ಸೇವಾ ಕಾರ್ಯದ ಮೂಲಕ ಲೋಕೇಶ್ವರ ಜನ್ಮದಿನ ಆಚರಣೆ

| Published : Jul 19 2025, 02:00 AM IST

ಸಾರಾಂಶ

ಬಿಜೆಪಿ ಮುಖಂಡ ಹಾಗೂ ಭಾರತೀಯ ಖೋ-ಖೋ ಫೆಡರೇಶನ್ ಉಪಾಧ್ಯಕ್ಷರಾದ ನಿವೃತ್ತ ಎಸಿಪಿ ಲೋಕೇಶ್ವರರವರ 67ನೇ ವರ್ಷದ ಹುಟ್ಟುಹಬ್ಬವನ್ನು ಅಪಾರ ಸಂಖ್ಯೆಯ ಅಭಿಮಾನಿಗಳೊಂದಿಗೆ ಲೋಕೇಶ್ವರ ಅಭಿಮಾನಿ ಬಳಗದ ವತಿಯಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ತಿಪಟೂರು

ಬಿಜೆಪಿ ಮುಖಂಡ ಹಾಗೂ ಭಾರತೀಯ ಖೋ-ಖೋ ಫೆಡರೇಶನ್ ಉಪಾಧ್ಯಕ್ಷರಾದ ನಿವೃತ್ತ ಎಸಿಪಿ ಲೋಕೇಶ್ವರರವರ 67ನೇ ವರ್ಷದ ಹುಟ್ಟುಹಬ್ಬವನ್ನು ಅಪಾರ ಸಂಖ್ಯೆಯ ಅಭಿಮಾನಿಗಳೊಂದಿಗೆ ಲೋಕೇಶ್ವರ ಅಭಿಮಾನಿ ಬಳಗದ ವತಿಯಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಅಭಿಮಾನಿಗಳು ಹುಟ್ಟಹಬ್ಬದ ಅಂಗವಾಗಿ ಶುಕ್ರವಾರ ನಗರದ ವಿವಿಧ ದೇವಸ್ಥಾನಗಳಿಗೆ ಲೋಕೇಶ್ವರ ಜೊತೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಅವರ ಸ್ವಗೃಹದ ಆವರಣದಲ್ಲಿ ಪ್ರತಿವರ್ಷದಂತೆ ನಗರಸಭೆಯ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಣೆ, ನಿವೃತ್ತ ಸೈನಿಕರಿಗೆ ಹಾಗೂ ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಇನ್ಸ್‌ಪೆಕ್ಟರ್ ದಾಕ್ಷಾಯಣಮ್ಮನವರಿಗೆ ಮತ್ತು ಸ್ನೇಕ ಸಂತೋಷ್ ಇವರಿಗೆ ಸನ್ಮಾನ ಮಾಡಲಾಯಿತು. ನಂತರ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಸಾಮಗ್ರಿಗಳ ವಿತರಣೆ ಸೇರಿದಂತೆ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮ ಆಯೋಜಿಸುವ ಮೂಲಕ ವೈಶಿಷ್ಠ್ಯಪೂರ್ಣವಾಗಿ ಆಚರಿಸಿಕೊಂಡರು. ಈ ವೇಳೆ ಮಾತನಾಡಿದ ಲೋಕೇಶ್ವರ ಇಷ್ಟೊಂದು ಅಭಿಮಾನಿಗಳು ನನ್ನ ಮೇಲೆ ಅಭಿಮಾನವಿಟ್ಟು ಹುಟ್ಟುಹಬ್ಬಕ್ಕೆ ಶುಭಕೋರುತ್ತಿರುವುದು ನನಗೆ ಹೆಚ್ಚು ಸಂತಸವನ್ನುಂಟು ಮಾಡಿ ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ಹೆಚ್ಚು ಪ್ರೇರಣೆ ನೀಡಿದೆ. ಅಭಿಮಾನಿ ಬಳಗಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ. ನಾನು ಸರ್ಕಾರಿ ಸೇವೆ ಸಲ್ಲಿಸಲು ಇನ್ನೂ ಏಳು ವರ್ಷ ಬಾಕಿ ಇರುವಾಗಲೇ ಜನತೆಯ ಸೇವೆ ಮಾಡಲು ಸ್ವಯಂ ನಿವೃತ್ತಿ ಪಡೆದು ನನ್ನ ತಾಲೂಕಿಗೆ ಬಂದೆ. ನನ್ನ ಏಳಿಗೆಗೆ ಹೆತ್ತವರ ಕೊಡುಗೆ ಅಪಾರವಿದ್ದು, ಕಷ್ಟದ ಪರಿಸ್ಥಿತಿಯಲ್ಲಿ ಉತ್ತಮ ವಿದ್ಯೆ ಪಡೆದ ನಾನು ಇಂದು ಸಮಾಜಕ್ಕೆ, ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದೇನೆ. ಸಮಾಜ ಸೇವೆಯಿಂದ ಪ್ರತಿಯೊಬ್ಬರು ಸಂತೋಷ ಪಡೆಯಬಹುದಾಗಿದ್ದು ಪ್ರತಿ ವರ್ಷ ಪೌರಕಾರ್ಮಿಕರಿಗೆ ಸಮವಸ್ತ್ರ ಸೇರಿದಂತೆ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ ಮಾಡುತ್ತಾ ಮಕ್ಕಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೇನೆ. ತಾಲೂಕಿನಲ್ಲಿ ಅನೇಕ ಜನಪರ ಕಾರ್ಯಕ್ರಮ ಆಯೋಜನೆಗೆ ಜನತೆಯ ಸಹಕಾರ ದೊರಕುತ್ತಿರುವ ಸಮಾಧಾನವಿದೆ. ಕಲ್ಪತರು ನಾಡಿನಲ್ಲಿ ನಾನು ಹುಟ್ಟಿದ್ದು, ಪೂರ್ವಜನ್ಮದ ಪುಣ್ಯವಾಗಿದ್ದು ಇದು ಸದಾ ನನ್ನನ್ನು ಸಮಾಜ ಸೇವೆಯತ್ತ ಪ್ರೇರೇಪಿಸುತ್ತಿರುತ್ತದೆ ಎಂದರು.

ಈ ಸಂದರ್ಭದಲ್ಲಿ ಲೋಕೇಶ್ವರವರ ಸ್ವಗೃಹದ ಬಳಿ ಅಭಿಮಾನಿಗಳು, ಸ್ನೇಹಿತರು ಅಪಾರ ಸಂಖ್ಯೆಯಲ್ಲಿ ಬಂದು ಶುಭಾಶಯ ಕೋರಿ ಕೇಕ್ ಹಂಚಿ ಸಂಭ್ರಮಿಸಿದರು. ಶೇಖರ್ ರಕ್ತನಿಧಿ ಕೇಂದ್ರದಿಂದ ನೇತಾಜಿ ಭವನದ ಆವರಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಅಭಿಮಾನಿಗಳು ಭಾಗವಹಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು.