ಶಿವಪುತ್ರ ಗಣೇಶ ಬಂದ ನೋಡು ಬಾರೇ ತಂಗಿ..

| Published : Aug 27 2025, 01:00 AM IST

ಸಾರಾಂಶ

ದಾವಣಗೆರೆ ಜಿಲ್ಲೆಯಾದ್ಯಂತ ಮಂಗಳವಾರ ಸಂಭ್ರಮದಿಂದ ಗೌರಿ ಹಬ್ಬ ಆಚರಿಸಿದ್ದು, ಬುಧವಾರ ಗಣಪತಿ ಹಬ್ಬದ ಆಚರಣೆ ಹಿನ್ನೆಲೆ ನಗರದ ಬೀದಿ ಬೀದಿಗಳಲ್ಲಿ, ಪ್ರಮುಖ ವೃತ್ತಗಳಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಅಂತಿಮ ಸಿದ್ಧತೆ ನಡೆಯುತ್ತಿದೆ.

ಎಂ.ಎಸ್.ಚನ್ನಬಸವ ಶೀಲವಂತ್

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲೆಯಾದ್ಯಂತ ಮಂಗಳವಾರ ಸಂಭ್ರಮದಿಂದ ಗೌರಿ ಹಬ್ಬ ಆಚರಿಸಿದ್ದು, ಬುಧವಾರ ಗಣಪತಿ ಹಬ್ಬದ ಆಚರಣೆ ಹಿನ್ನೆಲೆ ನಗರದ ಬೀದಿ ಬೀದಿಗಳಲ್ಲಿ, ಪ್ರಮುಖ ವೃತ್ತಗಳಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಅಂತಿಮ ಸಿದ್ಧತೆ ನಡೆಯುತ್ತಿದೆ.

ದಾವಣಗೆರೆಯಲ್ಲಿ ಪಶ್ಚಿಮ ಬಂಗಾಳದಿಂದ ಆಗಮಿಸಿದ ಸಂತು ಪಾಲ್ ಮತ್ತು ಕಲಾವಿದರ ತಂಡದವರು ತಯಾರಿಸಿದ ವಿವಿಧ ಬೃಹತ್ ಗಾತ್ರದ ಗಣೇಶ ಮೂರ್ತಿಗಳಿಗೆ ಬಹಳ ಬೇಡಿಕೆ ಇದ್ದು, ಸಂಘ ಸಂಸ್ಥೆಗಳವರು ಮುಂಗಡ ಹಣ ನೀಡುವ ಮೂಲಕ ಗಣಪತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಬದರಿನಾರಾಯಣ ದೇವಸ್ಥಾನದ ಮಾದರಿ ಮಂಟಪ ನಿರ್ಮಾಣ:

ನಗರದ ಹಿಂದೂ ಮಹಾಗಣಪತಿ ಟ್ರಸ್ಟಿನಿಂದ ಈ ಬಾರಿ ಕೊಲ್ಕತ್ತಾ ಕುಶಲ ಕಲಾವಿದರಿಂದ ಉತ್ತರಖಂಡ ರಾಜ್ಯದ ಪ್ರವಾಸಿ ತಾಣವಾಗಿರುವ ಬದರಿನಾರಾಯಣ ದೇವಸ್ಥಾನದ ಮಾದರಿ ಸುಮಾರು 50 ಲಕ್ಷ ರುಪಾಯಿಗಳಲ್ಲಿ ಮಂಟಪವು 110 ಅಡಿ ಉದ್ದ, 150 ಅಡಿ ಅಗಲ, 60 ಅಡಿ ಎತ್ತರದಲ್ಲಿ ನಿರ್ಮಾಣಗೊಳ್ಳುತ್ತಿದೆ. ಈ ಮಂಟಪದಲ್ಲಿ ಬದರಿನಾಥ ಸ್ವಾಮಿ ಕುರಿತ 10 ನಿಮಿಷದ ರೂಪಕ ಪ್ರದರ್ಶನಗೊಳ್ಳಲಿದೆ. 8 ಅಡಿ ಎತ್ತರದ ಮಣ್ಣಿನ ಬದರಿನಾರಾಯಣ ಸ್ವಾಮಿ ಮೂರ್ತಿ, 16 ಅಡಿ ಎತ್ತರದ ಪಂಚಮುಖಿ ಗಣಪತಿಯನ್ನು ಭಕ್ತರು ದರ್ಶನ ಪಡೆಯಬಹುದು. 25 ದಿನಗಳ ಕಾಲ ಸಾರ್ವಜನಿಕರಿಗೆ ದರ್ಶನ ಕಲ್ಪಿಸಲಾಗುವುದು ಎಂದು ಟ್ರಸ್ಟಿನ ಸಂಸ್ಥಾಪಕ ಜೊಳ್ಳಿ ಗುರು ತಿಳಿಸಿದ್ದಾರೆ. ಗೌರಿ ತನಯ ಗಜಮುಖನ ಕಥೆ ಪ್ರದರ್ಶನ:

ಇಲ್ಲಿನ ಎಸ್‌ಕೆಪಿ ರಸ್ತೆಯಲ್ಲಿರುವ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ವಾಸವಿ ಯುವಜನ ಸಂಘದಿಂದ 44ನೇ ವರ್ಷದ ಗಣೇಶ ಪ್ರತಿಷ್ಠಾಪನೆ ಅಂಗವಾಗಿ " ಗೌರಿ ತನಯ ಗಜಮುಖನ ಕಥೆ'''''''' ಕುರಿತ ರೂಪಕ ಪ್ರದರ್ಶನ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಸ್.ಸುನಿಲ್ ತಿಳಿಸಿದ್ದಾರೆ. ಪುರಾತನ ದೇವಾಲಯ ಮಂಟಪ:ಇಲ್ಲಿನ ಪಿ.ಜೆ.ಬಡಾವಣೆಯ ರಾಂ ಅಂಡ್ ಕೋ ಸರ್ಕಲ್ ಗೆಳೆಯರ ಬಳಗದಿಂದ ಪುರಾತನ ದೇವಾಲಯದ ಮಂಟಪದೊಂದಿಗೆ, ಬೃಹತ್ ಗಾತ್ರದ ಶಿವ, ದ್ವಾರ ಬಾಗಿಲ ಬಳಿ ಎರಡು ಆನೆಗಳ ಮುಖ, ನಂದಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಬಳಗದ ನಾಗೇಂದ್ರ ರೆಡ್ಡಿ, ಸಂದೀಪ ಆಲೂರು ತಿಳಿಸಿದ್ದಾರೆ.ಗಂಟೆಗಳ ಅಲಂಕಾರ: ಹಿಂದೂ ಯುವ ಶಕ್ತಿ ಬಳಗದಿಂದ ಇಲ್ಲಿನ ಎಂಸಿಸಿ ಎ ಬ್ಲಾಕಿನ ತೋಗಟವೀರ ಕಲ್ಯಾಣ ಮಂಟಪದಲ್ಲಿ ಗಂಟೆಗಳಿಂದ ಗಣಪತಿ ಅಲಂಕಾರ ಮಾಡಲಾಗಿದೆ, ವಿವಿಧ ಪೂಜಾ ಕಾರ್ಯಕ್ರಮಗಳು, ಅನ್ನಸಂತರ್ಪಣೆ ಜರುಗಲಿದೆ ಎಂದು ಬಳಗದ ಪಿ.ಸಿ.ರಾಮನಾಥ ತಿಳಿಸಿದರು.