ಸಾರಾಂಶ
ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀ ರಾಮ ಶಾಲೆಯಲ್ಲಿ ಹನುಮಂತ ಸಹಿತ ಶ್ರೀ ರಾಮನ ಮೂರ್ತಿಯನ್ನು ಜ.೨೨ರಂದು ಸ್ಥಾಪಿಸಲಾಗುವುದು. ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯವು ಲೋಕಾರ್ಪಣೆಗೊಂಡು ಇದೇ ಜನವರಿಗೆ ಪ್ರತಿಷ್ಠಾ ವಾರ್ಷಿಕೋತ್ಸವವು ನಡೆಯುತ್ತಿರುವ ಕಾಲಘಟ್ಟದಲ್ಲೇ ಈ ಕಾರ್ಯ ನೆರವೇರಲಿದೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಕನ್ನಡ ಮಾತೃ ಭಾಷಾ ಶಿಕ್ಷಣ ಹಾಗೂ ಸಂಸ್ಕಾರ ಶಿಕ್ಷಣದಿಂದ ಗಮನ ಸೆಳೆದಿರುವ ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ರಾಮ ಶಾಲೆಯಲ್ಲಿ ಹನುಮಂತ ಸಹಿತ ಶ್ರೀ ರಾಮನ ಮೂರ್ತಿಯನ್ನು ಜ.೨೨ರಂದು ಸ್ಥಾಪಿಸಲಾಗುವುದು.ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯವು ಲೋಕಾರ್ಪಣೆಗೊಂಡು ಇದೇ ಜನವರಿಗೆ ಪ್ರತಿಷ್ಠಾ ವಾರ್ಷಿಕೋತ್ಸವವು ನಡೆಯುತ್ತಿರುವ ಕಾಲಘಟ್ಟದಲ್ಲೇ ಶ್ರೀ ರಾಮಭಕ್ತ ಹನುಮಂತ ಸಹಿತ ಶ್ರೀ ರಾಮನ ವಿಗ್ರಹವನ್ನು ಶಾಲಾ ಆವರಣದಲ್ಲಿ ಸ್ಥಾಪಿಸಲು ಶಾಲಾಡಳಿತವು ಸಂಕಲ್ಪಿಸಿದೆ. ವಿಗ್ರಹದ ನಿರ್ಮಾಣ ಕಾರ್ಯವು ಪೂರ್ಣಗೊಂಡಿದ್ದು, ಶಿಲಾಮಯ ಗುಡಿಯ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.
ಶ್ರೀ ರಾಮನ ಜೀವನಾದರ್ಶ ಸರ್ವತ್ರ ಮಾನ್ಯತೆಗೆ ಒಳಗಾಗಿದೆ. ಅಂತೆಯೇ ಮಕ್ಕಳಿಗೆ ಶ್ರೀ ರಾಮನಿಂದ ಸತ್ ಪ್ರೇರಣೆ ಲಭಿಸಲಿ ಎಂಬ ಆಶಯದಿಂದ ಶಾಲಾ ಆವರಣದೊಳಗೆ ಶ್ರೀ ರಾಮನ ಮೂರ್ತಿಯನ್ನು ಸ್ಥಾಪಿಸಲು ನಿಶ್ಚಯಿಸಲಾಗಿದೆ ಎಂದು ಶ್ರೀರಾಮ ಶಾಲಾಡಳಿತದ ಅಧ್ಯಕ್ಷ ಸುನಿಲ್ ಅನಾವು ಪ್ರತಿಕ್ರಿಯಿಸಿದ್ದಾರೆ.ನಮ್ಮೆಲ್ಲರ ಆರಾಧ್ಯಮೂರ್ತಿ ಶ್ರೀ ರಾಮನನ್ನು ನಮಿಸಿ - ಸ್ಮರಿಸಿ ಕಲಿಕೆಯನ್ನು ಪ್ರಾರಂಭಿಸಲು ಅವಕಾಶವನ್ನು ಕಲ್ಪಿಸುವ ಸಲುವಾಗಿ ಶಾಲಾ ಆವರಣದಲ್ಲಿ ಶ್ರೀರಾಮನ ಮೂರ್ತಿ ಸ್ಥಾಪನೆಯಾಗುತ್ತಿದೆ. ಇದರಿಂದಾಗಿ ದೇವ ಸ್ವರೂಪಿ ಮಕ್ಕಳಿಗೆ ದೇವರನ್ನು ತೀರಾ ಹತ್ತಿರದಿಂದ ಪೂಜಿಸುವ ಅವಕಾಶ ಪ್ರಾಪ್ತಿಯಾದಂತಾಗಿದೆ ಎಂದು ಶಾಲಾ ಪೋಷಕ ಸಂಘದ ಅಧ್ಯಕ್ಷ ಉದಯ ಅತ್ರಮಜಲು ಸಂತಸ ವ್ಯಕ್ತಪಡಿಸಿದ್ದಾರೆ.