ಪೂಜೆಗೆ ಮೊಲ ಸಿಗದೆ ದೇವಾಲಯದಿಂದ ಹೊರಗೇ ಉಳಿದ ಉತ್ಸವಮೂರ್ತಿ

| Published : Jan 17 2024, 01:50 AM IST

ಸಾರಾಂಶ

ಇದೊಂದು ಅನೂಚಾನವಾದ ಸಂಪ್ರದಾಯ. ಸೂರ್ಯಾಸ್ತವಾದರೂ ಮೊಲ ಎಲ್ಲೂ ಸಿಗದ ಹಿನ್ನೆಲೆಯಲ್ಲಿ ದೇವರಮೂರ್ತಿಯನ್ನು ಇಡೀ ರಾತ್ರಿ ಅಲ್ಲಿಯೇ ಕೂರಿಸಲಾಗುತ್ತದೆ ಎಂದು ಎಸ್.ನೆರಲಕೆರೆ ಗ್ರಾಮಸ್ಥರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಮೊಲ ಸಿಗದೆ ದೇವರಮೂರ್ತಿಗಳನ್ನು ದೇವಾಲಯಕ್ಕೆ ಕರೆದೊಯ್ಯುವಂತಿಲ್ಲ ಪೂಜೆಯೂ ಇಲ್ಲ ಇಂತಹದೊಂದು ಆಚರಣೆಗೆ ಸಾಕ್ಷಿಯಾಗಿದ್ದು, ಹೊಸದುರ್ಗ ತಾಲೂಕಿನ ಎಸ್.ನೆರಲಕೆರೆ ಗ್ರಾಮದ ಕಟ್ಟೆ ರಂಗನಾಥಸ್ವಾಮಿ ದೇಗುಲ.ಸಂಕ್ರಾಂತಿ ಹಬ್ಬದ ಮರುದಿನ ಮೊಲ ಹಿಡಿದು ತಂದು ಮೊಲಕ್ಕೆ ಓಲೆ ಹಾಕಿ ಪೂಜೆ ಮಾಡಿ ಬಿಡುವ ಸಂಪ್ರದಾಯ ರೂಢಿಯಲ್ಲಿದೆ. ಅದರಂತೆ ಮಂಗಳವಾರ ನಿಯೋಜಿತ ದಾಸಪ್ಪನವರು ಬೆಳಿಗ್ಗೆ ಕಟ್ಟೆ ರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸಿ ಮೊಲ ಹಿಡಿಯಲು ಕಾವಲು ಪ್ರದೇಶಕ್ಕೆ ತೆರೆಳಿದರು. ಸಾಮಾನ್ಯವಾಗಿ 12 ಗಂಟೆಯೊಳಗೆ ಮೊಲ ಸಿಗುತ್ತಿತ್ತು ಆದರೆ ಮಧ್ಯಾಹ್ನವಾದರೂ ಮೊಲ ಸಿಗಲಿಲ್ಲ.ಮತ್ತೆ ಗ್ರಾಮಕ್ಕೆ ಬಂದ ದಾಸಪ್ಪಗಳು ಮತ್ತೆ ಪೂಜೆ ಸಲ್ಲಿಸಿ ಮೊಲ ಹಿಡಿಯಲು ತೆರಳಿದರು ಸೂರ್ಯಾಸ್ತವಾದರೂ ಮೊಲ ಎಲ್ಲೂ ಸಿಗಲಿಲ್ಲ ಹಾಗಾಗಿ ಉರೊಳಗಿನ ದೇವಾಲಯದಿಂದ ಕರೆ ತರಲಾಗಿದ್ದ, ಉತ್ಸವ ಮೂರ್ತಿಯನ್ನು ಊರ ಮುಂಭಾಗದ ಮೂಲ ದೇವಾಲಯದ ಬಳಿ ಇರುವ ಮಂಟಪದಲ್ಲಿ ಕೂರಿಸಲಾಗಿತ್ತು. ಮೊಲ ಸಿಗದ ಹಿನ್ನೆಲೆಯಲ್ಲಿ ಇಡೀ ರಾತ್ರಿ ಅಲ್ಲಿಯೇ ಕೂರಿಸಲಾಗುತ್ತದೆ ಎಂದು ಸ್ಥಳೀಯರು ತಿಳಿಸಿದರು.

ಮತ್ತೆ ಬುಧವಾರ ಬೆಳಿಗ್ಗೆ ನಿಯೋಜಿತ ದಾಸಪ್ಪಗಳು ಎಂದಿನಂತೆ ಪೂಜೆ ಸಲ್ಲಿಸಿ ಮೊಲ ಹಿಡಿಯಲು ಹೋಗುತ್ತಾರೆ. ಮೊಲ ಸಿಗಬೇಕು ಎಲ್ಲಿಯವರೆಗೆ ಮೊಲವು ಸಿಗೋದಿಲ್ಲವೋ, ಅಲ್ಲಿಯವರೆಗೂ ದೇವರಿಗೆ ಪೂಜೆಯು ಇಲ್ಲಾ ನೇವೈದ್ಯವೂ ಇಲ್ಲ. ಅದು ಒಂದು ದಿನವಾಗಬಹುದು ಅಥವಾ ಮೂರು ದಿನವಾಗಬಹುದು ಎನ್ನುತ್ತಾರೆ ಗ್ರಾಮಸ್ಥರು.

ಬರದ ಮುನ್ಸೂಚನೆ: ಒಂದೇ ಊರಿನಲ್ಲಿ ಮೊಲ ಸಿಕ್ಕರೆ ಆ ವರ್ಷದಲ್ಲಿ ಉತ್ತಮ ಮಳೆ ಬೆಳೆಯಾಗುತ್ತಿದೆ ಎಂಬ ನಂಬಿಕೆ ಇದೆ. ಮೂರು ನಾಲ್ಕು ಊರಿನಲ್ಲಿ ಮೊಲ ಸಿಕ್ಕರೆ ಆ ವರ್ಷದಲ್ಲಿ ಮಳೆ ಬೆಳೆಯಲ್ಲಿ ಹಿನ್ನಡೆಯಾಗುತ್ತದೆ ಎಂಬ ನಂಬಿಕೆ ಇದೆ. ಈ ಬಾರಿ ಮೊಲ ಸಿಗದೇ ಇರುವುದು ಈ ವರ್ಷವೂ ಬರಗಾಲದ ಮುನ್ಸೂಚನೆ ಎನ್ನುತ್ತಾರೆ ಗ್ರಾಮದ ಹಿರಿಯರು.