ಲೂಟಿಯೇ ಭಗವಂತ ಖೂಬಾ ಸಾಧನೆ: ಸಚಿವ ಈಶ್ವರ ಖಂಡ್ರೆ

| Published : Apr 29 2024, 01:36 AM IST

ಸಾರಾಂಶ

ಹುಮನಾಬಾದ್‌ನ ರಾಜೇಶ್ವರದಲ್ಲಿ ಸಚಿವ ಈಶ್ವರ ಖಂಡ್ರೆ ಸಂಸದ ಖೂಬಾ ವಿರುದ್ಧ ವಾಗ್ದಾಳಿ ನಡೆಸಿದರು. ಬಸವಕಲ್ಯಾಣ ತಾಲೂಕು ರಾಜೇಶ್ವರದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್, ಮಾಜಿ ಸಚಿವ ರಾಜಶೇಖರ ಪಾಟೀಲ್ ಮತ್ತಿತರರು ಪಾಲ್ಗೊಂಡು ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಪರ ಮತ ಯಾಚಿಸಿದರು.

ಕನ್ನಡಪ್ರಭ ವಾರ್ತೆ ಹುಮನಾಬಾದ್

ಹೆದ್ದಾರಿಗಳ ಕಾಮಗಾರಿ ಕಳಪೆ ಮಾಡಿ, ಲೂಟಿ ಹೊಡೆದಿದ್ದೇ ಸಂಸತ್ ಸದಸ್ಯ ಭಗವಂತ ಖೂಬಾ ಅವರ 10 ವರ್ಷದ ಸಾಧನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಆರೋಪಿಸಿದರು.

ಹುಮನಾಬಾದ್ ಕ್ಷೇತ್ರ ವ್ಯಾಪ್ತಿಯ ರಾಜೇಶ್ವರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ 2022ರೊಳಗೆ ಸರ್ವರಿಗೂ ಮನೆ ನೀಡುವ ಸುಳ್ಳು ಭರವಸೆ ನೀಡಿತ್ತು. ಆದರೆ, ಕಾಂಗ್ರೆಸ್ ಅಧಕಾರವಧಿಯಲ್ಲಿ ಮಂಜೂರು ಮಾಡಿದ್ದ ಬಡವರ ಮನೆಗಳ ಕಂತಿನ ಹಣವನ್ನು ಕೂಡ ಹಿಂದಿನ ಬಿಜೆಪಿ ಸರ್ಕಾರದಲ್ಲಿ ತಡೆ ಹಿಡಿಸಿ, ಸೂರಿಲ್ಲದವರ ಕಣ್ಣೀರು ಹಾಕಿಸಿದ ಖೂಬಾ ಜನ ವಿರೋಧಿಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಬಾಯ್ ಬಾಯ್ ಖೂಬಾ, ಬಾಯ್ ಬಾಯ್ ಬಿಜೆಪಿ ಎಂದು ಮನೆ ದಾರಿ ತೋರಿಸಿ ಎಂದರು.

ಸಚಿವ ರಹೀಂ ಖಾನ್ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಕಾರ್ಯರೂಪಕ್ಕೆ ಬರುತ್ತದೆ. ಆದರೆ ಬಿಜೆಪಿ ಗ್ಯಾರಂಟಿ ಸೋಶಿಯಲ್ ಮೀಡಿಯಾಕ್ಕೆ ಮಾತ್ರ ಸೀಮಿತವಾಗಿದೆ. ರಾಜೇಶ್ವರದಲ್ಲಿ ಪುರಸಭೆ ರಚಿಸಬೇಕು ಎಂಬ ಬೇಡಿಕೆ ಬಹಳ ದಿನಗಳಿಂದಲೂ ಇದೆ. ಈ ಬಗ್ಗೆ ಸರ್ಕಾರ ಚುನಾವಣೆಯ ಬಳಿಕ ಪರಿಶೀಲಸಲಿದೆ ಎಂದು ತಿಳಿಸಿದರು.

ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ, ಕಳೆದ 10 ವರ್ಷದಲ್ಲಿ ಸಂಸತ್ ಸದಸ್ಯರು ಏನು ಕೆಲಸ ಮಾಡಿದ್ದಾರೆ ಎಂಬುದು ಜನರಿಗೆ ಕಾಣುತ್ತಿಲ್ಲ. ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಜನರ ಪರ ನಿಂತು ಕೆಲಸ ಮಾಡುವ ಕಾಂಗ್ರೆಸ್‌ಗೆ ಮತ ನೀಡುವಂತೆ ಕೋರಿದರು.

ಬೀದರ್‌ನಲ್ಲಿ ಇಬ್ಬರು ಸಚಿವರಿದ್ದು, ಜನರ ನೋವು, ನಲಿವಿಗೆ ಸ್ಪಂದಿಸುತ್ತಿದ್ದಾರೆ. ಸಾಗರ್ ಖಂಡ್ರೆ ಸಂಸತ್ ಸದಸ್ಯರಾಗಿ ಆಯ್ಕೆಯಾದರೆ, ಬೀದರ್ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅವರ ತಂದೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಜೊತೆಗೂಡಿ ಶ್ರಮಿಸಲಿದ್ದಾರೆ ಎಂಬ ಭರವಸೆ ನೀಡಿದರು.

ಪ್ರಚಾರ ಸಭೆಯಲ್ಲಿ ಮುಖಂಡರಾದ ನಸೀಮೋದ್ದಿನ್ ಪಟೇಲ್, ಭಾರತಬಾಯಿ ಶೇರಿಕಾರ, ವೀರಣ್ಣ ಪಾಟೀಲ್, ಅಭಿಷೇಕ್ ಪಾಟೀಲ್, ಕೇಶಪ್ಪ ಬಿರಾದರ್ ಮೊದಲಾದವರು ಪಾಲ್ಗೊಂಡಿದ್ದರು.