ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಬದಲಿಗೆ ಪ್ರತ್ಯೇಕವಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವ ಉದ್ದೇಶದಿಂದ ರಚಿಸಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗದ ಅಂತಿಮ ವರದಿ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿದ್ದು, ವರದಿ ಅನುಷ್ಠಾನಗೊಳಿಸುವ ಕುರಿತು ಶಿಫಾರಸು ಮಾಡಲು ಸಚಿವ ಸಂಪುಟ ಉಪಸಮಿತಿ ರಚಿಸಲು ತೀರ್ಮಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಬದಲಿಗೆ ಪ್ರತ್ಯೇಕವಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವ ಉದ್ದೇಶದಿಂದ ರಚಿಸಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗದ ಅಂತಿಮ ವರದಿ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿದ್ದು, ವರದಿ ಅನುಷ್ಠಾನಗೊಳಿಸುವ ಕುರಿತು ಶಿಫಾರಸು ಮಾಡಲು ಸಚಿವ ಸಂಪುಟ ಉಪಸಮಿತಿ ರಚಿಸಲು ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಖುದ್ದು ರಾಜ್ಯ ಶಿಕ್ಷಣ ನೀತಿ ಆಯೋಗದ ಅಧ್ಯಕ್ಷರಾದ ಪ್ರೊ.ಸುಖದೇವ್‌ ಥೋರಟ್‌ ಅವರೇ ವರದಿ ಬಗ್ಗೆ ವಿವರಣೆ ನೀಡಿದರು.

ವರದಿಯಲ್ಲಿ ರಾಜ್ಯದ ಶಾಲೆಗಳಲ್ಲಿ ದ್ವಿಭಾಷಾ ನೀತಿ ಅನುಷ್ಠಾನಗೊಳಿಸಬೇಕು. ಇದರಲ್ಲಿ ಒಂದು ಮಾತೃಭಾಷೆ ಅಥವಾ ಕನ್ನಡ ಕಡ್ಡಾಯವಾಗಿರಬೇಕು ಎಂದು ಶಿಫಾರಸು ಮಾಡಲಾಗಿದೆ. ಜತೆಗೆ, ಖಾಸಗಿ ಅನುದಾನ ರಹಿತ ಸಂಸ್ಥೆಗಳಲ್ಲೂ ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿ ನಿಯಮ ಅನ್ವಯಿಸಬೇಕು. ರಾಜ್ಯಾದ್ಯಂತ ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಬೇಕು. ಕೆಲ ಪರೋಕ್ಷ ತೆರಿಗೆಗಳ ಮೇಲೆ ಶಿಕ್ಷಣ ಸರ್ಚಾರ್ಜ್ ಪರಿಗಣಿಸಿ ಶಿಕ್ಷಣ ಬಜೆಟ್‌ ಹೆಚ್ಚಳ ಮಾಡಬೇಕು. ಖಾಸಗಿ ಶಾಲಾ-ಕಾಲೇಜುಗಳ ಶುಲ್ಕ ನಿಯಂತ್ರಣಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಸಂಪುಟ ಸಭೆ ಗಮನಕ್ಕೆ ತರಲಾಯಿತು ಎಂದು ಮೂಲಗಳು ತಿಳಿಸಿವೆ.

ಉಪಸಮಿತಿ ರಚನೆಗೆ ನಿರ್ಧಾರ:

ಈ ವೇಳೆ ಖಾಸಗಿ ಅನುದಾನ ರಹಿತ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿ, ಶಿಕ್ಷಣದ ಬಜೆಟ್‌ ಹೆಚ್ಚಳ, ಖಾಲಿ ಹುದ್ದೆಗಳ ಭರ್ತಿ, ಶುಲ್ಕ ನಿಯಂತ್ರಣದ ವಿಷಯಗಳ ಕುರಿತು ಮತ್ತಷ್ಟು ಸ್ಪಷ್ಟನೆ ಬೇಕಿದೆ. ಎಂಟು ಸಂಪುಟಗಳಲ್ಲಿನ ಅಷ್ಟೂ ಶಿಫಾರಸುಗಳ ಕುರಿತು ಸಂಪುಟ ಸಭೆಯಲ್ಲಿ ನಿರ್ಧರಿಸಲು ಸಾಧ್ಯವಿಲ್ಲ. ಹೀಗಾಗಿ ಸಚಿವ ಸಂಪುಟ ಉಪಸಮಿತಿ ರಚನೆ ಮಾಡಿ ಉಪಸಮಿತಿಯು ಅನುಷ್ಠಾನ ಯೋಗ್ಯ ಅಂಶಗಳನ್ನು ಶಿಫಾರಸು ಮಾಡಲು ಸೂಚಿಸಲಾಯಿತು.

ಇದೇ ವೇಳೆ ಸಂಪುಟ ಉಪಸಮಿತಿ ರಚನೆ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಹಿಸಿ ಸಂಪುಟ ನಿರ್ಧಾರ ಮಾಡಿತು ಎಂದು ತಿಳಿದುಬಂದಿದೆ.

ಈ ಶೈಕ್ಷಣಿಕ ವರ್ಷದಿಂದ ಜಾರಿಯಿಲ್ಲ-ಸಚಿವ:

ರಾಜ್ಯ ಶಿಕ್ಷಣ ನೀತಿ ಬಗ್ಗೆ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದನ್ನು ನಿರ್ಧರಿಸಲು ಸಚಿವ ಸಂಪುಟ ಉಪಸಮಿತಿ ರಚನೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲೇ ಶಿಕ್ಷಣ ನೀತಿ ಅನುಷ್ಠಾನ ಮಾಡುತ್ತೇವೆ ಎಂಬ ವಿಚಾರವಿಲ್ಲ. ಶಿಕ್ಷಣ ನೀತಿ ಆಯೋಗದ ವರದಿಯು ಎಂಟು ಸಂಪುಟಗಳಷ್ಟಿದೆ. ಅದರಲ್ಲಿ ಆರ್ಥಿಕ ಅಂಶಗಳು, ಮಾನವ ಸಂಪನ್ಮೂಲ, ಪಠ್ಯಕ್ರಮ, ಬೋಧನಾ ಕ್ರಮ ಮತ್ತಿತರ ವಿಷಯಗಳ ಬಗ್ಗೆ ವಿಸ್ತೃತ ಶಿಫಾರಸುಗಳು ಇವೆ.

ವಿಶ್ವವಿದ್ಯಾಲಯಗಳು, ಡೀಮ್ಡ್‌ ವಿಶ್ವವಿದ್ಯಾಲಯ, ಖಾಸಗಿ ವಿಶ್ವವಿದ್ಯಾಲಯ ಹೀಗೆ ಪ್ರತಿಯೊಂದಕ್ಕೂ ಪ್ರತ್ಯೇಕ ಅಂಶಗಳಿವೆ. ಹೀಗಾಗಿ ಅನುಷ್ಠಾನ ಕುರಿತು ಸೂಕ್ತ ಶಿಫಾರಸು ಮಾಡಲು ಸಂಪುಟ ಉಪಸಮಿತಿ ರಚನೆಗೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.