ಸಾರಾಂಶ
ಚಿಂಚೋಳಿ ತಾಲೂಕಿನ ಕಿಷ್ಟಾಪೂರ ಗ್ರಾಮದ ಕಲ್ಲುಗಣಿಯಿಂದ ಪರಸಿ ತುಂಬಿಕೊಂಡು ತೆಲಂಗಾಣ ರಾಜ್ಯದ ತಾಂಡೂರ ಕಡೆಗೆ ಹೊರಟಿದ್ದ ಲಾರಿ ಮಿರಿಯಾಣ ಗ್ರಾಮದ ತಿರುವಿನಲ್ಲಿ ಸಂಭವಿಸಿದ ಘಟನೆಯಲ್ಲಿ 16 ಗಣಿ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಕಿಷ್ಟಾಪೂರ ಗ್ರಾಮದ ಕಲ್ಲುಗಣಿಯಿಂದ ಪರಸಿ ತುಂಬಿಕೊಂಡು ತೆಲಂಗಾಣ ರಾಜ್ಯದ ತಾಂಡೂರ ಕಡೆಗೆ ಹೊರಟಿದ್ದ ಲಾರಿ ಮಿರಿಯಾಣ ಗ್ರಾಮದ ತಿರುವಿನಲ್ಲಿ ಸಂಭವಿಸಿದ ಘಟನೆಯಲ್ಲಿ 16 ಗಣಿ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಘಟನೆಯಲ್ಲಿ ಒರ್ವ ಗಣಿ ಕಾರ್ಮಿಕ ಮೃತಪಟ್ಟಿದ್ದಾನೆ ಎಂದು ಮಿರಿಯಾಣ ಪೋಲಿಸರು ತಿಳಿಸಿದ್ದಾರೆ.ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಿರಿಯಾಣ ಗ್ರಾಮದ ಈರಪ್ಪ ಚಂದ್ರಕಾಂತ(45) ಎಂಬಾತನನ್ನು ಬೀದರ್ ಜಿಲ್ಲೆಯ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ನಸುಕಿನಲ್ಲಿ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಗಣಿಕಾರ್ಮಿಕರಾದ ಮಂಜುಳಾ, ಈರಮ್ಮ, ವೆಂಕಮ್ಮ, ಸಾಯಬಣ್ಣ, ಪ್ರಭು, ಶಾಂತಮ್ಮ ಇವರು ಗಾಯಗೊಂಡಿದ್ದರಿಂದ ಚಿಂಚೋಳಿ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಾ.ಸಂತೋಷ ಪಾಟೀಲ, ಡಾ.ಮಹಮ್ಮದ ಗಫಾರ ಅಹೆಮದ ಮತ್ತು ಆಸ್ಪತ್ರೆ ವೈದ್ಯರು, ನರ್ಸ್‌ಗಳು ಪ್ರಥಮ ಚಿಕಿತ್ಸೆ ನೀಡಿದ ನಂತರ ಕಲಬುರಗಿ, ಬೀದರ್, ತಾಂಡೂರಿಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ.
ಮಿರಿಯಾಣ ಕಿಷ್ಟಾಪೂರ ಗಣಿಯಿಂದ ಪರಸಿ ತುಂಬಿಕೊಂಡು ಹೊರಟಿದ್ದ ಲಾರಿ ಮೇಲೆ ಕುಳಿತಿದ್ದ ಗಣಿಕಾರ್ಮಿಕರು ಲಾರಿ ಚಾಲಕನ ನಿರ್ಲಕ್ಷತನದಿಂದಾಗಿ ಲಾರಿ ಪಲ್ಟಿಯಾಗಿ ಕಲ್ಲುಪರಸಿಯೊಳಗೆ ಸಿಕ್ಕಿಕೊಂಡಿದ್ದ ಗಣಿಕಾರ್ಮಿಕರನ್ನು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಎಲ್ಲ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಕೂಡಲೇ ಅವರನ್ನು ಚಿಂಚೋಳಿ ಸರಕಾರಿ ಸಾರ್ವಜನಿಕ ಅಸ್ಪತ್ರೆಗೆ ಸಾಗಿಸಿದ್ದಾರೆ.ಘಟನಾ ಸ್ಥಳಕ್ಕೆ ಜಿಲ್ಲಾ ಎಸ್‌ಪಿ ಶ್ರೀನಿವಾಸಲೂ, ಡಿವೈಎಸ್‌ಪಿ ಸಂಗಮನಾಥ ಹಿರೇಮಠ, ಸಿಪಿಐ ಎಲ್.ಎಚ್. ಗೌಂಡಿ, ಪಿಎಸ್‌ಐ ಮಡಿವಾಳಪ್ಪ, ಚಿಂಚೋಳಿ ಪಿಎಸ್‌ಐ ಗಂಗಮ್ಮ ಭೇಟಿ ನೀಡಿ ಪರಿಶೀಲಿಸಿ ಚಾಲಕ ಕೃಷ್ಣ ವಿರುದ್ದ ಮಿರಿಯಾಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
;Resize=(128,128))
;Resize=(128,128))