ತರೀಕೆರೆಯ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಲೋಕಾಯುಕ್ತ ಭೇಟಿ

| Published : Mar 13 2025, 12:52 AM IST

ತರೀಕೆರೆಯ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಲೋಕಾಯುಕ್ತ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮೀಪದ ಜಂಬದಹಳ್ಳ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ನೀಡಿದ ಲಿಖಿತ ದೂರಿನ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಲೋಕಾಯುಕ್ತ ಅಧಿಕಾರಿಗಳು ದಿಢೀರನೆ ಬಿ.ಆರ್.ಪ್ರಾಜ್ಕೆಕ್ಟ್‌ನಲ್ಲಿರುವ ವಿಶ್ವೇಶ್ವರಯ್ಯ ನೀರಾವರಿ ಜಲ ನಿಗಮದ ಕಚೇರಿಗೆ ರೈತರೊಡನೆ ಭೇಟಿ ನೀಡಿ ರೈತರ ಸಮಕ್ಷಮ ಅಧಿಕಾರಿಗಳ ವಿಚಾರಣೆ ನಡೆಸಿದರು.

ರೈತರೊಂದಿಗೆ ಅಧಿಕಾರಿಗಳ ದಿಢೀರ್‌ ಆಗಮನ । ಲಿಖಿತ ದೂರು ಹಿನ್ನೆಲೆ ಕಚೇರಿಯಲ್ಲಿ ಸಿಬ್ಬಂದಿ ವಿಚಾರಣೆ, ಪರಿಶೀಲನೆ

ಕನ್ನಡಪ್ರಭ ವಾರ್ತೆ ತರೀಕೆರೆ

ಸಮೀಪದ ಜಂಬದಹಳ್ಳ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ನೀಡಿದ ಲಿಖಿತ ದೂರಿನ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಲೋಕಾಯುಕ್ತ ಅಧಿಕಾರಿಗಳು ದಿಢೀರನೆ ಬಿ.ಆರ್.ಪ್ರಾಜ್ಕೆಕ್ಟ್‌ನಲ್ಲಿರುವ ವಿಶ್ವೇಶ್ವರಯ್ಯ ನೀರಾವರಿ ಜಲ ನಿಗಮದ ಕಚೇರಿಗೆ ರೈತರೊಡನೆ ಭೇಟಿ ನೀಡಿ ರೈತರ ಸಮಕ್ಷಮ ಅಧಿಕಾರಿಗಳ ವಿಚಾರಣೆ ನಡೆಸಿದರು.

ಜಂಬದಹಳ್ಳ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರಿಗೆ ಕಾಲುವೆಯಲ್ಲಿ ನೀರು ಹರಿದು ಬರುತ್ತಿಲ್ಲ, ರಾತ್ರೋ ರಾತ್ರಿ ಕ್ರಸ್ಟ್‌ಗೇಟ್‌ನ್ನು ತೆರೆದು ಕೆರೆಗಳಿಗೆ ಏಕಾಏಕಿ ನೀರು ಹರಿಸುವುದು, ತೂಬಿಗೆ ಅಳವಡಿಸಿರುವ ಗೇಟ್‌ಗಳನ್ನು ಎತ್ತಿಕೊಂಡು ಹೋಗಿ ತೋಟದಲ್ಲಿ ಬಿಸಾಕಿ ಹೋಗುವುದು, ನಾಲೆಯಲ್ಲಿ ಅನಧಿಕೃತ ತೂಬುಗಳನ್ನು ಇಟ್ಟುಕೊಂಡಿರುವುದು ಮತ್ತು ನಾಲೆಗೆ ಮೋಟಾರ್ ಪಂಪ್‌ಸೆಟ್ ಅಳವಡಿಸಿ ತೋಟಗಳಿಗೆ ನೀರು ಹಾಯಿಸುತ್ತಿರುವುದರಿಂದ ರೈತರಿಗೆ ನೀರು ಹರಿದು ಬರುತ್ತಿಲ್ಲ ಎಂದು ಬುಧುವಾರ ಲೋಕಾಯುಕ್ತ ಅಧಿಕಾರಿಗಳು ತರೀಕೆರೆಗೆ ಭೇಟಿ ನೀಡಿದಾಗ ಜಂಬದಹಳ್ಳ ಅಚ್ಚುಕಟ್ಟು ಪ್ರದೇಶದ ರೈತರು ಲಿಖಿತ ದೂರು ಸಲ್ಲಿಸಿದರು.

ರೈತರ ಸಮಸ್ಯೆಗಳನ್ನು ಆಲಿಸಿದ ಲೋಕಾಯುಕ್ತ ಉಪಾಧೀಕ್ಷಕ ಜೆ.ತಿರುಮಲೇಶ್ ನೀರಾವರಿ ಕಚೇರಿಗೆ ದಿಢೀರನೆ ಭೇಟಿ ನೀಡಿದರು.

ನಾಲೆಯಲ್ಲಿರುವ ಅನಧಿಕೃತ ತೂಬುಗಳನ್ನು ತೆರವುಗೊಳಿಸಬೇಕು, ಕಾಲುವೆ ನೀರು ಹರಿಸಿದಾಗ ಕೆಲ ರೈತರು ಮೋಟಾರ್ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಬೇಕು, ಕೊನೆಯ ಭಾಗದ ರೈತರಿಗೆ ಸರಾಗವಾಗಿ ನೀರು ಹರಿದು ಬರಬೇಕು ಮತ್ತು ಕೆಲ ಹಿತಾಸಕ್ತಿಗಳು ರಾತ್ರಿ ವೇಳೆ ಜಲಾಶಯದಲ್ಲಿರುವ ಕ್ರಸ್ಟ್‌ಗೇಟ್‌ಗಳನ್ನು ತೆರೆದು ಕೆರೆಗಳಿಗೆ ನೀರು ಹರಿಸಿದ್ದಾರೆ, ಅಚ್ಚುಕಟ್ಟು ಭಾಗದ ರೈತರು ಲಿಖಿತ ದೂರು ನೀಡಿ ಪೂರಕ ದಾಖಲೆಗಳನ್ನು ನೀಡಿದರು. ಅಧಿಕಾರಿಗಳು ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.

ಗೋವಿಂದಪುರ, ರಾಂಪುರ ಕೊನೆಯ ಭಾಗದಲ್ಲಿ ಕಾಲುಗಳಿವೆ ಅವುಗಳು ಮಣ್ಣಿನ ಕಾಲುವೆಯಾಗಿದೆ, ಅಲ್ಲಿ ಕಾಂಕ್ರೀಟ್ ನಾಲೆಯನ್ನು ನಿರ್ಮಾಣ ಮಾಡಬೇಕು, ವರ್ಷಂಪ್ರತಿ ಕಾಲುವೆಯಲ್ಲಿ ಹೂಳು ತುಂಬುತ್ತದೆ ಆದರೆ ಇಲಾಖೆಯವರು ಹೂಳು ತೆಗೆಯುವುದಿಲ್ಲ. ರೈತರು ವಂತಿಕೆ ಸಂಗ್ರಹಿಸಿ ಹೂಳು ಎತ್ತಿಕೊಳ್ಳುತ್ತಿದ್ದೇವೆ, ಅಜ್ಜಂಪುರ ತೂಬಿಗೆ ಮಣ್ಣು ಸುರಿದು ನಾಲೆಯನ್ನು ಮುಚ್ಚಲಾಗಿದೆ,

ಕೆಳಭಾಗದ ನೂರಾರು ಎಕರೆಗೆ ನೀರು ಹರಿದು ಬರುತ್ತಿಲ್ಲ, ನಾಲೆ ನಿರ್ವಹಣೆಗೆ 8 ಜನ ನೀರುಗಂಟಿಗಳಿದ್ದರೂ ಸಹ ಅವರು ಕೆಲಸ ನಿರ್ವಹಿಸುತ್ತಿಲ್ಲ ಎಂದು ರೈತ ಮುಖಂಡ ರಾಮಚಂದ್ರ ಹೇಳಿದರು.

ರೈತರ ಸಮಕ್ಷಮ ವಿಚಾರಣೆ ನಡೆಸಿದ ಲೋಕಾಯುಕ್ತ ಉಪಾಧೀಕ್ಷಕ ಜೆ.ತಿರುಮಲೇಶ್ ರೈತರು ತಮ್ಮ ಸಮಸ್ಯೆಗಳನ್ನು ತಮ್ಮ ಮುಂದೆ ಇಟ್ಟಿದ್ದಾರೆ. ಜಂಬದಹಳ್ಳ ಜಲಾಶಯದಿಂದ ಮುಂದಿನ ದಿನದಲ್ಲಿ ನೀರು ಬಿಡುವ ವೇಳೆಗೆ ರೈತರ ಎಲ್ಲಾ ಸಮಸ್ಯೆಗಳು ಸರಿಪಡಿಸಬೇಕು ಎಂದು ಎಇಇ ಉಮೇಶ್‌ರವರಿಗೆ ಸೂಚನೆ ನೀಡಿದರು.

ಕಚೇರಿ ಭೇಟಿಗೂ ಮುನ್ನ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಸಾರ್ವಜನಿಕ ಜನ ಸಂಪರ್ಕದಲ್ಲಿ ತಾಲೂಕು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಉಪಾಧೀಕ್ಷಕ ಜೆ.ತಿರುಮಲೇಶ್, ತಾಲೂಕು ಕಚೇರಿ, ಸಾರ್ವಜನಿಕ ಆಸ್ಪತ್ರೆ, ಇತರ ಸರಕಾರಿ ಕಚೇರಿಗಳ ಅಧಿಕಾರಿ ಮತ್ತು ನೌಕರರ ಮೇಲೆ ದೂರುಗಳು ಕೇಳಿ ಬರುತ್ತಿವೆ, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಸೂಚನೆ ನೀಡಿದರು.

ಲೋಕಾಯುಕ್ತ ವೃತ್ತ ನಿರೀಕ್ಷಕ ರಾಥೋಡ್, ಲೋಕಾಯುಕ್ತ ಕಚೇರಿಯಿಂದ ಬರುವ ಪತ್ರಗಳಿಗೆ ಅಧಿಕಾರಿಗಳು ಸಮರ್ಪಕವಾದ ಉತ್ತರವನ್ನು ನೀಡುವುದಿಲ್ಲ. ಅಲ್ಲದೆ ದಾಖಲೆ ಲಭ್ಯವಿರುವುದಿಲ್ಲ ಎಂಬ ಹಾರಿಕೆ ಉತ್ತರವನ್ನು ನೀಡುತ್ತೀರಿ, ನಮಗೆ ದೂರು ನೀಡಿದರೆ ಅಂತಹವರ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದರು.

ಲೋಕಾಯುಕ್ತ ಸಿಬ್ಬಂದಿ, ತಾಲೂಕು ಮಟ್ಟದ ಅಧಿಕಾರಿಗಳು, ರೈತ ಮುಖಂಡರಾದ ಉಮೇಶ್, ರಾಮಚಂದ್ರ, ಪ್ರಕಾಶ್, ರಾಮು, ಕರ್ಣ, ಕರಿಯಣ್ಣ, ಬಸವರಾಜ್ ಇತರರು ಹಾಜರಿದ್ದರು.