ಮೈಸೂರು ಪಾಲಿಕೆ ಆಯುಕ್ತರ ಮನೆ ಮೇಲೆ ಲೋಕಾಯುಕ್ತ ಪೊಲೀಸ್ ದಾಳಿ

| Published : Nov 13 2024, 12:07 AM IST

ಮೈಸೂರು ಪಾಲಿಕೆ ಆಯುಕ್ತರ ಮನೆ ಮೇಲೆ ಲೋಕಾಯುಕ್ತ ಪೊಲೀಸ್ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಗೇಶ್‌ರವರು ಈ ಹಿಂದೆ ಚನ್ನಪಟ್ಟಣ ನಗರಸಭೆ ಪೌರಾಯುಕ್ತರಾಗಿ ಹಾಗೂ ಶ್ರೀರಂಗಪಟ್ಟಣ ತಾಲೂಕು ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-೫ರ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-೫ರ ಆಯುಕ್ತ ಡಿ.ನಾಗೇಶ್ ಕಚೇರಿ ಹಾಗೂ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣಾ ಬಳಿಯ ಡಾಲರ್ಸ್‌ ಕಾಲೋನಿಯಲ್ಲಿ ನಿರ್ಮಿಸುತ್ತಿರುವ ಅಪಾರ್ಟ್‌ಮೆಂಟ್ ಹಾಗೂ ಬಾಡಿಗೆ ಮನೆ, ಶಿವಮೊಗ್ಗ ಹಾಗೂ ಬೆಂಗಳೂರಿನ ನಿವಾಸ ಸೇರಿದಂತೆ ಮೈಸೂರಿನ ವಲಯ ಕಚೇರಿಯ ಮೇಲೂ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಆಸ್ತಿಗೆ ಸಂಬಂಧಿಸಿದ ದಾಖಲೆ ವಶಪಡಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ನಾಗೇಶ್‌ರವರು ಈ ಹಿಂದೆ ಚನ್ನಪಟ್ಟಣ ನಗರಸಭೆ ಪೌರಾಯುಕ್ತರಾಗಿ ಹಾಗೂ ಶ್ರೀರಂಗಪಟ್ಟಣ ತಾಲೂಕು ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-೫ರ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಕ್ರಮ ಕಟ್ಟಡ ನಿರ್ಮಾಣ: ಪುರಸಭೆಯಿಂದ ನೋಟಿಸ್

ನಕ್ಷೆ ಅನುಮೋದನೆ ಉಲ್ಲಂಘಿಸಿ, ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವುದನ್ನು ತೆರವುಗೊಳಿಸುವಂತೆ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-೫ರ ಆಯುಕ್ತ ಡಿ.ನಾಗೇಶ್ ಅವರಿಗೆ ಪುರಸಭೆ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿರುವುದು ಇದೇ ವೇಳೆ ಬೆಳಕಿಗೆ ಬಂದಿದೆ.

ಪಟ್ಟಣ ಪುರಸಭೆ ವ್ಯಾಪ್ತಿಯ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿ ಡಿ.ನಾಗೇಶ್ ಖಾತೆ ಸಂಖ್ಯೆ ಎಸ್-೩೦೭೨/೫೦೭೨/೨ ರಲ್ಲಿ ಕಟ್ಟಡ ನಿರ್ಮಿಸಲು ಪರವಾನಗಿ ಪಡೆದಿದ್ದಾರೆ. ಆದರೆ, ನಕ್ಷೆಯಲ್ಲಿರುವಂತೆ ನಿಯಮಾನುಸಾರ ಕಟ್ಟಡ ನಿರ್ಮಾಣ ಮಾಡದೆ ಅದನ್ನು ಉಲ್ಲಂಘಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವುದು ಕಂಡುಬಂದಿದೆ.

ಈ ಹಿಂದೆ ಶ್ರೀರಂಗಪಟ್ಟಣ ತಹಸೀಲ್ದಾರ್ ಆಗಿದ್ದ ಡಿ. ನಾಗೇಶ್ ಅನುಮೋದಿತ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಆರ್‌ಟಿಐ ಕಾರ್ಯಕರ್ತ ನಾಗೇಂದ್ರ ಅವರು ಸಲ್ಲಿಸಿದ ದೂರಿನನ್ವಯ ಪುರಸಭೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಕಟ್ಟಡ ಮಾಲೀಕರು ನಿಯಮಬಾಹೀರವಾಗಿ ಕಟ್ಟಡ ನಿರ್ಮಿಸುತ್ತಿರುವುದು ಕಂಡುಬಂದಿದ್ದರಿಂದ ನೋಟಿಸ್ ತಲುಪಿದ ತಕ್ಷಣವೇ ಕಟ್ಟಡ ಕಾಮಗಾರಿ ಕೆಲಸವನ್ನು ಸ್ಥಗಿತಗೊಳಿಸಿ, ಅನುಮೋದಿನ ನಕ್ಷೆಗೂ ಹೆಚ್ಚುವರಿಯಾಗಿ ನಿರ್ಮಿಸುತ್ತಿರುವ ಕಟ್ಟಡದ ಭಾಗಗಳನ್ನು ತೆರವುಪಡಿಸಿ ಭಾವಚಿತ್ರ ಸಹಿತ ಕಚೇರಿಗೆ ಮಾಹಿತಿ ನೀಡುವುದು. ತಪ್ಪಿದಲ್ಲಿ ಕರ್ನಾಟಕ ಪೌರಸಭೆಗಳ ಅಧಿನಿಯಮ ೧೯೬೪ ರಡಿಯಲ್ಲಿ ನಿಯಮಾನುಸಾರ ಮುಂದಿನ ಕ್ರಮ ವಹಿಸುವುದಾಗಿ ನೋಟಿಸ್ ನೀಡಿದ್ದರು. ಈವರೆಗೆ ಮೂರ್ನಾಲ್ಕು ನೋಟಿಸ್ ಜಾರಿಯಾಗಿದ್ದರೂ ಯಾವುದೇ ನೋಟಿಸ್‌ಗೂ ಡಿ.ನಾಗೇಶ್ ಸೊಪ್ಪು ಹಾಕಿಲ್ಲವೆಂದು ತಿಳಿದುಬಂದಿದೆ.

ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಪ್ರತಿಕ್ರಿಯಿಸಿ, ವಸತಿ ಉದ್ದೇಶಿತ ನೆಲ, ಮೊದಲನೇ ಮತ್ತು ಎರಡನೇ ಅಂತಸ್ತು ವಾಸದ ಮನೆಯನ್ನು ನಿರ್ಮಿಸಲು ಪರವಾನಗಿ ನೀಡಲಾಗಿದೆ. ಆದರೆ ಮೂರು, ನಾಲ್ಕು ಮತ್ತು ಐದನೇ ಅಂತಸ್ತನ್ನು ನಿರ್ಮಿಸಿರುವುದು ಕಂಡುಬಂದಿದೆ. ಈಗಾಗಲೇ ಕಟ್ಟಡದ ಮಾಲೀಕರಿಗೆ ಪುರಸಭೆಯಿಂದ ಮೂರ್ನಾಲ್ಕು ನೋಟಿಸ್ ಜಾರಿಮಾಡಿ, ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುತ್ತಿರುವ ಮೂರು, ನಾಲ್ಕು ಮತ್ತು ಐದನೇ ಅಂತಸ್ತಿನ ಕಟ್ಟಡದ ಭಾಗಗಳನ್ನು ೩೦ ದಿನಗಳ ಒಳಗಾಗಿ ಸ್ವಂತ ಖರ್ಚು ಹಾಗೂ ಸ್ವಂತ ಜವಾಬ್ದಾರಿಯಲ್ಲಿ ತೆರವು ಮಾಡುವಂತೆ ಪುರಸಭೆ ಕಾಯ್ದೆ ೧೯೬೪ ಕಲಂ ೧೮೭(೯)(ಕ) ಮೇರೆಗೆ ತಾತ್ಕಾಲಿಕ ಆಜ್ಞೆಯನ್ನು ಹೊರಡಿಸಲಾಗಿದೆ ಎಂದು ಕನ್ನಡಪ್ರಭ ಪತ್ರಿಕೆಗೆ ತಿಳಿಸಿದ್ದಾರೆ.

ಅನುಮೋದಿತ ನಕ್ಷೆ ಪ್ರಕಾರ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಕೆಲವೊಂದು ಮಾರ್ಪಾಡುಗಳನ್ನು ಮಾಡಿ ಕಟ್ಟಡ ನಿರ್ಮಿಸಲಾಗುತ್ತಿದೆ. ಆದರೆ ಕಾಮಗಾರಿ ಪ್ರಾರಂಭಿಸಿದ ಪ್ರಥಮ ಹಂತದಲ್ಲಿ ಪುರಸಭೆಯಿಂದ ಯಾವುದೇ ನೋಟಿಸ್ ನೀಡದೆ, ಈಗ ಏಕಾಏಕಿ ತರಾತುರಿಯಲ್ಲಿ ನೋಟಿಸ್ ನೀಡಲಾಗಿದೆ. ಕಟ್ಟಡವು ಈಗಾಗಲೇ ಭಾಗಶಃ ಪೂರ್ಣಗೊಂಡಿದ್ದು, ಪೌರಸಭೆಗಳ ಅಧಿನಿಯಮ ೧೯೬೪ರ ಕಲಂ ೧೦೭ರಂತೆ ಕಟ್ಟಡದ ಉಲ್ಲಂಘನೆಯ ಭಾಗಗಳಿಗೆ ಅಥವಾ ಕಟ್ಟಡವು ಪೂರ್ಣಗೊಂಡ ನಂತರ ದುಪ್ಪಟ್ಟು ಆಸ್ತಿ ತೆರಿಗೆಯನ್ನು ಪಾವತಿಸುವುದಾಗಿ ಕಟ್ಟಡ ಮಾಲೀಕ ಡಿ. ನಾಗೇಶ್ ಪುರಸಭೆ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.