ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ: ತಪ್ಪಿದ ಅನಾಹುತ

| Published : Jan 09 2024, 02:00 AM IST

ಸಾರಾಂಶ

ಶಿರಾಳಕೊಪ್ಪ ಪಟ್ಟಣದ ಕೆಳಗಿನಕೇರಿಯ ರಸ್ತೆಯ ಜಾಗದಲ್ಲಿದ್ದ ವಿದ್ಯುತ್ ಕಂಬಕ್ಕೆ ಸೋಮವಾರ ಬೋರ್‌ವೆಲ್ ಲಾರಿ ಡಿಕ್ಕಿಯಾಗಿದ್ದು, ಅದೃಷ್ಟವಶಾತ್‌, ಕಂಬವು ಮುರಿದುಬೀಳದೇ, ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಸ್ಥಳೀಯರು ಲಾರಿ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ

ಪಟ್ಟಣದ ಕೆಳಗಿನಕೇರಿಯ ದುರ್ಗಾಂಬಾ ದೇವಸ್ಥಾನಕ್ಕೆ ಹೋಗುವ ವೃತ್ತದಲ್ಲಿದ್ದ ವಿದ್ಯುತ್ ಕಂಬಕ್ಕೆ ಬೋರ್‌ವೆಲ್ ಲಾರಿ ಡಿಕ್ಕಿಯಾಗಿದ್ದು, ಅದೃಷ್ಟವಶಾತ್‌, ಕಂಬವು ಮುರಿದುಬೀಳದೇ, ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

ಸೋಮವಾರ ಬೆಳಗ್ಗೆ ದುರ್ಗಾಂಬಾ ದೇವಸ್ಥಾನ ಬಳಿ ಕೊಳವೆಬಾವಿ ಕೊರೆಯಲು ಈ ಲಾರಿಯನ್ನು ಸಿಬ್ಬಂದಿ ತಂದಿದ್ದರು. ಈ ವೇಳೆ ಕಂಬಕ್ಕೆ ಲಾರಿ ಡಿಕ್ಕಿಯಾಗಿದೆ. ಇದೇ ಸಮಯದಲ್ಲಿ ವಿದ್ಯುತ್‌ ಸಂಪರ್ಕ ಇರಲಿಲ್ಲ. ಇದರಿಂದಾಗಿ ಲಾರಿಸಹಿತ ಹತ್ತಿರದಲ್ಲಿದ್ದ ನಾಗರಿಕರು ಸ್ವಲ್ಪದರಲ್ಲಿ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ. ವಿದ್ಯುತ್ ಕಂಬದ ಬುಡಕ್ಕೆ ಗಂಭೀರ ಹಾನಿಯಾಗಿದೆ. ಯಾವುದೇ ಕ್ಷಣದಲ್ಲಿ ಮುರಿದುಬೀಳುವ ಹಂತದಲ್ಲಿದೆ.

ನಾಗರಿಕರ ಆಕ್ರೋಶ:

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯ ನಾಗರಿಕರು ಲಾರಿ ಚಾಲಕನಿಗೆ ತರಾಟೆಗೆ ತೆಗೆದುಕೊಂಡರು. ತಕ್ಷಣ ಮೆಸ್ಕಾಂಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಸ್ಥಳಕ್ಕೆ ಮೆಸ್ಕಾಂ ಎಂಜಿನಿಯರ್ ಮತ್ತು ಸಿಬ್ಬಂದಿ ಆಗಮಿಸಿ, ಸ್ಥಳ ಪರಿಶೀಲಿಸಿ, ವಿದ್ಯುತ್ ಕಂಬ ಬದಲಿಸುವ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಈ ಸಂದರ್ಭ ಪುರಸಭೆ ಸದಸ್ಯ ರಾಘವೇಂದ್ರ, ಎಸ್.ಒ.ಭೀಮಪ್ಪ, ನಾಗಭೂಷಣ ಸೇರಿದಂತೆ ಹಲವರು ಇದ್ದರು.

- - -

ಕೋಟ್‌ ಈ ರಸ್ತೆಯಲ್ಲಿ ಪ್ರತಿದಿನ ಸಾಕಷ್ಟು ವಾಹನಗಳು ಜನರು ಸಂಚರಿಸುತ್ತಾರೆ. ಸಂಚಾರಕ್ಕೆ ಅಡ್ಡಿಯಾಗಿರುವ ವಿದ್ಯುತ್‌ ಕಂಬವನ್ನು ರಸ್ತೆ ಬದಿಗೆ ಸರಿಯಾಗಿ ಅಳವಡಿಸುವಂತೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಆದರೂ, ಮೆಸ್ಕಾಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಗಂಭೀರ ಅನಾಹುತಗಳು ಸಂಭವಿಸುವ ಮುನ್ನವೇ ಸೂಕ್ತ ಕ್ರಮ ಕೈಗೊಳ್ಳಲಿ

- ರಾಘವೇಂದ್ರ, ಸದಸ್ಯ, ಪುರಸಭೆ, ಶಿರಾಳಕೊಪ್ಪ

- - - -8ಕೆಪಿ1: ಬೋರ್‌ವೆಲ್‌ ಲಾರಿ ಡಿಕ್ಕಿ ಹೊಡೆದಿದ್ದರಿಂದ ಜಖಂಗೊಂಡಿರುವ ವಿದ್ಯುತ್ ಕಂಬ.