ಬಂಡೀಪುರ ಬಳಿ ಬ್ರೇಕ್‌ ಫೇಲ್‌ನಿಂದ ಲಾರಿ ಪಲ್ಟಿ

| Published : Oct 06 2024, 01:20 AM IST

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದು ಹೋಗುವ ಮೈಸೂರು-ಊಟಿ ಹೆದ್ದಾರಿಯಲ್ಲಿ ಉರುಳಿ ಬಿದ್ದ ಲಾರಿಯಡಿ ಸಿಲುಕಿದ್ದ ಚಾಲಕ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಲಾರಿಯ ಬ್ರೇಕ್‌ ಫೇಲಾಗಿ ಮೈಸೂರು-ಊಟಿ ಹೆದ್ದಾರಿ ಬದಿಯ ಹಳ್ಳಕ್ಕೆ ಉರುಳಿ ಬಿದ್ದ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದ್ದು, ಲಾರಿಯಡಿಗೆ ಸಿಲುಕಿದ್ದ ಚಾಲಕನ ಜೀವ ಉಳಿಸುವಲ್ಲಿ ಗುಂಡ್ಲುಪೇಟೆ ಪೊಲೀಸರು ಸಫಲರಾಗಿದ್ದಾರೆ.

ಕೆಎ 03 ಎಬಿ 2233 ನಂಬರಿನ ರಬ್ಬರ್‌ ಗೊಬ್ಬರ ತುಂಬಿದ ಲಾರಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗಿನ ಮೈಸೂರು-ಊಟಿ ಹೆದ್ದಾರಿಯ ಇಳಿಜಾರಿನಲ್ಲಿ ಬರುವಾಗ ಲಾರಿ ಬ್ರೇಕ್‌ ಪೇಲಾಗಿದ್ದು, ಲಾರಿ ಚಾಲಕನ ಆಯತಪ್ಪಿ ಹೆದ್ದಾರಿಯ ಬಲ ಭಾಗಕ್ಕೆ ಉರುಳಿ ಬಿದ್ದಿದೆ. ಲಾರಿ ಉರುಳಿ ಬಿದ್ದ ಕಾರಣ ಚಾಲಕ ತಮಿಳುನಾಡಿನ ಸತ್ಯಮಂಗಲದ ಹನೀಪ್‌ ಲಾರಿಯಡಿಗೆ ಸಿಲುಕಿದ್ದಾನೆ. ಇದೇ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ತೆರಳುತ್ತಿದ್ದ ಗುಂಡ್ಲುಪೇಟೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಎಸ್.ಪರಶಿವಮೂರ್ತಿ, ಸಬ್ಇನ್ಸ್‌ಪೆಕ್ಟರ್‌ ಸಾಹೇಬಗೌಡ ಆರ್‌.ಬಿ ಲಾರಿ ಉರುಳಿ ಬಿದ್ದಿದ್ದನ್ನು ಕಂಡು ಇಳಿದಾಗ ಚಾಲಕ ಲಾರಿಯಡಿಗೆ ಸಿಲುಕು ಒದ್ದಾಡುತ್ತಿದ್ದ.

ಇದನ್ನು ಕಂಡ ಪೊಲೀಸರು ತುರ್ತಾಗಿ ಜೆಸಿಬಿ ಹಾಗೂ ಕ್ರೇನ್‌ ಕರೆಸಲು ಹೇಳಿದ್ದಾರೆ ಅಲ್ಲದೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗೋಪಾಲಸ್ವಾಮಿ ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ಕೂಡ ಸ್ಥಳಕ್ಕಾಗಮಿಸಿದರು. ಲಾರಿಯಡಿ ಸಿಲುಕಿ ನರಳಾಡುತ್ತಿದ್ದ ಚಾಲಕನ ಪರಿಸ್ಥಿತ ಕಂಡು ಪೊಲೀಸರು ಕ್ರೇನ್‌ ಮೂಲಕ ಉರುಳಿ ಬಿದ್ದ ಲಾರಿಯನ್ನು ಮೇಲೆತ್ತುವಾಗ ಚಾಲಕನ ಹಿಡಿದು ಸ್ಟೇಚರ್‌ಗೆ ಹಾಕಿ ಗುಂಡ್ಲುಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸುವಲ್ಲಿ ಪೊಲೀಸರು ಹಾಗು ಅಗ್ನಿಶಾಮಕದ ಸಿಬ್ಬಂದಿ ಸಫಲರಾದರು.

ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ಬಳಿಕ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಚಾಲಕ ಹನೀಪ್‌ನನ್ನು ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎಂದು ಸಬ್‌ ಇನ್ಸ್ ಪೆಕ್ಟರ್‌ ಸಾಹೇಬ ಗೌಡ ಆರ್‌.ಬಿ ಕನ್ನಡಪ್ರಭಕ್ಕೆ ತಿಳಿಸಿದರು.ಪೊಲೀಸರ ಶ್ರಮ, ಸಮಯಪ್ರಜ್ಞೆಯಿಂದ ಚಾಲಕ ಬದುಕಿದ!

ಲಾರಿ ಬ್ರೇಕ್‌ ಪೇಲಾಗಿ ಹೆದ್ದಾರಿ ಬದಿಗೆ ಪಲ್ಟಿಯಾದ ಲಾರಿಯಡಿ ಸಿಲುಕಿ ನರಳುತ್ತಿದ್ದ ಚಾಲಕನ ಜೀವ ಉಳಿಸಲು ಪೊಲೀಸರ ಶ್ರಮ ಎದ್ದು ಕಾಣುತ್ತಿದೆ. ಅಪಘಾತದ ಬಳಿಕ ಪೊಲೀಸರು ಬರುವುದು ತಡವಾಗಿದ್ದರೂ ಚಾಲಕ ಬದುಕುಳಿಯುತ್ತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪೊಲೀಸರು ಕ್ರೇನ್‌ ತರಿಸಿ, ಕ್ರೇನ್‌ ಮೂಲಕ ಉರುಳಿ ಬಿದ್ದ ಲಾರಿ ಮೇಲೆತ್ತಿಸಿ, ಚಾಲಕನ ಆಸ್ಪತ್ರೆಗೆ ಸಾಗಿಸುವ ಮೂಲಕ ಚಾಲಕನ ಜೀವ ಉಳಿಸುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ.