ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಮಡಿಕೇರಿ ನಗರಸಭೆಯ ಪೌರಾಯುಕ್ತ ರಮೇಶ್ ಅವರ ಎರಡು ನಿವಾಸ ಹಾಗೂ ಕಚೇರಿ ಮೇಲೆ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.

ಮಡಿಕೇರಿ: ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಮಡಿಕೇರಿ ನಗರಸಭೆಯ ಪೌರಾಯುಕ್ತ ರಮೇಶ್ ಅವರ ಎರಡು ನಿವಾಸ ಹಾಗೂ ಕಚೇರಿ ಮೇಲೆ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.ಬೆಳಗ್ಗೆ ಮಡಿಕೇರಿ ನಗರಸಭಾ ಕಚೇರಿಯಲ್ಲಿ ಶೋಧ ನಡೆಸಿದ ಅಧಿಕಾರಿಗಳು, ಬಳಿಕ ದಾಸವಾಳದಲ್ಲಿರುವ ಪೌರಾಯುಕ್ತ ರಮೇಶ್ ಅವರ ಸರ್ಕಾರಿ ವಸತಿ ಗೃಹ ಹಾಗೂ ಕರ್ಣಂಗೇರಿಯಲ್ಲಿರುವ ಮನೆಯಲ್ಲೂ ದಾಳಿ ಮಾಡಿದ್ದಾರೆ. ದಾಳಿಯ ಸಂದರ್ಭ ವಿವಿಧ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಬೆಳಗ್ಗೆ ರಮೇಶ್ ತಮ್ಮ ವಸತಿ ಗೃಹದಿಂದ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸಂದರ್ಭ ವೇಳೆ ಬಸಪ್ಪ ಶಿಶು ವಿಹಾರದ ಕಟ್ಟಡ ಸಮೀಪದಲ್ಲಿ ಎದುರಾದ ಲೋಕಾಯುಕ್ತ ಅಧಿಕಾರಿಗಳು ರಮೇಶ್ ಅವರನ್ನು ಅಡ್ಡಗಟ್ಟಿ ವಿಚಾರಣೆಗಾಗಿ ತಮ್ಮ ನಿವಾಸಕ್ಕೆ ಕರೆ ತಂದರು. ಮನೆಯಲ್ಲಿ ಬೆಳಗ್ಗಿನಿಂದ ಸಂಜೆ ವರೆಗೂ ಸುದೀರ್ಘವಾಗಿ ವಿಚಾರಣೆ ನಡೆಸಿದರು.

ಲೋಕಾಯುಕ್ತ ಡಿವೈಎಸ್‌ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆದಿದೆ. ಬೆಂಗಳೂರಿನಿಂದ 7 ಮಂದಿ ಅಧಿಕಾರಿಗಳು, ಮಡಿಕೇರಿ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು ಎನ್ನಲಾಗಿದೆ.