ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕೊಲ್ಲಿ ಸಮರದ ಕರಾಳ ಛಾಯೆ ರಬಕವಿ-ಬನಹಟ್ಟಿಯ ಜೀವನಾಡಿಯಾಗಿರುವ ಜವಳಿ ಉದ್ಯಮದ ಮೇಲೆ ಬಿದ್ದಿದ್ದು, ಪಾಲಿಸ್ಟರ್, ಜರಿ ಸೇರಿ ನೇಕಾರಿಕೆಯ ಕಚ್ಚಾ ವಸ್ತುಗಳ ಬೆಲೆ ಶೇ.೨೦ಕ್ಕೂ ಹೆಚ್ಚು ಏರಿಕೆಯಾಗಿದ್ದರಿಂದ ನೇಕಾರರು ಸೀರೆ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತುಗಳ ಖರೀದಿಗೆ ಹಿಂಜರಿಯುತ್ತಿದ್ದು, ನೇಕಾರಿಕೆಯೇ ಸ್ತಬ್ಧವಾಗುವ ಆತಂಕ ಎದುರಾಗಿದೆ.ಕೊಲ್ಲಿ ಸಮರಕ್ಕೂ ಮುನ್ನ ನೇಕಾರಿಕೆ ಬಳಕೆಗೆ ಅಗತ್ಯ ಪಾಲಿಸ್ಟರ್ ವಸ್ತುಗಳ ದರ ₹೨೦೦ರಿಂದ ₹೩೦೦, ಜರಿ ವಸ್ತುಗಳು ₹೨೫೦ರಿಂದ ₹೩೫೦ಕ್ಕೆರಿತ್ತು. ಆದರೆ ಯುದ್ಧ ಆರಂಭವಾದ ಬಳಿಕ ತೈಲ ವಸ್ತುಗಳ ಆಮದಿಗೆ ವ್ಯತ್ಯಯ ಉಂಟಾಗಿರುವುದರಿಂದ ಈಗ ಪಾಲಿಸ್ಟರ್ ವಸ್ತುಗಳು ₹೩೫೦ರಿಂದ ₹೪೦೦ ಹಾಗೂ ಜರಿ ₹೪೫೦ರ ಗಡಿ ದಾಟಿವೆ. ಸೀರೆಗಳ ಉತ್ಪಾದನೆಯಲ್ಲಿ ಅಗತ್ಯ ವಸ್ತುಗಳ ದರದಲ್ಲಿ ದಿಢೀರ್‌ ಭಾರೀ ಏರಿಕೆಯಾಗಿದ್ದರಿಂದ ನೇಕಾರಿಕೆಗೆ ಅವಶ್ಯಕ ಕಚ್ಚಾ ಸಾಮಗ್ರಿಗಳ ಕೊರತೆ ಹಾಗೂ ಹಾಕಿದ ಬಂಡವಾಳಕ್ಕೆ ತಕ್ಕ ಬೆಲೆ ಸೀರೆಗಳಿಗೆ ಸಿಗದೇ ಇರುವುದರಿಂದ ನೇಕಾರರು ಕಂಗಾಲಾಗಿದ್ದು, ನೇಯ್ಗೆ ಉದ್ಯಮಕ್ಕೆ ಗರ ಬಡಿದಂತಾಗಿದೆ.

ಆಮದು ಸ್ಥಗಿತ : ನಿರಂತರ ಆಮದು ಮಾಡಿಕೊಳ್ಳುತ್ತಿದ್ದ ಏಳೆಂಟು ಪಾಲಿಸ್ಟರ್ ಹಾಗೂ ಜರಿ ವರ್ತಕರು ಕಚ್ಚಾ ವಸ್ತುಗಳ ಭಾರೀ ಬೆಲೆ ಏರಿಕೆಯಿಂದ ಆಮದು ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದರೆ, ಇತ್ತ ನೇಕಾರರು ಮಾರುಕಟ್ಟೆಯಲ್ಲಿ ಸೀರೆಗಳ ಬೆಲೆ ಹಠಾತ್‌ ಏರಿಕೆಯಾದರೆ ಬೇಡಿಕೆ ಕುಸಿತಗೊಂಡು ಹಾಕಿದ ಬಂಡವಾಳ ವಾಪಸ್‌ ಬಾರದ ಆತಂಕದಿಂದ ಕಚ್ಚಾ ವಸ್ತುಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಜವಳಿ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳುವ ಹಂತದಲ್ಲಿದ್ದು, ನೇಯ್ಗೆ ಉದ್ಯಮಕ್ಕೆ ಹಿಂದೆಂದೂ ಕಾಣದ ಗ್ರಹಣ ಹಿಡಿದಂತಾಗಿದೆ.

ಸದ್ಯ ಹಳೆಯ ಕಚ್ಚಾವಸ್ತುಗಳನ್ನು ಹೊಂದಿರುವ ನೇಕಾರರು ಅಷ್ಟಿಷ್ಟು ನೇಯ್ಗೆ ಮಾಡುತ್ತಿದ್ದರು. ಕದನ ವಿರಾಮ ಬಳಿಕ ಉದ್ಯಮ ಚೇತರಿಕೆಯ ನಿರೀಕ್ಷೆಯಲ್ಲಿರುವಾಗಲೇ ಇದೀಗ ಮತ್ತೆ ಯುದ್ಧದ ಛಾಯೆ ಆವರಿಸಿರುವುದರಿಂದ ಹೊಸ ಕಚ್ಚಾವಸ್ತುಗಳ ಭೀಮ್‌ಗಳ ಮಾಲೀಕರು ಮಗ್ಗಗಳಿಗೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ನೇಕಾರರು ನಿರುದ್ಯೋಗ ಭೀತಿ ಎದುರಾಗಿದೆ. ಇದೇ ಪರಿಸ್ಥಿತಿ ಇನ್ನಷ್ಟು ದಿನ ಮುಂದುವರೆದಲ್ಲಿ ಸೀರೆ ಉದ್ಯಮ ಸಂಪೂರ್ಣ ಸ್ಥಗಿತಗೊಂಡು ನೇಕಾರ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣಗೊಳ್ಳಲಿದೆಯೆಂದು ತಜ್ಞರು ಹೇಳುತ್ತಾರೆ.


ಗುಜರಾತ್, ರಾಜಸ್ಥಾನ ರಾಜ್ಯಗಳ ಜವಳಿ ಉದ್ಯಮದ ಜೊತೆಗೆ ಪೈಪೋಟಿ ನಡೆಸಲು ಅವಳಿ ನಗರಗಳ ನೇಕಾರರಿಗೆ ಶಕ್ತಿಯಿಲ್ಲದಂತಾಗಿದೆ. ದರ ಸಮರದಲ್ಲೇ ಹೈರಾಣಾಗಿರುವ ರಬಕವಿ-ಬನಹಟ್ಟಿ ಸೀರೆಗಳಿಗೆ ಕೆಲ ವರ್ಷಗಳಿಂದ ದೇಶಾದ್ಯಂತ ಅದರಲ್ಲೂ ಆಂಧ್ರ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾರುಕಟ್ಟೆಯಿಲ್ಲದೇ ಹಾಕಿರುವ ಬಂಡವಾಳ ನೀರು ಪಾಲಾಗುವ ಭಯದಲ್ಲಿ ಮಾಲೀಕರು ಕಂಗಾಲಾಗಿದ್ದಾರೆ. ಉತ್ತರ ಭಾರತದ ರಾಜ್ಯಗಳ ನೇಕಾರಿಕೆ ಉದ್ಯಮದ ದರ ವಿಚಾರದಲ್ಲಿ ತೀವ್ರ ಪೈಪೋಟಿ ಎದುರಿಸುತ್ತಿರುವ ಸ್ಥಳೀಯ ನೇಯ್ಗೆ ಉದ್ಯಮ ಮಾರುಕಟ್ಟೆಯಲ್ಲಿ ಸ್ಥಿರ ನೆಲೆ ಕಾಣುವಲ್ಲಿ ವಿಫಲವಾಗುತ್ತಿದೆ. ಈ ಎಲ್ಲ ತಾಪತ್ರಯಗಳ ನಡುವೆ ಕಚ್ಚಾ ವಸ್ತುಗಳ ಬೆಲೆ ದಿಢೀರ್‌ ಏರಿಕೆಯಿಂದ ಮಾರುಕಟ್ಟೆಯಲ್ಲಿ ಮತ್ತಷ್ಟು ಬಿಕ್ಕಟ್ಟು ಹೆಚ್ಚಲಿದೆ. ವರ್ಷದಿಂದ ವರ್ಷಕ್ಕೆ ಕಚ್ಚಾವಸ್ತುಗಳ ಬೆಲೆಗಳಲ್ಲಿ ಶೇ.೩ ರಿಂದ ೫ರಷ್ಟು ಹೆಚ್ಚಳಕ್ಕೆ ಕಂಗೆಟ್ಟಿದ್ದ ಇಲ್ಲಿನ ಜವಳಿ ಉದ್ಯಮ ಇದೀಗ ಶೇ.೨೦ರಷ್ಟು ಹೆಚ್ಚಳಗೊಂಡಿರುವುದರಿಂದ ನೇಕಾರ ವಲಯದಲ್ಲಿ ತಲ್ಲಣವುಂಟು ಮಾಡಿದೆ.

ನೆರೆಯ ರಾಜ್ಯಗಳಲ್ಲಿನ ಸರ್ಕಾರಗಳು ಅಲ್ಲಿನ ಜವಳಿ ಕ್ಷೇತ್ರಕ್ಕೆ ನೀಡುವ ಸಹಕಾರ-ಸೌಲಭ್ಯಗಳನ್ನು ನಮ್ಮ ರಾಜ್ಯ ಸರ್ಕಾರವೂ ನೀಡಲು ಮುಂದಾಗಬೇಕು. ಪಾಲಿಸ್ಟರ್ ಮತ್ತು ಜರಿ ಉತ್ಪನ್ನಗಳ ಸ್ಥಳಿಯವಾಗೇ ಉತ್ಪಾದಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವ್ಯವಸ್ಥೆ ಮಾಡಬೇಕು. ನೇಕಾರಿಕೆ ಉಳಿಕೆಗೆ ರಿಯಾಯತಿ ದರದಲ್ಲಿ ನೂಲು, ಕಚ್ಚಾವಸ್ತುಗಳ ಪೂರೈಸಲು ಸರ್ಕಾರಗಳು ಮುಂದಾದರೆ ಮಾತ್ರ ಜವಳಿ ಉದ್ಯಮ ಉಳಿಯಲು ಸಾಧ್ಯ.

-ರವಿ ದೇಸಾಯಿ, ಪ್ರಶಾಂತ ಪಾಲಭಾಂವಿ. ಮಾಲೀಕರು, ಫಾಲ್ಗಿರಿ ವೀವ್ಹಿಂಗ್ ಫ್ಯಾಕ್ಟರಿ, ವಿದ್ಯಾನಗರ, ರಬಕವಿ. ರಾಜ್ಯದ ಜವಳಿ ಉದ್ಯಮಕ್ಕೆ ನೆರವಾಗುವ ಯೋಜನೆಗಳನ್ನು ಸರ್ಕಾರ ತಕ್ಷಣ ಜಾರಿಗೊಳಿಸಬೇಕು. ಜವಳಿ ಪಾರ್ಕ್ ಕಾರ್ಯಾರಂಭಗೊಳಿಸುವ ಮೂಲಕ ಕೌಶಲ್ಯಾಧಾರಿತ ಮತ್ತು ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ನೇಕಾರರನ್ನು ಸಜ್ಜುಗೊಳಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಚ್ಚಾವಸ್ತುಗಳ ಸಮರ್ಪಕ ಪೂರೈಕೆ ಮಾಡುವ ಮೂಲಕ ಉದ್ಯಮ ರಕ್ಷಿಸಬಹುದಾಗಿದೆ.

-ವಿನೋದ ಬಸವರಾಜ ಸಿಂದಗಿ. ಜವಳಿ ವರ್ತಕರು, ರಬಕವಿ