ಸಾರಾಂಶ
ಅಪಘಾತವಾಗುತ್ತಿದ್ದಂತೆ ಲಾರಿಯ ಚಕ್ರದಡಿ ಬಾಲಕಿ ಸಿಲುಕಿದ್ದು ತಲೆಯ ಮೇಲೆ ಚಕ್ರ ಹರಿದ ಪರಿಣಾಮ ತಲೆ ನುಜ್ಜುಗುಜ್ಜಾಗಿದ್ದು, ತಂದೆ ಹಾಗೂ ಅಜ್ಜಿ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಘಟನಾ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದಾಬಸ್‍ಪೇಟೆ: ಬೈಕಿನಲ್ಲಿ ಚಲಿಸುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಂಪುರ ಹೋಬಳಿಯ ಎಡೇಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 48ರ ತುಮಕೂರು- ಬೆಂಗಳೂರು ರಸ್ತೆಯ ಜಿಂದಾಲ್ ಶಾಲೆಯ ಮುಂಭಾಗ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಟಿ.ಎನ್.ಕೋಟೆ ಗ್ರಾಮದ ವಿಭಾ (4) ಮೃತಪಟ್ಟ ಬಾಲಕಿಯಾಗಿದ್ದು, ಜು.14ರಂದು ಸಂಜೆ 4.30 ಗಂಟೆಯ ಸಮಯದಲ್ಲಿ ಮೃತಪಟ್ಟ ಬಾಲಕಿಯ ತಂದೆ ಚಲಮೇಶ್ ಹಾಗೂ ಅಜ್ಜಿ ಲಕ್ಷ್ಮೀದೇವಿ ಜೊತೆ ಪರಶುರಾಮಪುರದಿಂದ ಬೆಂಗಳೂರಿಗೆ ಬರುವಾಗ ಜಿಂದಾಲ್ ಶಾಲೆಯ ಮುಂಭಾಗದ ತಿರುವಿನಲ್ಲಿ ಲಾರಿ ತಿರುಗಿಸಿಕೊಳ್ಳುವಾಗ ಬೈಕ್ ಗೆ ಡಿಕ್ಕಿ ಹೊಡೆದಿದೆ.ನಜ್ಜುಗುಜ್ಜಾದ ತಲೆ:ಅಪಘಾತವಾಗುತ್ತಿದ್ದಂತೆ ಲಾರಿಯ ಚಕ್ರದಡಿ ಬಾಲಕಿ ಸಿಲುಕಿದ್ದು ತಲೆಯ ಮೇಲೆ ಚಕ್ರ ಹರಿದ ಪರಿಣಾಮ ತಲೆ ನುಜ್ಜುಗುಜ್ಜಾಗಿದ್ದು, ತಂದೆ ಹಾಗೂ ಅಜ್ಜಿ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಘಟನಾ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾಲಿಗೆ ಗಂಭೀರ ಗಾಯ:ಅಪಘಾತದಲ್ಲಿ ಮೃತಪಟ್ಟ ಬಾಲಕಿ ತಂದೆ ಹಾಗೂ ಅಜ್ಜಿಯ ಕಾಲಿಗೆ ಗಂಭೀರ ಗಾಯಗಳಾಗಿದ್ದು, ದಾಬಸ್‍ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ನೆಲಮಂಗಲಕ್ಕೆ ತೆರಳಿದ್ದಾರೆ.
ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.