ಆಯುರ್ವೇದ ಚಿಕಿತ್ಸಾ ಪದ್ಧತಿಯಿಂದ ದೀರ್ಘಾಯುಷ್ಯ ಸಾಧ್ಯ

| Published : Nov 01 2024, 12:06 AM IST

ಸಾರಾಂಶ

ಆಯುರ್ವೇದ ಚಿಕಿತ್ಸಾ ಪದ್ಧತಿ ಅಳವಡಿಕೆಯಿಂದ ದೀರ್ಘಾಯುಷ್ಯ ಸಾಧ್ಯ ಎಂದು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆಆಯುರ್ವೇದ ಚಿಕಿತ್ಸಾ ಪದ್ಧತಿ ಅಳವಡಿಕೆಯಿಂದ ದೀರ್ಘಾಯುಷ್ಯ ಸಾಧ್ಯ ಎಂದು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.ಅವರು ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸದ್ಯೋಜಾತ ಹಿರೇಮಠದಲ್ಲಿ ಧನ್ವಂತರಿ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ಆಯುರ್ವೇದ ಎಂದರೆ ಅಯುಷ್ಯದ ಜ್ಞಾನ ಎಂದು ಅರ್ಥ. ಈ ಪದ್ಧತಿ ಅನುಸರಿಸುವವರು ದೀರ್ಘಾಯುಷ್ಯಿಗಳಾಗುತ್ತಾರೆ. ನಮ್ಮ ಪೂರ್ವಜರು ಆಯುರ್ವೇದ ಪದ್ಧತಿ ಅನುಸರಿಸಿ ಶತಾಯುಷಿಗಳಾಗಿ ಬದುಕಿದ್ದರು. ಇಂದಿನ ಪೀಳಿಗೆಯವರು ಕೂಡ ನೂರು ವರ್ಷ ಬದುಕಬೇಕಾದರೆ, ಆಯುರ್ವೇದ ಪದ್ಧತಿಗೆ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ನಾಲ್ಕು ವೇದಗಳ ಜತೆಗೆ ಪಂಚಮವೇದವಾಗಿ ಆಯುರ್ವೇದ ಜ್ಞಾನವನ್ನು ಸೇರಿಸಬಹುದಾಗಿದೆ. ಅಂಥಹ ಆರೋಗ್ಯ ಜ್ಞಾನವನ್ನು ಹೊಂದಿರುವ ಈ ಪದ್ಧತಿಗೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿ, ಮನೆ ಮನೆಗೆ ಆಯುರ್ವೇದವನ್ನು ಕೊಂಡೊಯ್ಯುವ ಕೆಲಸವಾಗಬೇಕು. ಮನೆಯಲ್ಲಿರುವ ಆಹಾರ ಪದಾರ್ಥಗಳನ್ನೆ ಬಳಸಿಕೊಂಡು ಆಯುರ್ವೇದ ವೈದ್ಯ ಪದ್ಧತಿ ಅನುಸರಿಸಬಹುದು. ಆದರೆ ಹಿತ್ತಲಗಿಡ ಮದ್ದಲ್ಲ ಎಂಬ ಉದಾಸೀನತೆ ಬಂದಿದೆ. ಪರಮ ಜ್ಞಾನವಾಗಿರುವ ಈ ಪದ್ಧತಿ ಅನುಸರಣೆಯಿಂದ ನಿರೋಗಿಗಳಾಗಬಹುದು ಎಂದು ಹೇಳಿದರು.ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಯು. ಯೋಗೇಂದ್ರ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಜಗತ್ತಿನ 155 ದೇಶಗಳಲ್ಲಿ ಆಯುರ್ವೇದ ದಿನಾಚರಣೆ ಮಾಡಲಾಗುತ್ತಿದೆ. ಬರುವ ವರ್ಷ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಅಂತರರಾಷ್ಟ್ರೀಯ ದಿನಾಚರಣೆಯನ್ನಾಗಿ ಘೋಷಿಸುವ ಸಾಧ್ಯತೆಗಳಿವೆ ಎಂದರು.ಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದದ ಆವಿಷ್ಕಾರಗಳು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದ, ಈ ವರ್ಷದ ಘೋಷ ವಾಕ್ಯವಾಗಿದ್ದು`ಈ ನಿಟ್ಟಿನಲ್ಲಿ ಅ.21 ರಿಂದ 4 ದಿನಗಳ ಕಾಲ ಜಿಲ್ಲೆಯ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮತ್ತು ಮಹಿಳಾ ಸ್ವ ಸಹಾಯ ಸಂಘಗಳ ಪದಾಧಿಕಾರಿಗಳಿಗೆ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.ಆಯುಷ್ ಮಂತ್ರಾಲಯವು 2016ನೇ ಇಸವಿಯಿಂದ ರಾಷ್ಟ್ರೀಯ ಆಯುರ್ವೇದ ದಿನವನ್ನು ಘೋಷಿಸಿ ಇದರ ಅಂಗವಾಗಿ ಲಾಂಛನವನ್ನು ಬಿಡುಗಡೆಗೊಳಿಸಿದೆ. ಇದರ ಮಧ್ಯಭಾಗದಲ್ಲಿ ಭಗವಾನ್ ಧನ್ವಂತರಿಯ ನೆರಳುಗೆರೆ ಚಿತ್ರವಿದೆ. ಐದು ಎಲೆಗಳು ಪಂಚಮಹಾಭೂತಗಳನ್ನು ಹಾಗೂ ಅವುಗಳ ಕೆಳಗಿರುವ ಮೂರು ವೃತ್ತಗಳು ತ್ರಿದೋಷಗಳಾದ ವಾತ, ಪಿತ್ತ ಮತ್ತು ಕಫವನ್ನು ಪ್ರತಿನಿಧಿಸುತ್ತವೆ. ಇವೆಲ್ಲವನ್ನು ಸುತ್ತಿರುವ ಅಂಡಾಕಾರದ ಎಲೆಯು ಆಯುರ್ವೇದದ ಮೂಲಭೂತ ತತ್ವಗಳನ್ನು ಆಧರಿಸಿದ ಸಂಪೂರ್ಣವಾಗಿ ಪ್ರಕೃತಿದತ್ತ ಚಿಕಿತ್ಸೆಯಾಗಿ ಅಮೃತಸಮಾನವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಉಜ್ಜಪ್ಪ ಎಸ್. ಮಾಳಾಪುರ, ಅಶ್ವಿನಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಜ್ಞಾನೇಶ್ವರ, ತಪೋವನ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅಶ್ವಿನಿ, ಸುಶೃತ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಕ್ಬರ್ ಖಾನ್, ಪತಂಜಲಿ ಆಯುರ್ವೇದ ಸಮಿತಿ ಮುಖ್ಯಸ್ಥರಾದ ಷಣ್ಮುಖಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.