ಲೋಕಕಲ್ಯಾಣಕ್ಕಾಗಿ ರಾಜವೈಭವ ತೊರೆದ ಭಗವಾನ ಮಹಾವೀರ

| Published : Apr 11 2025, 12:37 AM IST

ಸಾರಾಂಶ

ಅಹಿಂಸೊ ಪರಮೋಧರ್ಮ ಎಂಬ ವಾಣಿಯೊಂದಿಗೆ ಲೋಕಕಲ್ಯಾಣಕ್ಕಾಗಿ ರಾಜನಾಗಿದ್ದ ವರ್ಧಮಾನ ರಾಜ ವೈಭವ ತೊರೆದು ಮಹಾವೀರನಾದ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಹಿಂಸೊ ಪರಮೋಧರ್ಮ ಎಂಬ ವಾಣಿಯೊಂದಿಗೆ ಲೋಕಕಲ್ಯಾಣಕ್ಕಾಗಿ ರಾಜನಾಗಿದ್ದ ವರ್ಧಮಾನ ರಾಜ ವೈಭವ ತೊರೆದು ಮಹಾವೀರನಾದ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ಜಿಪಂ ಸಭಾಬವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಭಗವಾನ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲಿಸಿ, ಪುಷ್ಪ ಸಮರ್ಪಿಸಿ ಮಾತನಾಡಿದರು .

ಸದೃಢ ಸಮಾಜ ನಿರ್ಮಾಣಕ್ಕಾಗಿ ಕೆಲವು ದೃಢ ನಿರ್ಧಾರ ತೆಗೆದುಕೊಳ್ಳುವದು ಅನಿವಾರ್ಯವಾಗಿದೆ ಎಂದ ಅವರು, ಎಲ್ಲೆ ಆಗಲಿ ಅನ್ಯಾಯ ನಡೆಯುತ್ತಿದ್ದರೆ ಅದನ್ನು ಸಹಿಸಿಕೊಳ್ಳುವುದು ಕೂಡಾ ಹಿಂಸೆಯಾಗಿದೆ ಎಂದು ಹೇಳಿದರು..

ಜೈನ ಸಮಾಜ ಎಲ್ಲ ಧರ್ಮಗಳಲ್ಲಿ ಶ್ರೇಷ್ಠವಾಗಿದ್ದು, ತನ್ನದೇಯಾದ ಆದರ್ಶ ಹೊಂದಿದೆ ಉಳಿದೆಲ್ಲ ಧರ್ಮಗಳಲ್ಲಿ ಆಚಾರ-ವಿಚಾರಗಳು ಸಹಜವಾಗಿದ್ದರೆ ಜೈನ ಧರ್ಮದ ವಿಚಾರಗಳು ಕಠಿಣ ವ್ರತಗಳಾಗಿದ್ದು ಸಲ್ಲೇಖನದಂತಹ ವ್ರತ ಅತಿ ಕಠಿಣ ವೃತಗಳಲ್ಲಿ ಒಂದಾಗಿದೆ ಎಂದ ಅವರು, ಮಾನವ ಕುಲದ ಒಳಿತನ್ನು ಬಯಸಿದ ಮಹಾವೀರರ ತತ್ವಗಳನ್ನು ನಾವೆಲ್ಲರೂ ಪಾಲಿಸೋಣ ಎಂದರು.

ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಮಾತನಾಡಿ,ಬುದ್ಧ, ಬಸವ, ಮಹಾವೀರರೆಲ್ಲ ನಮ್ಮ ದೇಶದ ಧರ್ಮ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ತಲುಪಿಸಿದ್ದರಿಂದ ಇಂದು ಭಾರತ ಜಾಗತಿಕ ಮನ್ನಣೆ ಪಡೆದುಕೊಂಡಿದೆ ಎಂದು ಹೇಳಿದರು.

ಭಾರತೀಯ ಸಂಸ್ಕ್ರತಿ ವಿದೇಶದಲ್ಲಿಯೂ ಪರಿಣಾಮ ಬೀರಲು ವೀರಸನ್ಯಾಸಿ ಸ್ವಾಮಿ ವಿವೇಕಾನಂದ ಚಿಕ್ಯಾಗೋದಲ್ಲಿ ಭಾಷಣ. ಭಾರತೀಯ ಪರಂಪರೆ ಅದರಂತೆ ಭಗವಾನ ಮಹಾವೀರರ ಸಂದೇಶ ಹಾಗೂ ಸಹಾನುಭೂತಿ ಅವರು ಪ್ರಾಣಿ, ಪಕ್ಷಿಗಳಲ್ಲದೇ ಮನುಷ್ಯರಲ್ಲೂ ಕೂಡಾ ಹಿಂಸೆಯಾಗಬಾರದೆಂಬ ಸತ್ಯವನ್ನು ತೋರಿಸಿಕೊಟ್ಟಿದ್ದಾರೆ. ಜೈನ ಸಮುದಾಯ ಎಲ್ಲ ಧರ್ಮಗಳ ಆಚರಣೆಯಲ್ಲಿ ಪಾಲ್ಗೊಳ್ಳುವುದಲ್ಲದೇ ಮಾನವೀಯ ಮೌಲ್ಯವನ್ನು ಅರಿತ ಧರ್ಮವಾಗಿದೆ ಎಂದು ಹೇಳಿದರು.ಬಸವೇಶ್ವರ ಕಲಾ ಮಹಾವಿದ್ಯಾಲಯದ ಉಪನ್ಯಾಸಕ ಎಸ್.ಡಿ. ಕೆಂಗಲಗುತ್ತಿ ಮಾತನಾಡಿ, ಭಾರತದಲ್ಲಿ ಕಾಲ-ಕಾಲಕ್ಕೆ ಧರ್ಮ ಅವನತಿಯ ಸಂದರ್ಭದಲ್ಲಿ ಒಟ್ಟು 24 ತೀರ್ಥಂಕರರು ಅವತರಿಸಿ ಇಲ್ಲಿಯ ನೆಲಜಲ ಪಾವನ ಮಾಡಿದ್ದಾರೆ. ಅವರಲ್ಲಿ ಮಹಾವೀರ ಅಗ್ರಗಣ್ಯರಾಗಿದ್ದು, ಪ್ರತಿಯೊಬ್ಬರೂ ಅರಿಷಡ್ವರ್ಗಗಳನ್ನು ನಿಗ್ರಹಿಸಿ ಹತೋಟಿಯಲ್ಲಿ ಇಟ್ಟುಕೊಳ್ಳುವುದೇ ಮಾನವ ಜನ್ಮದ ಮೂಲ ಗುರಿಯಾಗಿದ್ದು ಆ ನಿಟ್ಟಿನಲ್ಲಿ ಭಗವಾನ ಮಹಾವೀರರು ಪಂಚತತ್ವಗಳನ್ನು ಬೋಧಿಸಿದರು.

ಅಪರ್ ಜಿಲ್ಲಾಧಿಕಾರಿ ಅಶೋಕ ತೇಲಿ ಹಾಗೂ ಸಮಾಜದ ಮುಖಂಡ ಬೇತಾಳ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್ ಸ್ವಾಗತಿಸಿದರು. ಶಂಕರಲಿಂಗ ದೇಸಾಯಿ ನಿರೂಪನೆ ಮಾಡಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಪುಖರಾಜ ಬೇತಾಳ, ದಿನೇಶ, ಸೋನಿ ಬಾಬುರಾವ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.