ಸಾರಾಂಶ
ಲೋಕಾಯುಕ್ತ ಪೊಲೀಸರಿಗೆ ಒಂದು ನಿವೇಶನ, ಒಂದು ವಾಣಿಜ್ಯ ಮಳಿಗೆ, ಮೂರು ವಾಸದ ಮನೆ, 3.17 ಎಕರೆ ಕೃಷಿ ಜಮೀನು ಸೇರಿದಂತೆ ₹1.75 ಕೋಟಿ ಮೌಲ್ಯದ ಸ್ಥಿರಾಸ್ತಿಯ ದಾಖಲೆಗಳು ಸಿಕ್ಕಿವೆ
ಗದಗ: ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪದ ಮೇಲೆ ಗದಗ ಜಿಪಂ ಎಂಜಿನಿಯರಿಂಗ್ ವಿಭಾಗದ ದ್ವಿತೀಯ ದರ್ಜೆ ಸಹಾಯಕ (ಎಸ್.ಡಿ.ಸಿ) ಲಕ್ಷ್ಮಣ ಕೊನೆರಪ್ಪ ಕರ್ಣಿ ಮನೆ, ಸೇರಿದಂತೆ ಐದು ಸ್ಥಳಗಳ ಮೇಲೆ ಮಂಗಳವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಒಟ್ಟು ₹ 2 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಮತ್ತು ಕಾಗದ ಪತ್ರ ವಶಕ್ಕೆ ಪಡೆದಿದ್ದಾರೆ.
ಕರ್ಣಿ ಅವರ ಗದಗ ನಗರದ ಆರ್.ಕೆ. ಬಡಾವಣೆಯಲ್ಲಿರುವ ಮನೆ ಸೇರಿದಂತೆ ಗಜೇಂದ್ರಗಡ, ಹಾವೇರಿಯಲ್ಲಿರುವ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರಿಗೆ ಒಂದು ನಿವೇಶನ, ಒಂದು ವಾಣಿಜ್ಯ ಮಳಿಗೆ, ಮೂರು ವಾಸದ ಮನೆ, 3.17 ಎಕರೆ ಕೃಷಿ ಜಮೀನು ಸೇರಿದಂತೆ ₹1.75 ಕೋಟಿ ಮೌಲ್ಯದ ಸ್ಥಿರಾಸ್ತಿಯ ದಾಖಲೆಗಳು ಸಿಕ್ಕಿವೆ. ಜತೆಗೆ ₹ 3.40 ಲಕ್ಷ ನಗದು, ₹ 21.91 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳು ಸೇರಿದಂತೆ ಒಟ್ಟು ₹ 26.31 ಲಕ್ಷ ಮೌಲ್ಯದ ಚರಾಸ್ತಿ ಸಿಕ್ಕಿವೆ.
ಕರ್ನಾಟಕ ಲೋಕಾಯುಕ್ತ ಗದಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿಯ ಲೋಕಾಯುಕ್ತ ಎಸ್‌ಪಿ ಹನುಮಂತರಾಯ, ಗದಗ ಡಿವೈಎಸ್‌ಪಿ ವಿಜಯ್ ಬಿರಾದಾರ, ಪಿಎಸ್ಐ ಎಸ್.ಎಸ್. ತೇಲಿ, ಪಿ.ಜಿ. ಕಟಗಿ ಮತ್ತು ತಂಡದವರು ದಾಳಿಯಲ್ಲಿ ಭಾಗವಹಿಸಿದ್ದರು.