ಮಡಿಕೇರಿ ಲೋಕೋಪಯೋಗಿ ಕಚೇರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಗಿರೀಶ್‌ ಅವರ ವಸತಿಗೃಹ ಹಾಗೂ ಮೈಸೂರಿನ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಮಡಿಕೇರಿ: ಮಡಿಕೇರಿ ಲೋಕೋಪಯೋಗಿ ಕಚೇರಿ ಸಹಾಯಕ‌ ಕಾರ್ಯಪಾಲಕ ಎಂಜಿನಿಯರ್ (ಎಇಇ) ಗಿರೀಶ್ ಅವರ ವಸತಿ ಗೃಹ ಹಾಗೂ ಮೈಸೂರಿನ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳ್ಳಂ ಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ‌ನಡೆಸಿದ್ದಾರೆ‌.ಇದರೊಂದಿಗೆ ಮೈಸೂರಿನ ಹೂಟಗಳ್ಳಿ ನಗರಸಭೆಯ ಕಂದಾಯ ನಿರೀಕ್ಷಕ ರಾಮಸ್ವಾಮಿ ಅವರ ತಿ.‌ನರಸೀಪುರದ ನಿವಾಸದ ಮೇಲೂ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಏಕಕಾಲಕ್ಕೆ ಪ್ರತ್ಯೇಕ ಮೂರು ತಂಡವಾಗಿ ದಾಳಿ ನಡೆಸಲಾಗಿದೆ. ಮಡಿಕೇರಿ‌ ಕಚೇರಿ, ಕುಶಾಲನಗರ, ಮೈಸೂರಿನ ಮನೆಗಳ‌ ಮೇಲೆ ದಾಳಿ ನಡೆಸಲಾಗಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿರುವ ದೂರಿನ ಹಿನ್ನೆಲೆ, ಮೈಸೂರು ವಿಭಾಗದ ಲೋಕಾಯುಕ್ತ ಎಸ್.ಪಿ.ಉದೇಶ್, ಲೋಕಾಯುಕ್ತ ಡಿವೈಎಸ್‌ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ಮೈಸೂರಿನಲ್ಲಿ ದಾಳಿ ನಡೆಸಲಾಗಿದೆ. ಮಡಿಕೇರಿಯಲ್ಲಿ ಲೋಕಾಯುಕ್ತ ಸಬ್ ಇನ್ಸ್‌ಪೆಕ್ಟರ್ ವೀಣಾ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.ಅಗತ್ಯ ದಾಖಲಾತಿಗಳು ಮತ್ತು ಕಡತಗಳನ್ನು ಪರಿಶೀಲಿಸಿರುವ ಅಧಿಕಾರಿಗಳ ತಂಡ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪ ಎದುರಿಸುತ್ತಿರುವ ಹಿನ್ನೆಲೆ ಎಲ್ಲಾ ಕಡೆಯಲ್ಲೂ ಲೋಕಾಯುಕ್ತರು ಸಂಪೂರ್ಣ ಶೋಧ ನಡೆಸಿದ್ದಾರೆ.ಈ ಸಂದರ್ಭ ಕೆಲ ಪ್ರಮುಖ ದಾಖಲಾತಿಗಳು ದೊರೆತಿವೆ ಎನ್ನಲಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ.