ಕೊಪ್ಪಳ: ನಗರದ ಕಿಮ್ಸ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ಕುರಿತು ಕನ್ನಡಪ್ರಭ ಪ್ರಕಟಿಸಿದ ವಿಶೇಷ ವರದಿಯನ್ನಾಧರಿಸಿ ಗುರುವಾರ ಲೋಕಾಯುಕ್ತ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಮಕ್ಕಳ ವಾರ್ಡ್‌ನಲ್ಲಿ ಫ್ಯಾನ್ ರಿಪೇರಿ ಇದ್ದ ಪರಿಣಾಮ ಪೋಷಕರು ಮನೆಯಿಂದ ಫ್ಯಾನ್ ತಂದು ಮಕ್ಕಳಿಗೆ ಗಾಳಿಯ ವ್ಯವಸ್ಥೆ ಮಾಡಿದ್ದರು. ದೊಡ್ಡವರೇ ಈ ಧಗೆ ತಡೆದುಕೊಳ್ಳಲು ಆಗುತ್ತಿಲ್ಲ. ಇನ್ನು ಚಿಕ್ಕಮಕ್ಕಳ ಪರಿಸ್ಥಿತಿ ಹೇಗಾಗಬೇಡ. ವಾರ್ಡ್‌ನಲ್ಲಿರುವ ಫ್ಯಾನ್ ದುರಸ್ತಿ ಇವೆ ಎಂಬ ವಿಷಯ ಗೊತ್ತಿದ್ದರೂ ಕಿಮ್ಸ್ ಅಧಿಕಾರಿಗಳು ಅವುಗಳನ್ನು ಸರಿಪಡಿಸುವ ಗೋಜಿಗೆ ಹೋಗಿರಲಿಲ್ಲ. ಮನೆಯಿಂದ ಫ್ಯಾನ್ ತಂದು ಮಕ್ಕಳಿಗೆ ಗಾಳಿ ವ್ಯವಸ್ಥೆ ಮಾಡಿದ ಕುರಿತಂತೆ ಸಚಿತ್ರ ಸಮೇತ ಕನ್ನಡಪ್ರಭದಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕಿಮ್ಸ್ ಅಧಿಕಾರಿಗಳು ತಕ್ಷಣವೇ ಫ್ಯಾನ್ ದುರಸ್ತಿ ಮಾಡಿಸಿದ್ದು,ಕಿಮ್ಸ್‌ನ ಈ ನಿರ್ಲಕ್ಷ್ಯ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.ಕಿಮ್ಸ್‌ನ ಈ ಯಡವಟ್ಟು ಕುರಿತಂತೆ ಕನ್ನಡಪ್ರಭವದಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಗುರುವಾರ ಲೋಕಾಯುಕ್ತ ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲೋಕಾಯುಕ್ತ ಡಿವೈಎಸ್ಪಿ ಲೋಕೇಶ್, ಪಿಐ ಚಂದ್ರಪ್ಪ, ಶೈಲಾ ಪ್ಯಾಟಿಶೆಟ್ಟರ್ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳ ತಂಡ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೋಗಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಒದಗಿಸಬೇಕಾದ ಸೌಲಭ್ಯಗಳ ಕುರಿತಂತೆ ಪರಿಶೀಲನೆ ನಡೆಸಿದರು. ಅಲ್ಲದೆ, ಎಸಿ, ಫ್ಯಾನ್ ಕುರಿತಂತೆ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಿಮ್ಸ್‌ನ ಅಧಿಕಾರಿಗಳು ಈಗ ಫ್ಯಾನ್ ಅಳವಡಿಸಲಾಗಿದೆ. ಉಳಿದಂತೆ ಇನ್ನುಳಿದ ಸೌಲಭ್ಯ ಎಲ್ಲ ಕೆಲಸ ಎರಡು ದಿನಗಳ ಒಳಗಾಗಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ನಿರ್ಲಕ್ಷ್ಯ,ಅಸಡ್ಡೆಯಿಂದ ಸದಾ ಯಡವಟ್ಟು ಮಾಡಿ, ರೋಗಿಗಳಿಗೆ ಸರಿಯಾಗಿ ಸ್ಪಂದಿಸದ, ಸೌಲಭ್ಯ ಒದಗಿಸದ ಕಿಮ್ಸ್ ಇನ್ನಾದರೂ ಬುದ್ದಿ ಕಲಿಯಬೇಕಿದೆ. ರೋಗಿಗಳಿಗೆ ನೀಡಬೇಕಾದ ಸೌಲಭ್ಯ ಕೊರತೆಯಾಗದಂತೆ ನೋಡಿಕೊಳ್ಳುವ ಮೂಲಕ ತನ್ನ ಜವಾಬ್ದಾರಿ ಕಿಮ್ಸ್ ಮಾಡಬೇಕಿದೆ. ಇನ್ನಾದರೂ ಕಿಮ್ಸ್ ಈ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಾ ಎಂಬುದನ್ನು ಕಾಲವೇ ಉತ್ತರಿಸಲಿದೆ.