ಕಲಬುರಗಿ ಮಹಾನಗರದಲ್ಲಿ ನಿಜಾಮರ ಕಾಲದಿಂದ ಇರುವ 7 ಕೆರೆಗಳಲ್ಲಿ ಆಗಿರುವ ಒತ್ತುವರಿಯನ್ನು ತೆರವುಗೊಳಿಸಿ ಜಮೀನನ್ನು ಮರಳಿ ಸರ್ಕಾರದ ಸ್ವಾಧೀನಕ್ಕೆ ಪಡೆಯಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಮಹಾನಗರದಲ್ಲಿ ನಿಜಾಮರ ಕಾಲದಿಂದ ಇರುವ 7 ಕೆರೆಗಳಲ್ಲಿ ಆಗಿರುವ ಒತ್ತುವರಿಯನ್ನು ತೆರವುಗೊಳಿಸಿ ಜಮೀನನ್ನು ಮರಳಿ ಸರ್ಕಾರದ ಸ್ವಾಧೀನಕ್ಕೆ ಪಡೆಯಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ತಿಳಿಸಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ನಂತರ ಮಾತನಾಡಿ, ಕಲಬುರಗಿ ನಗರದಲ್ಲಿನ ಕೆರೆ ಒತ್ತುವರಿ ಸಂಬಂಧ ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿಲ್ಲಿ ವಿಚಾರಣೆ ನಡೆಸಿದ್ದು, ನಿಜಾಮ ಸರ್ಕಾರದಿಂದಲೆ ಜಮೀನು ಹಂಚಿಕೆಯಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಅಧಿಕಾರಿಗಳ ಬಳಿ ಅಧಿಕೃತ ದಾಖಲೆ ಇಲ್ಲ. ಒತ್ತುವರಿ ಜಾಗದಲ್ಲಿ ಪ್ರಸ್ತುತ ಇರುವ ಜನವಸತಿ ಬಗ್ಗೆಯೂ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಎಂದರು.

ಎಲ್ಲಿ ನೋಡಿದರೂ ಕಸ, ಬೀದಿನಾಯಿ ಹಾವಳಿ:

ಹಿಂದೆ 3-4 ವರ್ಷದ ಹಿಂದೆ ಕಲಬುರಗಿಗೆ ಬಂದು ಹೋಗಿದ್ದೆ. ಇದೀಗ ನೋಡಿದರೂ ಇಲ್ಲಿ ಇನ್ನು ಕಸದ ಸಮಸ್ಯೆ ಇದೆ. ಕಸ ಸಂಗ್ರಹಣೆ ಸರಿಯಾಗಿ ನಡೆಯುತ್ತಿಲ್ಲ. ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ಸ್ವಚ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಅಧಿಕಾರಿ ವರ್ಗ ಮಾಡಬೇಕು ಎಂದರು.

ಕಲಬುರಗಿ ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಲೋಕಾಯುಕ್ತ ಸಂಸ್ಥೆಯ 8 ತಂಡಗಳು ಜೇವರ್ಗಿ, ಆಳಂದ, ಕಲಬುರಗಿ ತಹಸೀಲ್ದಾರ್‌, ಉಪ ನೋಂದಣಾಧಿಕಾರಿ ಕಚೇರಿ, ಬಿಇಒ ಕಚೇರಿ, ಅಗ್ನಿಶಾಮಕ ಠಾಣೆ, ತಾಲೂಕ ಪಂಚಾಯತ್ ಕಚೇರಿ, ಡಿಸಿ ಕಚೇರಿ, ಆರ್‌ಟಿಒ ಚೆಕ್‌ಪೋಸ್ಟ್ ಹೀಗೆ ಇಬ್ಬರು ನ್ಯಾಯಾಂಗ ಅಧಿಕಾರಿಗಳು ಸೇರಿ ಲೋಕಾಯುಕ್ತ ಎಸ್‌ಪಿ., ಡಿವೈಎಸ್‌ಪಿ, ಪಿಐ, ಸಿಬ್ಬಂದಿ ವರ್ಗ ತಪಾಸಣೆ ಮಾಡಿ ಅನೇಕ ನ್ಯೂನತೆಗಳು, ಅಕ್ರಮಗಳ ಕುರಿತು ಪತ್ತೆ ಹಚ್ಚಲಾಗಿದೆ ಎಂದರು.

2022ರ ಜೂನ್‌ನಲ್ಲಿ ತಾವು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭ 8 ಸಾವಿರ ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದವು. ಇದುವರೆಗೆ ಹೊಸದಾಗಿ 44 ಸಾವಿರ ಪ್ರಕರಣ ದಾಖಲಿಸಿ ಇದರಲ್ಲಿ 23 ಸಾವಿರ ಪ್ರಕರಣ ವಿಲೇವಾರಿ ಮಾಡಲಾಗಿದೆ ಎಂದರು.

ಕರ್ನಾಟಕ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೀಷ್ ಖರ್ಬಿಕರ್, ಕಾರ್ಯದರ್ಶಿ ಶ್ರೀನಾಥ್ ಕೆ., ಅಪರ ನಿಬಂಧಕ (ವಿಚಾರಣೆ) ವಿಜಯಾನಂದ, ಕಲಬುರಗಿ ಲೋಕಾಯುಕ್ತ ಎಸ್.ಪಿ. ಸಿದ್ದರಾಜು, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತರಾದ ಸಾಹಿತ್ಯ, ಪ್ರಭುರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಆರ್‌ಒ ಪ್ಲ್ಯಾಂಟ್ ಸರಿಪಡಿಸಿ: ನ್ಯಾ.ಪಾಟೀಲ

ಕಲಬುರಗಿ ಜಿಲ್ಲೆಯಾದ್ಯಂತ 2011-12ರಲ್ಲಿ ತಲಾ 10 ಲಕ್ಷ ರು. ವೆಚ್ಚದಲ್ಲಿ ಗ್ರಾಮೀಣದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ 510 ನೀರು ಶುದ್ಧಿಕರಣ ಘಟಕ ಸ್ಥಾಪಿಸಲಾಗಿದ್ರು, ಇದರಲ್ಲಿ ಪ್ರಸ್ತುತ ಬಳಕೆಯಲ್ಲಿ 132 ಮಾತ್ರ ಇವೆ. 336 ಕಾರ್ಯಚರಣೆ ಇಲ್ಲದೆ ಸ್ಥಗಿತಗೊಂಡಿವೆ. ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದೆಯಾದರೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ನಿರ್ವಹಣೆ ಇಲ್ಲದೆ ಸೊರಗಿವೆ. ಈ ಬಗ್ಗೆ ಲೋಕಾಯುಕ್ತ ಸಂಸ್ಥೆ ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ಸಹ ಮಾಡಲಿದೆ ಎಂದು ನ್ಯಾ.ಬಿ.ಎಸ್.ಪಾಟೀಲ ತಿಳಿಸಿದರು.