ಸಾರಾಂಶ
ಆರ್.ಡಿ.ಪಿ.ಆರ್ ಇಲಾಖೆಗೆ ಸಂಬಂಧಿಸಿ ೩ ಅರ್ಜಿಗಳು, ಪುರಸಭೆಗೆ ಸಂಬಂಧಿಸಿದಂತೆ ೫ ಅರ್ಜಿಗಳು, ಕಂದಾಯ ಇಲಾಖೆಗೆ ಸೇರಿದ ೭ ಅರ್ಜಿಗಳು, ಭೂ ಮಾಪನ ಇಲಾಖೆಯ ಎಡಿಎಲ್ ಆರ್ ಗೆ ಸಂಬಂಧಿಸಿದ ೧ ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಿಸಿದ ೧ ಅರ್ಜಿ ಸಲ್ಲಿಕೆಯಾದವು.
ಕನ್ನಡಪ್ರಭ ವಾರ್ತೆ ವಿಜಯಪುರ
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಪವನ್ ನೆಜ್ಜೂರ್ ನೇತೃತ್ವದಲ್ಲಿ ಜನಸಂಪರ್ಕ ಸಭೆ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಭೆ ನಡೆಯಿತು. ಸಾರ್ವಜನಿಕರಿಂದ ಒಟ್ಟು ೧೮ ಅರ್ಜಿಗಳನ್ನು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು, ಪುರಸಭೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ದೂರು ಅರ್ಜಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡರು. ನಂತರ ಪ್ರವಾಸಿಮಂದಿರಕ್ಕೆ ತಹಸೀಲ್ದಾರ್ ಶಿವರಾಜ್ ರ ಜೊತೆ ಅರ್ಜಿದಾರರ ದೂರುಗಳ ಬಗ್ಗೆ ಮಾಹಿತಿ ಪಡೆದರು. ನಿಗದಿತ ಸಮಯದಲ್ಲಿ ಅರ್ಜಿದಾರರ ಅಹವಾಲುಗಳನ್ನು ನಿಯಮಾನುಸಾರ ಇತ್ಯರ್ಥ ಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಆರ್.ಡಿ.ಪಿ.ಆರ್ ಇಲಾಖೆಗೆ ಸಂಬಂಧಿಸಿ ೩ ಅರ್ಜಿಗಳು, ಪುರಸಭೆಗೆ ಸಂಬಂಧಿಸಿದಂತೆ ೫ ಅರ್ಜಿಗಳು, ಕಂದಾಯ ಇಲಾಖೆಗೆ ಸೇರಿದ ೭ ಅರ್ಜಿಗಳು, ಭೂ ಮಾಪನ ಇಲಾಖೆಯ ಎಡಿಎಲ್ ಆರ್ ಗೆ ಸಂಬಂಧಿಸಿದ ೧ ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಿಸಿದ ೧ ಅರ್ಜಿ ಸಲ್ಲಿಕೆಯಾದವು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಪವನ್ ನೆಜ್ಜೂರ್ ಮಾತನಾಡಿ, ಯಾವುದೇ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಿಕೊಡುವುದಕ್ಕೆ ವಿನಾಕಾರಣ ವಿಳಂಬ ಮಾಡುತ್ತಿದ್ದರೆ, ಲಂಚ ಕೇಳಿದರೆ ಸಾರ್ವಜನಿಕರು ನೇರವಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ಕೊಡಬಹುದು. ಅಧಿಕಾರಿಗಳು ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸದೇ ನಿಗದಿತ ಸಮಯದಲ್ಲಿ ಅವರ ಕೆಲಸ ಮಾಡಿಕೊಡಬೇಕು. ಭ್ರಷ್ಟಾಚಾರಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಸಾರ್ವಜನಿಕರಿಂದ ದೂರುಗಳು ಬಂದರೆ ನಿರ್ಧಾಕ್ಷಿಣ್ಯವಾಗಿ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಲೋಕಾಯುಕ್ತ ಡಿಎಸ್ಪಿ ವೆಂಕಟೇಶ್, ಗಿರೀಶ್ ಪಿ.ರೋಡಕರ್, ಇನ್ಸ್ ಪೆಕ್ಟರ್ ಗಳಾದ ಚಂದ್ರಕಾಂತ್, ನಂದಕುಮಾರ್, ವೆಂಕಟೇಶ್, ರಮೇಶ್,ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್ ಕುಮಾರ್, ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಸತ್ಯನಾರಾಯಣ, ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿಗಳು ಇದ್ದರು.