ಶ್ರೀಕೃಷ್ಣನ ಆದರ್ಶ ಎಲ್ಲರಿಗೂ ಪ್ರೇರಣೆ: ಕಾಮತ್

| Published : Aug 27 2024, 01:39 AM IST

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ನೌಕರರ ಸಂಘದ ನಂದಿನಿ ಸಭಾಭವನದಲ್ಲಿ ಸೋಮವಾರ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಯಾವುದೇ ಜಾತಿ, ಮತದ ಭೇದವಿಲ್ಲದೆ ತಮ್ಮ ಮಕ್ಕಳಿಗೆ ಕೃಷ್ಣ ವೇಷ ಹಾಕುವ ಸನ್ನಿವೇಶವನ್ನು ಕಾಣುತ್ತೇವೆ. ಶ್ರೀಕೃಷ್ಣ ಪರಮಾತ್ಮನ ಆದರ್ಶಗಳು ಜಾತಿ ಮತವನ್ನು ಮೀರಿರುವಂಥದ್ದು. ಎಲ್ಲ ಜಾತಿ- ಧರ್ಮದವರಿಗೂ ಪ್ರೇರಣೆಯಾಗುವಂಥದ್ದು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ನೌಕರರ ಸಂಘದ ನಂದಿನಿ ಸಭಾಭವನದಲ್ಲಿ ಸೋಮವಾರ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಯಂದಿರು ತಮ್ಮ ಮಕ್ಕಳಿಗೆ ಕೃಷ್ಣನ ವೇಷ ಹಾಕುವ ಮೂಲಕ ಕೃಷ್ಣ ಪರಮಾತ್ಮನನ್ನು ಮಕ್ಕಳಲ್ಲಿ ಕಾಣುತ್ತಾರೆ. ತಮ್ಮ ಮಗು ಕೂಡ ಕೃಷ್ಣನಂತೆ ಆದರ್ಶ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದು ಭಾವಿಸುತ್ತಾರೆ. ಭಗವಂತನನ್ನು ಪರಿಶುದ್ಧ ಮನಸ್ಸಿನಿಂದ ಪ್ರಾರ್ಥಿಸಿದರೆ ಯಾವುದೇ ಕಠಿಣ ಸಂದರ್ಭದಲ್ಲಿ ಭಗವಂತನು ಕೈ ಹಿಡಿದು ಮುನ್ನಡೆಸುತ್ತಾನೆ ಎಂದು ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಪುರಾಣದಲ್ಲಿ ನಾವು ಕೇಳಿರುವ ಕಥೆಗಳು, ಅಂಶಗಳು ಯಾವುದೂ ಕಾಲ್ಪನಿಕ ಅಲ್ಲ. ಇದಕ್ಕೆ ಸರಿಯಾದ ಉದಾಹರಣೆ ಎಂದರೆ ಶ್ರೀಕೃಷ್ಣನ ದ್ವಾರಕ ನಗರವು ಸಮುದ್ರದ ಆಳದಲ್ಲಿ ಪತ್ತೆಯಾಗಿರುವುದು. ಹರೇ ರಾಮ ಹರೇ ಕೃಷ್ಣ ಎನ್ನುವ ಸಂಸ್ಥೆಯು ಪ್ರಪಂಚದಲ್ಲಿ ಬೇರೆ ಬೇರೆ ದೇಶದಲ್ಲಿ ಶ್ರೀ ಕೃಷ್ಣನ ಸಂದೇಶವನ್ನು ಸಾರುತ್ತಿದೆ ಎಂದರು.

ಉಪನ್ಯಾಸ ನೀಡಿದ ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಪ್ರಾಂಶುಪಾಲ ಡಾ. ಶ್ರೀಧರ ಮಣಿಯಾಣಿ ಮಾತನಾಡಿ, ಭಾರತದ ಕಲಾಪ್ರಕಾರಗಳಾದ ಸಂಗೀತ, ಸಾಹಿತ್ಯ, ನೃತ್ಯ, ದಾಸ ಪರಂಪರೆ ಶ್ರೀ ಕೃಷ್ಣನ ಪ್ರೇರಣೆಯಿಂದ ಬೆಳೆದಿರುವಂತದ್ದು. ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ, ಅವರ ಭಕ್ತಿ, ಅವರವರ ಕರ್ಮ ಅವರನ್ನು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುವಂತೆ ಮಾಡುತ್ತದೆ. ಶ್ರೀ ಕೃಷ್ಣನ ಜನನದ ಉದ್ದೇಶವೇ ದುಷ್ಟ ಸಂಹಾರ ಶಿಷ್ಟ ಸಂರಕ್ಷಣೆ ಎಂದು ಹೇಳಿದರು.

ಸೌರಭ ಕಲಾ ಪರಿಷತ್‌ನ ಡಾ. ಶ್ರೀವಿದ್ಯಾ ಮುರಳೀಧರ್ ಶಿಷ್ಯ ವೃಂದ ವತಿಯಿಂದ ಶ್ರೀ ಕೃಷ್ಣ ಲಹರಿ ನೃತ್ಯಾವಳಿ ಹಾಗೂ ನೃತ್ಯ ಸೌರಭ ನಾಟ್ಯಲಯ, ವಿದ್ವಾನ್ ಪ್ರಮೋದ್ ಉಳ್ಳಾಲ ಶಿಷ್ಯ ವೃಂದದ ವತಿಯಿಂದ ಶ್ರೀ ಕೃಷ್ಣ ಲೀಲೆ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ದಕ್ಷಿಣ ಕನ್ನಡ ಜಿಲ್ಲಾ ಗೊಲ್ಲ ಸಮಾಜ ಸೇವಾ ಸಂಘ ಅಧ್ಯಕ್ಷ, ಟಿ.ಆರ್. ಕುಮಾರಸ್ವಾಮಿ, ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಅಧ್ಯಕ್ಷ ಎ. ಕೆ ಮಣಿಯಾಣಿ ಬೆಳ್ಳಾರೆ ಮತ್ತಿತರರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ಬಬಿತಾ ಲತೀಶ್ ನಿರೂಪಿಸಿ ವಂದಿಸಿದರು.