ಸಾರಾಂಶ
ಎಸ್.ಎಂ. ಸೈಯದ್
ಗಜೇಂದ್ರಗಡ: ಗ್ಯಾಸ್ ಸಂಪರ್ಕಕ್ಕೆ ಇ-ಕೆವೈಸಿ ಮಾಡಲು ಎರಡ್ಮೂರು ದಿನ ಮಾತ್ರ ಬಾಕಿ ಎಂಬ ಗಾಳಿ ಸುದ್ದಿ ನಂಬಿ ಪಟ್ಟಣದ ಕುಷ್ಟಗಿ ರಸ್ತೆಯಲ್ಲಿ ಗ್ಯಾಸ್ ಎಜೆನ್ಸಿ ಕಚೇರಿ ಎದುರು ಕಳೆದ ಎರಡ್ಮೂರು ದಿನಗಳಿಂದ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ನೂರಾರು ಮಹಿಳೆಯರು ಚಳಿಯನ್ನು ಲೆಕ್ಕಿಸದೆ ರಾತ್ರಿಯಿಡಿ ಸರದಿಗಾಗಿ ಜಾಗರಣೆ ಮಾಡುತ್ತಿದ್ದಾರೆ!ಸ್ಥಳೀಯ ಪ್ರಿಯದರ್ಶಿನಿ ಗ್ಯಾಸ್ ಎಜೆನ್ಸಿಯಲ್ಲಿ ಅಂದಾಜು ೧೪ ಸಾವಿರ ಗ್ರಾಹಕರು ಗ್ಯಾಸ್ ಸಂಪರ್ಕ ಹೊಂದಿದ್ದಾರೆ. ಆದರೆ ವಾಟ್ಸ್‌ಆ್ಯಪ್ ಇತರ ಸಾಮಾಜಿಕ ಜಾಲತಾಣಗಳಲ್ಲಿ ಇ-ಕೆವೈಸಿ ಮಾಡಿಸದಿದ್ದರೆ ಸಂಪರ್ಕ ಕಡಿತವಾಗಲಿದೆ ಎಂಬ ಗಾಳಿಸುದ್ದಿ ಬಿರುಗಾಳಿಯಂತೆ ಹರಡಿದೆ. ಪರಿಣಾಮ ತಾಲೂಕಿನ ರಾಜೂರ, ಲಕ್ಕಲಕಟ್ಟಿ, ಇಟಗಿ, ದಿಂಡೂರು ಸೇರಿ ಸುತ್ತಲಿನ ಗ್ರಾಮಗಳ ಮಹಿಳೆಯರು ಮಧ್ಯರಾತ್ರಿಯೇ ಗ್ಯಾಸ್ ಎಜೆನ್ಸಿ ಎದುರು ಮಲಗುತ್ತಿದ್ದಾರೆ.ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಿಂದ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ನಿಂತಿರುವುದನ್ನು ಕಂಡು ಪುರುಷರು ಮರಳಿ ಹೋಗುತ್ತಿದ್ದಾರೆ. ರಾತ್ರಿ ಇಡೀ ಚಳಿ ಲೆಕ್ಕಿಸದೆ ಮಹಿಳೆಯರು ಸಣ್ಣ ಮಕ್ಕಳೊಂದಿಗೆ ನಿಲ್ಲುತ್ತಿದ್ದಾರೆ. ಬೆಳಗ್ಗೆ ೧೧ ಗಂಟೆಗೆ ಸರ್ವರ್ ಡೌನ್ ಆಗುತ್ತದೆ ಎಂದು ಕೆಲವರು ಹೇಳಿದ್ದರಿಂದ ನೂಕಾಟ-ತಳ್ಳಾಟವೂ ನಡೆದಿದೆ.ತಾಲೂಕಿನಲ್ಲಿ ಗಜೇಂದ್ರಗಡ ಹಾಗೂ ನರೇಗಲ್‌ನಲ್ಲಿ ಇಂಡಿಯನ್ ಆಯಿಲ್ ಮತ್ತು ಮುಶಿಗೇರಿ ಗ್ರಾಮದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಎಜೆನ್ಸಿಗಳಿದ್ದು, ಗ್ರಾಹಕರು ಗಾಳಿ ಸುದ್ದಿ ನಂಬಿ ಇ-ಕೆವೈಸಿ ಮಾಡಿಸಲು ಮುಗಿ ಬೀಳುತ್ತಿದ್ದಾರೆ. ಬುಧವಾರ ಬೆಳಗ್ಗೆ ಗ್ಯಾಸ್ ಎಜೆನ್ಸಿ ಎದುರು 500ಕ್ಕೂ ಹೆಚ್ಚು ಜನರಿದ್ದರು. ಅಧಿಕಾರಿಗಳು ಇ -ಕೆವೈಸಿ ಬಗ್ಗೆ ತಾಲೂಕಿನಲ್ಲಿ ಜಾಗೃತಿ ಮೂಡಿಸುವ ಮೂಲಕ ಗ್ರಾಹಕರ ಪರದಾಟಕ್ಕೆ ಮುಕ್ತಿ ನೀಡಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿವೆ.
ವದಂತಿ: ಗ್ಯಾಸ್ ಸಂರ್ಪಕಕ್ಕೆ ಇ-ಕೆವೈಸಿ ಮಾಡಿಸಿದರೆ ಕೇಂದ್ರ ಸರ್ಕಾರದಿಂದ ಗ್ಯಾಸ್ ಸಂಪರ್ಕ ಹೊಂದಿರುವ ಗ್ರಾಹಕರ ಬ್ಯಾಂಕ್ ಖಾತೆಗೆ ₹೫ ಸಾವಿರ ಸಬ್ಸಿಡಿ ಹಣ ಹಾಕಲಾಗುತ್ತದೆ. ಇ-ಕೆವೈಸಿ ಮಾಡಿಸಲು ಕೇವಲ ೨ ದಿನ ಬಾಕಿ ಇದ್ದು, ಇ-ಕೆವೈಸಿ ಮಾಡಿಸದ ಗ್ರಾಹಕರ ಗ್ಯಾಸ್ ಸಂಪರ್ಕ ಕಡಿತಗೊಳ್ಳಲಿದೆ ಎಂಬ ಸುದ್ದಿಯು ತಾಲೂಕಿನಲ್ಲಿ ಹರಡಿದ್ದು, ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.ಸಂಪರ್ಕ ಕಡಿತ ತಪ್ಪಿಸಲು ಬಂದಿದ್ದೇವೆ: ಗ್ಯಾಸ್ ಸಂಪರ್ಕಕ್ಕೆ ಇ-ಕೆವೈಸಿ ಮಾಡಿಸಿದರೆ ಖಾತೆಗೆ ಹಣ ಜಮೆಯಾಗುತ್ತದೆ, ಇಲ್ಲದಿದ್ದರೆ ಸಂಪರ್ಕ ಬಂದ್ ಆಗುತ್ತದೆ ಎಂಬ ಸುದ್ದಿ ಕೇಳಿ ಸರದಿ ಸಾಲಿನಲ್ಲಿ ನಿಂತಿದ್ದೇವೆ. ನಿನ್ನೆ ಬೆಳಗ್ಗೆ ೧೧ ಗಂಟೆಗೆ ಸರ್ವರ್ ಬಂದ್ ಆಗಿದ್ದರಿಂದ ರಾತ್ರಿ ೨ ಗಂಟೆಗೆ ಪಟ್ಟಣಕ್ಕೆ ಬಂದು ಸರದಿಯಲ್ಲಿ ನಿಂತಿದ್ದೇವೆ ಎಂದು ಇ-ಕೆವೈಸಿ ಮಾಡಿಸಲು ಬಂದಿದ್ದ ಮಹಿಳೆಯರು ಹೇಳಿದರು.ಗ್ಯಾಸ್ ಸಂಪರ್ಕಕ್ಕೆ ಇ-ಕೆವೈಸಿ ಮಾಡಿಸಲು ಕೊನೆಯ ದಿನಾಂಕದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ ತಾಲೂಕಿನಲ್ಲಿ ಹರಡಿರುವ ಗಾಳಿ ಸುದ್ದಿಯಿಂದಾಗಿ ನೂರಾರು ಮಹಿಳೆಯರು ಇ-ಕೆವೈಸಿ ಮಾಡಿಸಲು ರಾತ್ರಿಯಿಂದಲೇ ಸರದಿ ನಿಲ್ಲುತ್ತಿದ್ದಾರೆ. ಈಗಾಗಲೇ ಸುಮಾರು ೪ರಿಂದ ೫ ಸಾವಿರ ಗ್ರಾಹಕರ ಇ-ಕೆವೈಸಿ ಪೂರ್ಣವಾಗಿವೆ ಎಂದು ಪ್ರಿಯದರ್ಶಿನಿ ಗ್ಯಾಸ್ ಎಜೆನ್ಸಿಯ ಅಪ್ಪು ಮತ್ತಿಕಟ್ಟಿ ಹೇಳಿದರು.