ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಬಾಲ್ಯದಲ್ಲಿಯೇ ಮಕ್ಕಳಿಗೆ ಶ್ರೀ ಕೃಷ್ಣನ ಸಂದೇಶವನ್ನು ಪೋಷಕರು, ಶಿಕ್ಷಕರು ತಿಳಿಸಿಕೊಟ್ಟಲ್ಲಿ ಭವಿಷ್ಯದಲ್ಲಿ ಉತ್ತಮ ಸಂಸ್ಕೃತಿ ಸಂಸ್ಕಾರಯುತ ಸಮಾಜ ನಿರ್ಮಾಣವಾಗಲಿದೆ ಎಂದು ಇಲ್ಲಿನ ಪುರಸಭೆ ನೂತನ ಉಪಾಧ್ಯಕ್ಷೆ ರೂಪಾ ಮಂಜುನಾಥ್ ತಿಳಿಸಿದರು.ಸೋಮವಾರ ಪಟ್ಟಣದ ಭವಾನಿರಾವ್ ಕೇರಿಯಲ್ಲಿನ ಮೈತ್ರಿ ಪ್ರಾಥಮಿಕ ಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಕೃಷ್ಣ ಜನ್ಮಾಷ್ಟಮಿ ಸಂಪೂರ್ಣ ಭಾರತದ ಜತೆಗೆ ವಿದೇಶದಲ್ಲಿಯೂ ಆಚರಿಸಲ್ಪಡುವ ಬಹು ಮುಖ್ಯವಾದ ಹಬ್ಬವಾಗಿದ್ದು, ಕೃಷ್ಣ ಜನಿಸಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಭಾರತೀಯ ಸನಾತನ ಪರಂಪರೆಯಲ್ಲಿ ಹಬ್ಬಗಳಿಗೆ ವಿಶೇಷ ಮಹತ್ವವಿದೆ. ಭಾರತೀಯ ಸಂಸ್ಕೃತಿ, ಆಚಾರ, ವಿಚಾರಗಳು ತಮ್ಮದೆ ಆದ ಪ್ರಭಾವವನ್ನು ಬೀರಿದ್ದು ಶಾಲೆಯಲ್ಲಿ ಮಕ್ಕಳಲ್ಲಿ ಬಾಲ್ಯದಲ್ಲಿಯೇ ಉತ್ತಮ ಶಿಕ್ಷಣ ಜೊತೆ ಜೊತೆಯಲ್ಲಿ ಈ ರೀತಿಯ ಕಾರ್ಯಕ್ರಮಗಳ ಮೂಲಕ ಸಂಸ್ಕಾರಯುತ ಶಿಕ್ಷಣ ನೀಡುವುದರ ಮೂಲಕ ಭಾರತೀಯ ಸನಾತನ ಧರ್ಮವನ್ನು ಪರಂಪರೆಯನ್ನು ಪರಿಚಯಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.ಮೈತ್ರಿ ಮಾತೃ ಮಂಡಳಿ ಸದಸ್ಯೆ ಅಪರ್ಣಾ ಗುರುಮೂರ್ತಿ ಮಾತನಾಡಿ, ಸನಾತನ ಪರಂಪರೆಯಲ್ಲಿ ಹಿಂದೂ ಧರ್ಮಕ್ಕೆ ಮಹತ್ವವಿದೆ. ಯಾರು ಧರ್ಮವನ್ನು ರಕ್ಷಿಸುತ್ತಾರೊ ಅವರನ್ನು ಧರ್ಮವು ರಕ್ಷಿಸುತ್ತದೆ. ಕೃಷ್ಣನಿಗೂ ಹಲವಾರು ಕಷ್ಟಗಳು ಎದುರಾದರೂ ಅವುಗಳನ್ನು ಎದುರಿಸಿ ಧರ್ಮವನ್ನು ಕಾಪಾಡಿದ ಯುಗ ಪುರುಷ. ಕೃಷ್ಣನ ಬಾಲ್ಯ ಸುಖಕರವಾಗಿರಲಿಲ್ಲ ಕಷ್ಟಕರವಾಗಿತ್ತು. ತನ್ನ ಮಾವನಿಂದಲೇ ಅವನಿಗೆ ಅಪಾಯಗಳು ಬಂದೊದಗಿದರೂ ಅವುಗಳಿಂದ ಪಾರಾಗುತ್ತಿದ್ದ ಎನ್ನುವುದನ್ನು ಕಥೆಗಳ ಮೂಲಕ ತಿಳಿಸಿದರು. ಇಂದಿನ ಮಕ್ಕಳು ಕಲಿಕೆಯ ಜೊತೆ ಸಂಸ್ಕಾರಗಳನ್ನು ಅಳವಡಿಸಿ ಕೊಳ್ಳಬೇಕು ಹಬ್ಬಗಳನ್ನು ಆಚರಿಸುವುದು ಮಾತ್ರ ಅಲ್ಲ ಅವುಗಳ ಮಹತ್ವ ಅರಿತು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ವಿಶ್ವನಾಥ ಪಿ ಮಾತನಾಡಿ, ಹಿಂದೂಗಳ ಹಬ್ಬವಾದ ಜನ್ಮಾಷ್ಟಮಿಯನ್ನು ವಿಷ್ಣುವಿನ ಎಂಟನೇ ಅವತಾರವಾದ ಭಗವಾನ್ ಕೃಷ್ಣನ ಜನ್ಮ ದಿನವೆಂದು ಆಚರಿಸಲಾಗುವುದು. ಮಹಾಭಾರತದಲ್ಲಿ ಕೃಷ್ಣನ ಪಾತ್ರ ಬಹುಮುಖ್ಯವಾದುದು. ಲೋಕಕಲ್ಯಾಣಕ್ಕಾಗಿ ಕೃಷ್ಣನು ನೀಡಿದ ಸಂದೇಶಗಳು ಸರ್ವಕಾಲಿಕ ಸತ್ಯವಾಗಿದ್ದು ಕೃಷ್ಣನ ಜೀವನವೇ ಸಂದೇಶವಾಗಿ ನಮ್ಮ ಬಾಳನ್ನು ಬೆಳಗಬಹುದು. ಮುರಾರಿ ಅತೀ ಶ್ರೇಷ್ಠ ಜೀವನ ಪಾಠವನ್ನು ನಮ್ಮ ಬದುಕಲ್ಲಿ ಅಳವಡಿಸಿಕೊಂಡರೆ ಅವನ ಶ್ರೀ ರಕ್ಷೆ ಸದಾ ನಮ್ಮ ಬದುಕು ಬೆಳಗಲಿದೆ ಎಂದು ಅರ್ಜುನ ಮತ್ತು ಶ್ರೀ ಕೃಷ್ಣನ ಏಕಪಾತ್ರಾಭಿನಯದ ಮೂಲಕ ವಿದ್ಯಾರ್ಥಿಗಳಿಗೆ ಕೃಷ್ಣ ಜನ್ಮಾಷ್ಟಮಿಯ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ಸೌಮ್ಯ ಮತ್ತು ಹರೀಶ್ ರವರ ಪುತ್ರಿ ಕು.ಖುಷಿಯನ್ನು ಮಾತೃ ಮಂಡಳಿಯ ಮಾತೆಯರು ಮತ್ತು ಶಾಲಾ ಶಿಕ್ಷಕಿಯರು ತೊಟ್ಟಿಲಿಗೆ ಹಾಕುವುದರ ಮೂಲಕ ಜೋಗುಳ ಪದವನ್ನು ಹಾಡಿದರು.
ಯಶೋದೆಯ ವೇಷಭೂಷಣದಲ್ಲಿ ಶಾಲಾ ಮಹಿಳಾ ಪೋಷಕರು ಮತ್ತು ಕೃಷ್ಣ ಮತ್ತು ರಾಧೆಯ ವೇಷಭೂಷಣದಲ್ಲಿ ವಿದ್ಯಾರ್ಥಿಗಳಿಂದ ಕಂಗೂಳಿಸುವುದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಇದೇ ವೇಳೆ ಉತ್ತರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಉಪ ಪ್ರಾಚಾರ್ಯ ಪ್ರಶಾಂತ ಕುಬಸದ ಮತ್ತು ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಕು.ಆದ್ಯ ಮತ್ತು ತಂಡದವರು ಪ್ರಾರ್ಥಿಸಿ,ಸಂಗೀತ ಸ್ವಾಗತಿಸಿ,ಸುನೀತಾ ನಿರೂಪಿಸಿ,ನಾಗಮ್ಮ ವಂದಿಸಿದರು.