ಸಾರಾಂಶ
ರಾಜಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಾಸೋತ್ಸವದ ಅಂಗವಾಗಿ ಡೋಲೋತ್ಸವ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಜಗತ್ತಿನ ಎಲ್ಲ ಭಕ್ತರನ್ನು ಆಕರ್ಷಿಸುವ ದೇವರ ಅವತಾರವೇ ಕೃಷ್ಣ. ಭಕ್ತರ ಭಕ್ತಿಯಿಂದ ಬಹುಬೇಗ ಆಕರ್ಷಿತನಾಗುವ ದೇವರೇ ಕೃಷ್ಣ ಎಂದು ಕೃಷ್ಣಮಠದ ಪರ್ಯಾಯ ಪೀಠಾಧೀಶ, ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.ಅವರು ಸೋಮವಾರ ರಾಜಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಾಸೋತ್ಸವದ ಅಂಗವಾಗಿ ಡೋಲೋತ್ಸವ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಈ ಜಗತ್ತು ನಡೆಯುತ್ತಿರುವುದೇ ಆಕರ್ಷಣೆಯ ಶಕ್ತಿಯಿಂದ ಎಂದು ವಿಜ್ಞಾನ ಹೇಳುತ್ತದೆ. ಅಂತಹ ಶಕ್ತಿಯನ್ನೇ ನಿಯಂತ್ರಿಸುವ ಶಕ್ತಿ ಯಾವುದು ಎಂದು ವಿಜ್ಞಾನ ಹೇಳುವುದಕ್ಕಾಗುವುದಿಲ್ಲ, ಆ ನಿಯಂತ್ರಕ ಶಕ್ತಿಯೇ ಕೃಷ್ಣ ಎಂದು ಶ್ರೀಗಳು ವಿಶ್ಲೇಷಿಸಿದರು.ಕೃಷ್ಣಾವತಾರ ಕಲಿಯುಗಕ್ಕಾಗಿಯೇ ನಡೆದ ಅವತಾರ. ಜಗತ್ತಿನ ಕ್ಷೇಮ, ಶಾಂತಿಗಾಗಿಯೇ ಕೃಷ್ಣನ ಅವತಾರವಾಗಿದೆ. ಅಂತಹ ಕೃಷ್ಣನೇ ಭಕ್ತರ ಭಕ್ತಿಯಿಂದ ಆಕರ್ಷಣೆಗೆ ಒಳಗಾಗುತ್ತಾನೆ, ಭಕ್ತಿಗೆ ಬಹಳ ಬೇಗ ಒಲಿಯುತ್ತಾನೆ. ಅಂತಹ ಕೃಷ್ಣನ ಹೆಚ್ಚೆಚ್ಚು ಭಕ್ತಿಯಿಂದ ಜಗತ್ತಿಗೆ ಹೆಚ್ಚೆಚ್ಚು ಒಳಿತಾಗುತ್ತದೆ. ಜನರಲ್ಲಿ ಭಕ್ತಿಬಾವವನ್ನು ಹೆಚ್ಚಿಸುದಕ್ಕಾಗಿಯೇ ಕೃಷ್ಣ ಸಂದೇಶ ಭಗವದ್ಗೀತೆಯ ಲೇಖನ ಯಜ್ಞವನ್ನು ತಾವು ಆರಂಭಿಸಿದ್ದಾಗಿ ಶ್ರೀಗಳು ಹೇಳಿದರು.
ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥರು ಮತ್ತು ಪುತ್ತಿಗೆ ಮಠದ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.ಖ್ಯಾತ ನೇತೃತಜ್ಞ ಡಾ.ಕೃಷ್ಣಪ್ರಸಾದ್, ಉದ್ಯಮಿಗಳಾದ ಚೆಲ್ಲಡ್ಕ ಕುಸುಮೋಧರ ಶೆಟ್ಟಿ ಮುಂಬೈ, ಸುಧಾಕರ ಪೇಜಾವರ ಯುಎಇ, ಪ್ರೀತಂ ಕುಮಾರ್ ಚೆನೈ ಅವರನ್ನು ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಆರ್‌ಎಸ್‌ಎಸ್ ವಿದ್ಯಾರ್ಥಿ ಪರಿಷತ್‌ನ ಮಿಲಿಂದ್ ಗೋಖಲೆ ಆಗಮಿಸಿದ್ದರು. ಎಸ್.ಎನ್.ಸೇತುರಾಮ್ ಅವರು ಕೃಷ್ಣನ ವ್ಯಕ್ತಿತ್ವದ ಪ್ರಸ್ತುತತೆ ಎಂಬ ಬಗ್ಗೆ ಉಪನ್ಯಾಸ ನೀಡಿದರು.ಶ್ರೀಗಳು ಸೈಕಲ್ ಅಗರಬತ್ತಿ ಅವರು ಪ್ರಾಯೋಜಿಸಿದ 6 ಅಡಿ ಎತ್ತರ ಅಗರಬತ್ತಿಯನ್ನು ಹಚ್ಚಿ ಕೃಷ್ಣನಿಗೆ ಅರ್ಪಿಸಿದರು.