ಸಾರಾಂಶ
ಹಾನಗಲ್ಲ: ಶ್ರೀಕೃಷ್ಣ ಸಂದೇಶಗಳು ಸಾರ್ವಕಾಲಿಕ ಸತ್ಯಗಳಾಗಿದ್ದು, ಧರ್ಮಾಧಾರಿತ ಜೀವನದ ಮೂಲಕ ನೀತಿ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕು ಬೆಳಗಿಸಿಕೊಳ್ಳಲು, ಬದುಕಿನ ಸವಾಲುಗಳನ್ನು ಎದುರಿಸಲು ಬೇಕಾಗುವ ಎಲ್ಲ ಸಂದೇಶಗಳು ಇಲ್ಲಿವೆ ಎಂದು ತಹಸೀಲ್ದಾರ್ ಎಸ್. ರೇಣುಕಮ್ಮ ತಿಳಿಸಿದರು. ಸೋಮವಾರ ಹಾನಗಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮಲ್ಲಿ ಶ್ರೀಕೃಷ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮನುಷ್ಯನ ಒಳಿತು ಕೆಡಕಿನ ಎಲ್ಲ ಸತ್ಯಗಳು ಮಹಾಭಾರತ, ರಾಮಾಯಣದಲ್ಲಿ ನಮಗೆ ಸಿಗತ್ತವೆ. ಇವು ಪೌರಾಣಿಕ ಕಾವ್ಯಗಳಾಗಿವೆ. ಈ ಎರಡೂ ಕಾವ್ಯಗಳು ಕನ್ನಡ ಕವಿಗಳಿಗೆ ಹೆಚ್ಚು ಬರವಣಿಗೆ ಅವಕಾಶವಾಯಿತು. ನಮ್ಮ ಮನಸ್ಸು, ಬುದ್ಧಿ ವಿವೇಕಕ್ಕೆ ಒಳಿತಾದ ಸಂಸ್ಕೃತಿಯ ವಾಹಕಗಳಾಗಿ ಈ ಕಾವ್ಯಗಳಿವೆ. ಭಗವದ್ಗೀತೆ ಎಲ್ಲ ಕಾಲಕ್ಕೂ ಸಲ್ಲುವ, ಧರ್ಮಕ್ಕೆ ಜಯ ಎಂಬ ಸಂದೇಶ ಸಾರಿದ, ಎಲ್ಲರೂ ಪೂಜಿಸುವ, ಅರಿತು ನಡೆಯಲು ಸಹಕಾರಿಯಾದ ಮಹಾ ಗ್ರಂಥ. ಶ್ರೀಕೃಷ್ಣನನ್ನು ಇಡೀ ಜಗತ್ತಿನಾದ್ಯಂತ ಪೂಜಿಸುತ್ತಾರೆ. ಜಾತಿ ಮತದ ಮೇರೆ ಮೀರಿದ ಶ್ರೀ ಕೃಷ್ಣ ಸಂದೇಶಗಳು, ಪ್ರತಿಫಲಾಪೇಕ್ಷೆ ಇಲ್ಲದೆ ಕಾಯಕ ಮಾಡಬೇಕೆಂಬ ಮಾರ್ಗದರ್ಶನ, ಸಮಾಜದ ಹಿತಕ್ಕೆ ಒಡ್ಡಿಕೊಳ್ಳುವ ತಿಳುವಳಿಕೆ ಇಲ್ಲಿದೆ. ಶ್ರೀಕೃಷ್ಣ ಒಂದು ವ್ಯಕ್ತಿಯಾಗದೆ ಶಕ್ತಿಯಾಗಿದ್ದಾನೆ. ದಾಸ ಸಾಹಿತ್ಯದುದ್ದಕ್ಕೂ ಶ್ರೀಕೃಷ್ಣ ಸಂದೇಶಗಳು ಸಿಗುತ್ತವೆ. ಇಡೀ ಮಹಾಭಾರತದಲ್ಲಿ ಅತ್ಯಂತ ಗಣನೀಯ ವ್ಯಕ್ತಿತ್ವವಾಗಿ ಶ್ರೀಕೃಷ್ಣ ಕಾಣಿಸಿಕೊಳ್ಳುತ್ತಾನೆ ಎಂದರು.ಕಾರ್ಯಕ್ರಮದಲ್ಲಿ ಶಾಸಕರ ಮಾದರಿ ಶಾಲೆ ವಿದ್ಯಾರ್ಥಿ ಮಲ್ಲಿಕಾರ್ಜುನ ಶಿಡ್ಲಾಪೂರ ಭಗವದ್ಗೀತೆ ಶ್ಲೋಕಗಳನ್ನು ಪಠಿಸಿದನು. ಗ್ರೇಡ್-೨ ತಹಸೀಲ್ದಾರ್ ರವಿಕುಮಾರ ಕೊರವರ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಿ.ಬಿ. ಹಿರೇಮಠ, ತೋಟಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ ಬಣಕಾರ, ಗೊಲ್ಲರ ಸಮಾಜದ ಮುಖಂಡರಾದ ರಾಜೇಶ ಯಾದವ, ಚೇತನ ಹಾಲಗೊಲ್ಲರ, ಅರ್ಜುನ ಗೊಲ್ಲರ, ಕೃಷ್ಣಪ್ಪ ಗೊಲ್ಲರ, ಗುರು ಗೊಲ್ಲರ, ದೇವೇಂದ್ರಪ್ಪ ತೋಟಗೇರ, ನಾಗರಾಜ ಗೊಲ್ಲರ, ಅಣ್ಣಪ್ಪ ಗೊಲ್ಲರ, ದಾಸಪ್ಪ ಗೊಲ್ಲರ, ಮಾಲತೇಶ ಗೊಲ್ಲರ, ತಿಪ್ಪಣ್ಣ ಹಿರೂರ, ರಮೇಶ ಗೊಲ್ಲರ, ಹನುಮಂತ ಗೊಲ್ಲರ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.