚಾರಣೆಗೆ ಬರಲಿಲ್ಲ. ಉಳಿದಂತೆ 45 ಪ್ರಕರಣಗಳನ್ನು ಶುಕ್ರವಾರ ನಡೆದ ವಿಚಾರಣೆ ವೇಳೆಯಲ್ಲಿ ಇತ್ಯರ್ಥ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ 45 ಪ್ರಕರಣದಲ್ಲಿ ಎಲ್ಲರಿಗೂ ನ್ಯಾಯ ಒದಗಿಸಲು ಪ್ರಯತ್ನಿಸಲಾಗಿದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಅವರು ಹೇಳಿದರು.ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯು ಸಾಕಷ್ಟು ಸುಧಾರಣೆ ಕಂಡಿದೆ. ಇನ್ನಷ್ಟು ಸರಿಪಡಿಸಿಕೊಂಡು ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಲೋಕಾಯುಕ್ತ ಡಿವೈಎಸ್‍ಪಿ ಅವರು ದೂರು ದಾಖಲಿಸಬಹುದು. ಸಲಹೆ ಮಾರ್ಗದರ್ಶನ ಮಾಡಬಹುದು. ತೀರ್ಪು ನೀಡಲು ಬರುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಮತ್ತು ಸಿವಿಲ್ ನ್ಯಾಯಾಧೀಶರಾದ ಕಿರಣ್ ಪಾಟೀಲ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ, ಲೋಕಾಯುಕ್ತ ಎಸ್ಪಿ ಉದೇಶ್, ಕೊಡಗು ಲೋಕಾಯುಕ್ತ ಡಿವೈಎಸ್‍ಪಿ ದಿನಕರ್ ಶೆಟ್ಟಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ, ಪೌರಾಯುಕ್ತರಾದ ಎಚ್.ಆರ್.ರಮೇಶ್, ಇತರರು ಇದ್ದರು.
ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ:ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಶನಿವಾರ ನಗರದ ಮತ್ತು ನಗರದ ಹೊರವಲಯದ ಸರ್ಕಾರಿ ಕಚೇರಿಗಳು ಮತ್ತು ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಗರದ ಪ್ರಸಿದ್ಧ ಓಂಕಾರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಮತ್ತು ಸಿವಿಲ್ ನ್ಯಾಯಾಧೀಶರಾದ ಕಿರಣ್ ಪಾಟೀಲ, ಲೋಕಾಯುಕ್ತ ಎಸ್ಪಿ ಉದೇಶ್, ಕೊಡಗು ಲೋಕಾಯುಕ್ತ ಡಿವೈಎಸ್‍ಪಿ ದಿನಕರ್ ಶೆಟ್ಟಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಚುಮ್ಮಿ ದೇವಯ್ಯ, ದೇವರಾಜು ಇತರರು ಇದ್ದರು.
ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿನ ಶೌಚಾಲಯ, ಸ್ವಚ್ಛತೆ, ಔಷದಿ, ಊಟೋಪಚಾರ ನೀಡುವುದು ಸೇರಿದಂತೆ ಮತ್ತಿತರ ಬಗ್ಗೆ ಹೊರ ಹಾಗೂ ಒಳರೋಗಿಗಳಿಂದ ಮಾಹಿತಿ ಪಡೆದರು.ಆಸ್ಪತ್ರೆಯಿಂದಲೇ ಔಷಧಿ ನೀಡುತ್ತಾರೆಯೇ ಅಥವಾ ಚೀಟಿ ಬರೆದುಕೊಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ ಉಪ ಲೋಕಾಯುಕ್ತ ನ್ಯಾಯಾಧೀಶರು, ಬಿಸಿನೀರು ವ್ಯವಸ್ಥೆ, ಶುದ್ಧ ಕುಡಿಯುವ ನೀರು ಪೂರೈಕೆ, ಉಪಹಾರ ಕಲ್ಪಿಸಲಾಗುತ್ತಿದೆಯೇ ಎಂದು ಮಾಹಿತಿ ಪಡೆದರು.
ಈ ಕುರಿತು ಪ್ರತಿಕ್ರಿಯಿಸಿದ ರೋಗಿಗಳು ಆಸ್ಪತ್ರೆಯಿಂದಲೇ ಎಲ್ಲಾ ಸೌಲಭ್ಯಗಳು ದೊರೆಯುತ್ತಿದ್ದು, ಚೀಟಿಯನ್ನು ಹೊರಗಡೆ ಬರೆದುಕೊಡುತ್ತಿಲ್ಲ ಎಂದು ಹೇಳಿದರು.ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜಿಲ್ಲಾ ಆಸ್ಪತ್ರೆಯ ಸಾಮಾನ್ಯ ವಾರ್ಡ್‍ಗಳು ಹಾಗೂ ಮಹಿಳಾ ಮತ್ತು ಮಕ್ಕಳ ವಾರ್ಡಿಗೆ ಭೇಟಿ ನೀಡಿ ಪರಿಶೀಲಿಸಿದರು. ಶುಚಿತ್ವಕ್ಕೆ ಮತ್ತಷ್ಟು ಒತ್ತು ನೀಡಬೇಕು. ವೈದ್ಯರು ನಿಯಮಾನುಸಾರ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ನ್ಯಾಯಾಧೀಶರು ತಿಳಿಸಿದರು.
ಬಳಿಕ ನಗರಸಭೆ ವ್ಯಾಪ್ತಿಯ ದಾಸವಾಳ ರಸ್ತೆಯಲ್ಲಿರುವ ಉದ್ಯಾನವನಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಾಧೀಶರು ಅಲ್ಲಿನ ಉದ್ಯಾನವನದ ಹೆಸರಿನಲ್ಲಿ ನಾಮಫಲಕ ಅಳವಡಿಸಲಾಗಿದೆ. ಆದರೆ ಇಲ್ಲಿ ಉದ್ಯಾನವನಕ್ಕಿಂತ ವೈದ್ಯಕೀಯ ತ್ಯಾಜ್ಯವನ್ನು ಬಿಸಾಡಿರುವುದು ಕಂಡು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.ಉದ್ಯಾನವನದ ಬದಲಾಗಿ ವಾಹನ ಪಾರ್ಕಿಂಗ್ ಮಾಡಿಕೊಳ್ಳಲಾಗಿದೆ. ಇಲ್ಲದಿದ್ದಲ್ಲಿ ನಾಮಫಲಕವನ್ನು ತೆರವುಗೊಳುಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವೈದ್ಯಕೀಯ ತ್ಯಾಜ್ಯವನ್ನು ಬಿಸಾಡಿರುವವರ ವಿರುದ್ಧ ದೂರು ದಾಖಲಿಸುವಂತೆ ಉಪ ಲೋಕಾಯುಕ್ತ ನ್ಯಾಯಾಧೀಶರು ಆದೇಶಿಸಿದರು.ಬಳಿಕ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಾಧೀಶರು ಅಲ್ಲಿನ ರಿಜಿಸ್ಟರ್‍ಗಳ ನಿರ್ವಹಣೆ, ಪರವಾನಗಿ, ತೆರಿಗೆ ವಸೂಲಾತಿ, ವಾಹನಗಳ ನೋಂದಣಿ, ಮತ್ತಿತರ ಬಗ್ಗೆ ಮಾಹಿತಿ ಪಡೆದರು.
ನಂತರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಅಡುಗೆ ಕೋಣೆ ವೀಕ್ಷಿಸಿದರು. ಊಟೋಪಚಾರ ಬಗ್ಗೆ ಮಾಹಿತಿ ಪಡೆದರು. ವಿದ್ಯಾರ್ಥಿ ನಿಲಯದಲ್ಲಿ ಏನಾದರೂ ಸಮಸ್ಯೆ ಇದ್ದಲ್ಲಿ ಮಾಹಿತಿ ನೀಡುವಂತಾಗಬೇಕು. ತಾವು ಮಾಹಿತಿ ನೀಡಿದ್ದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.ಬಳಿಕ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ತೆರಳಿ ಅಲ್ಲಿನ ವಿದ್ಯುತ್ ಮಾರ್ಗ, ಕೊಠಡಿಯ ವಿದ್ಯುತ್ ಬಾಕ್ಸ್ ಮುಚ್ಚುವುದು, ಯಾವುದೇ ರೀತಿ ತೊಂದರೆಯಾಗದಂತೆ ಗಮನಹರಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ಗ್ರಂಥಾಲಯ ಮತ್ತಿತರ ಸೌಲಭ್ಯ ಬಗ್ಗೆ ಮಾಹಿತಿ ಪಡೆದರು. ಆಟವಾಡಲು ಮೈದಾನದ ವ್ಯವಸ್ಥೆ ಆಗಬೇಕು ಎಂದು ವಿದ್ಯಾರ್ಥಿಗಳು ಕೋರಿದರು. ಸರ್ಕಾರದ ಗಮನಕ್ಕೆ ತಂದು ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು.