ಉಡುಪಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌.ಟಿ.ಓ.) ಲಕ್ಷ್ಮೀನಾರಾಯಣ ಪಿ ನಾಯ್ಕ್ ಮನೆ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಲಕ್ಷಾಂತರ ರು. ನಗದು ಹಣವನ್ನು ಪತ್ತೆ ಮಾಡಿದ್ದಾರೆ. ‌

ಉಡುಪಿ: ಉಡುಪಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌.ಟಿ.ಓ.) ಲಕ್ಷ್ಮೀನಾರಾಯಣ ಪಿ ನಾಯ್ಕ್ ಮನೆ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಲಕ್ಷಾಂತರ ರು. ನಗದು ಹಣವನ್ನು ಪತ್ತೆ ಮಾಡಿದ್ದಾರೆ. ‌ಅವರ ಮೇಲೆ ಭ್ರಷ್ಟಾಚಾರದ ಆರೋಪ ಇದೆ.ಉಡುಪಿ ನಗರದ ಕಿನ್ನಿಮುಲ್ಕಿಯಲ್ಲಿರುವ ಅವರ ಫ್ಲ್ಯಾಟ್‌ಗೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಮಣಿಪಾಲದಲ್ಲಿರುವ ಅವರ ಕಚೇರಿ, ಉ.ಕ. ಜಿಲ್ಲೆಯ ಕುಮಟಾದಲ್ಲಿರುವ ಸಹೋದರಿಯ ಮನೆ ಮತ್ತು ಅವರ ಆಪ್ತರಾಗಿರುವ ಆರ್‌ಟಿಒ ಬ್ರೋಕರ್‌ ಇಲ್ಲಿಗೆ ಸಮೀಪದ ಅಲೆವೂರಿನಲ್ಲಿರುವ ರವಿ ಎಂಬವರ ಮನೆಗಳಲ್ಲೂ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು ಮತ್ತು ತಡರಾತ್ರಿಯವರೆಗೂ ದಾಖಲೆಗಳು ಪರಿಶೀಲನೆ ನಡೆಸಿದರು.ಲಕ್ಷ್ಮೀ ನಾರಾಯಣ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರು, ಕಳೆದೊಂದು ವರ್ಷದಿಂದ ಉಡುಪಿ ಜಿಲ್ಲೆಯ ಪ್ರಾದೇಶಿಕ ಅಧಿಕಾರಿಯಾಗಿದ್ದಾರೆ. ಅವರ ಪ್ಲಾಟ್ ಮತ್ತು ಬ್ರೋಕರ್ ಮನೆಗಳಲ್ಲಿ ನಗದು ಪತ್ತೆಯಾಗಿದೆ. ಅಲ್ಲದೆ ಬ್ಯಾಂಕಿನಲ್ಲಿರುವ ಲಾಕರ್‌ನಲ್ಲಿಯೂ ಹಣ ಪತ್ತೆಯಾಗಿದೆ ಎಂದು ಹೇಳಲಾಗಿದೆ.