ಲೋಕಸಭೆ ಟಿಕೆಟ್‌ಗೆ ತೆರೆಮರೆಯಲ್ಲಿ ಕಸರತ್ತು

| Published : Oct 15 2023, 12:45 AM IST

ಸಾರಾಂಶ

ಲೋಕಸಭೆ ಚುನಾವಣೆ ಟಿಕೆಟ್‌ ಪಡೆಯಲು ಕಸರತ್ತು
ರುದ್ರಪ್ಪ ಆಸಂಗಿ ಕನ್ನಡಪ್ರಭ ವಾರ್ತೆ ವಿಜಯಪುರ ಲೋಕಸಮರಕ್ಕೆ ಇನ್ನೂ ಐದಾರು ತಿಂಗಳು ದೂರ ಇದ್ದರೂ ವಿಜಯಪುರ ಲೋಕಸಭೆ ಕ್ಷೇತ್ರದ ಟಿಕೆಟ್‌ಗಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಆಕಾಂಕ್ಷಿಗಳು ತೆರೆಮರೆಯ ಕಸರತ್ತು ನಡೆಸಿದ್ದಾರೆ. ವಿಜಯಪುರ ಲೋಕಸಭೆ ಎಸ್ಸಿ ಮೀಸಲು ಕ್ಷೇತ್ರವಾಗಿದೆ. ಹೀಗಾಗಿ ಪರಿಶಿಷ್ಟ ಜಾತಿ ಸೇರಿದ ಅಭ್ಯರ್ಥಿಗಳು ಟಿಕೆಟ್ ಪಡೆಯಲು ಶತಾಯ ಗತಾಯ ಲಾಬಿ ನಡೆಸುತ್ತಿದ್ದಾರೆ. ಅದರಲ್ಲೂ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಾ ಹೋಗುತ್ತಿದೆ. ಹಾಲಿ ಸಂಸದ ರಮೇಶ ಜಿಗಜಿಣಗಿ, ನಿವೃತ್ತ ಪೊಲೀಸ್ ಅಧಿಕಾರಿ ಮಹೀಂದ್ರಕುಮಾರ ನಾಯಕ, ಡಾ.ಬಾಬುರಾಜೇಂದ್ರ ನಾಯಕ ಮತ್ತಿತರ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿವೆ. ಹಾಲಿ ಸಂಸದ ರಮೇಶ ಜಿಗಜಿಣಗಿ ಪಕ್ಷ ಅವಕಾಶ ನೀಡಿದರೆ ಮತ್ತೆ ಲೋಕಸಭೆ ಅಖಾಡಕ್ಕೆ ಇಳಿಯುವುದಾಗಿ ಹೇಳಿಕೊಂಡಿದ್ದಾರೆ. ಮತ್ತೊಬ್ಬ ಆಕಾಂಕ್ಷಿ ಡಾ.ಬಾಬು ರಾಜೇಂದ್ರ ನಾಯಕ ಅವರು ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಲೋಕಸಭೆ ಟಿಕೆಟ್ ಪಡೆದುಕೊಳ್ಳಲೇಬೇಕು ಎಂದು ಶತಾಯ ಗತಾಯ ಪ್ರಯತ್ನ ನಡೆಸಿದ್ದಾರೆ. ಪಕ್ಷದ ವರಿಷ್ಠರು, ಧುರೀಣರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ಗಿಟ್ಟಿಸಿಕೊಳ್ಳಲು ಪಕ್ಷದ ವರಿಷ್ಠರ ಮನವೊಲಿಸುವ ಕಸರತ್ತು ನಡೆಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾಗಠಾಣ ಮೀಸಲು ಕ್ಷೇತ್ರದ ಟಿಕೆಟ್‌ಗೆ ತೀವ್ರ ಲಾಬಿ ನಡೆಸಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಮಹೀಂದ್ರಕುಮಾರ ನಾಯಕ ಅವರಿಗೆ ಲೋಕಸಭೆಗೆ ಅವಕಾಶ ನೀಡುವುದಾಗಿ ಹೇಳಿ ಪಕ್ಷದ ವರಿಷ್ಠರು ವಿಧಾನಸಭೆ ಅಖಾಡದಿಂದ ಹಿಂದೆ ಸರಿಸಿದ್ದರು ಎಂಬ ಮಾತುಗಳು ಕೇಳಿಬರುತ್ತಿದೆ. ಹೀಗಾಗಿ ಕೊಟ್ಟ ಮಾತಿನಂತೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಬೇಕು ಎಂದು ನಾಯಕ ಪ್ರಬಲವಾಗಿ ಪ್ರತಿಪಾದಿಸುತ್ತಿದ್ದಾರೆ ಎನ್ನಲಾಗಿದೆ. ಮಹೀಂದ್ರ ನಾಯಕ ಅವರು ಈಗಾಗಲೇ ಮೂರು ಬಾರಿ ವರಿಷ್ಠರನ್ನು ಭೇಟಿಯಾಗಿ ಟಿಕೆಟ್ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ. ಹಾಲಿ ಸಂಸದ ರಮೇಶ ಜಿಗಜಿಣಗಿ ಇನ್ನೊಂದು ಅವಧಿಗೆ ತಮಗೇ ಟಿಕೆಟ್ ನೀಡಬೇಕು ಎಂದು ಪಕ್ಷದ ವರಿಷ್ಠರ ಮುಂದೆ ಇಂಗಿತ ವ್ಯಕ್ತಪಡಿಸಿದ್ದು, ಪಕ್ಷದ ವರಿಷ್ಠರು ಅವರಿಗೆ ಮತ್ತೆ ಟಿಕೆಟ್ ನೀಡುವ ಬಗ್ಗೆ ಸಕಾರಾತ್ಮಕ ಸ್ಪಂದನೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೆಲ್ಲ ಅಂತೆಕಂತೆಗಳ ಲೆಕ್ಕಾಚಾರ. ಆದರೆ, ಬಿಜೆಪಿ ವರಿಷ್ಠರು ಎಲ್ಲ ಆಯಾಮಗಳಿಂದ ಅಳೆದುತೂಗಿ ಅಭ್ಯರ್ಥಿಯನ್ನು ಫೈನಲ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಸಹ ವಿಜಯಪುರ ಲೋಕಸಭೆ ಟಿಕೆಟ್ ಗೆ ಹಕ್ಕು ಪ್ರತಿಪಾದಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮಧ್ಯೆ ಮೈತ್ರಿಯಾಗಿತ್ತು. ಆ ವೇಳೆ ವಿಜಯಪುರ ಲೋಕಸಭೆ ಟಿಕೆಟ್ ಜೆಡಿಎಸ್ ಗೆ ಬಿಟ್ಟು ಕೊಡಲಾಗಿತ್ತು. ಈ ಬಾರಿಯೂ ಮಾಜಿ ಶಾಸಕ ದೇವಾನಂದ ಚವ್ಹಾಣ ಹಾಗೂ ಅವರ ಪತ್ನಿ ಸುನೀತಾ ಚವ್ಹಾಣ ಪ್ರಬಲ ಆಕಾಂಕ್ಷಿಯಾಗಿದ್ದು, ವಿಜಯಪುರ ಲೋಕಸಭೆ ಜೆಡಿಎಸ್ ಪಡೆಯಬೇಕೆಂದು ಜೆಡಿಎಸ್ ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಶಾಸಕರಾದ ರಾಜು ಆಲಗೂರ, ಮನೋಹರ ಐನಾಪುರ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಇನ್ನೂ ಉದ್ದವಾಗಲಿದೆ ಎಂದು ಬೇರೆ ಹೇಳಬೇಕಿಲ್ಲ.