ಸಾರಾಂಶ
ಚನ್ನಗಿರಿ: ಪಟ್ಟಣಕ್ಕೆ ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ಎಸ್. ಕೊಲಾಂಪುರೆ ಮತ್ತು ಸಿಬ್ಬಂದಿ ಗುರುವಾರ ಭೇಟಿ ನೀಡಿದ್ದು, ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆ ಮತ್ತು ಅಹವಾಲುಗಳನ್ನು ಸ್ವೀಕರಿಸಿದರು.
ಈ ಸಂದರ್ಭ ತಾಲೂಕು ಆಡಳಿತಕ್ಕೆ ಸಂಬಂಧ ಪಟ್ಟಂತೆ 4 ಅರ್ಜಿಗಳು, ಪುರಸಭೆಗೆ ಸಂಬಂಧಿಸಿದ 3 ಅರ್ಜಿಗಳು, ತಾಲೂಕು ಪಂಚಾಯಿತಿಗೆ ಸಂಬಂಧಪಟ್ಟ 3, ಪೊಲೀಸ್ ಇಲಾಖೆಗೆ ಸೇರಿದ 1 ಅರ್ಜಿ ಸೇರಿದಂತೆ ಒಟ್ಟು 11 ಅರ್ಜಿಗಳು ವಿವಿಧ ಸಮಸ್ಯೆಗಳನ್ನು ವಿವರಿಸಿ, ಬರೆದ ದೂರುಗಳು ಬಂದಿದ್ದವು. ಇವುಗಳಲ್ಲಿ ಅಧಿಕಾರಿಗಳ ಸಮ್ಮುಖ 4 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಮಾಡಲಾಯಿತು. ಇನ್ನುಳಿದ 7 ಅರ್ಜಿಗಳನ್ನು ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ನೀಡಲು ತಿಳಿಸಿದರು.ಲೋಕಾಯುಕ್ತ ಅಧಿಕಾರಿ ಎಂ.ಎಸ್. ಕೊಲಾಂಪುರೆ ಮಾತನಾಡಿ, ಸರ್ಕಾರಿ ಕೆಲಸ ಎಲ್ಲರಿಗೂ ಸಿಗುವುದಿಲ್ಲ. ಈಗ ಸಿಕ್ಕಿರುವ ಸರ್ಕಾರಿ ಹುದ್ದೆಯನ್ನು ನಿಷ್ಕಾಮ ಸೇವೆಯಿಂದ ಅಧಿಕಾರಿಗಳು ಮಾಡಬೇಕು. ಆಗ ನಿಮಗೆ ಪುಣ್ಯದ ಫಲ ದೊರೆಯಲಿದೆ. ನೀವು ಮಾಡುವ ಉದ್ಯೋಗಕ್ಕೆ ಸರ್ಕಾರ ಸಂಬಳ ನೀಡುತ್ತದೆ. ಸಾರ್ವಜನಿಕರ ಕೆಲಸ ಕಾರ್ಯಮಾಡಿಕೊಡಲು ಹಣವನ್ನು ಅವರಿಂದ ಪಡೆಯೋದು ಕಾನೂನಿಗೆ ವಿರುದ್ಧವಾಗಲಿದೆ ಎಂದರು.
ತಾಲೂಕಿನ ವಿವಿಧ ಭಾಗಗಳಿಂದ ಹಲವಾರು ಸಮಸ್ಯೆಗಳನ್ನು ಹೊತ್ತು ಜನರು ಕಚೇರಿಗಳಿಗೆ ಬರುತ್ತಾರೆ. ಸೂಕ್ತವಾದ ದಾಖಲಾತಿಗಳಿದ್ದರೆ ಅವರ ಕೆಲಸ ಮಾಡಿಕೊಡಿ. ಇಲ್ಲವಾದರೆ ದಾಖಲೆಗಳನ್ನು ತನ್ನಿರಿ ಎಂದು ತಿಳಿಹೇಳಿ ಕಳಿಸಬೇಕು. ಹಾಗೆ ಮಾಡಿದಾಗ ಲೋಕಾಯುಕ್ತ ಕಚೇರಿಗೆ ಯಾವುದೇ ದೂರುಗಳು ಬರಲಾರವು. ಸರ್ಕಾರ ನಿಮಗೆ ವಹಿಸಿದ ಕೆಲಸ ಪ್ರಾಮಾಣಿಕವಾಗಿ ಮಾಡುವಂತೆ ತಿಳಿಸಿದರು.ಕಾರ್ಯಕ್ರಮದಲ್ಲಿ ಲೋಕಾಯುಕ್ತ ಎಸ್.ಪಿ.ಕೆ. ಕಲಾವತಿ, ಇನ್‌ಸ್ಪೆಕ್ಟರ್‌ಗಳಾದ ಪ್ರಭು ಸೂರ್ಯನ್, ಗುರುಬಸವರಾಜ್, ಸರಳ, ತಹಸೀಲ್ದಾರ್ ಎನ್.ಜೆ. ನಾಗರಾಜ್, ತಾ.ಪಂ. ಇಒ ಬಿ.ಕೆ. ಉತ್ತಮ, ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀಕಾಂತ್, ತಾಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು.
- - --15ಕೆಸಿಎನ್ಜಿ1:
ಚನ್ನಗಿರಿ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತ ಜಿಲ್ಲಾ ಅಧೀಕ್ಷಕ ಎಂ.ಎಸ್.ಕೊಲಾಂಪುರೆ ಸಾರ್ವಜನಿಕರಿಂದ ಕುಂದುಕೊರತೆ ಅಹವಾಲುಗಳನ್ನು ಸ್ವೀಕರಿಸಿದರು.