ಸಾರಾಂಶ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಪಟ್ಟಣದ ಪೊಲೀಸ್ ಠಾಣೆಯ ಮುಂದೆ ಮರಳು ತುಂಬಿದ ಲಾರಿಗಳು, ಸಾಮರ್ಥ್ಯ ಮೀರಿ ಸಾಗಾಟ ಮಾಡುತ್ತಿದ್ದರೂ ತಾಲೂಕು ಮಟ್ಟದ ಕಾರ್ಯಪಡೆ ಮಾತ್ರ ಕಂಡು ಕಾಣದಂತೆ ಇದೆ.ಕೊಟ್ಟೂರು ತಾಲೂಕಿನ ಅಲಬೂರು ಗ್ರಾಮದ ಮರಳಿನ ಸ್ಟಾಕ್‌ಯಾರ್ಡ್‌ನಿಂದ ಪಾಸ್ ಪಡೆದು ಮರಳು ತುಂಬಿಕೊಂಡು ಬರುವ ಲಾರಿಗಳಲ್ಲಿ ಸಾಮರ್ಥ್ಯ ಮೀರಿ ಮರಳು ಸಾಗಾಟ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇಂತಹ ಲಾರಿಗಳನ್ನು ತಾಲೂಕು ಮಟ್ಟದ ಕಾರ್ಯ ಪಡೆಯ ಯಾವೊಬ್ಬ ಅಧಿಕಾರಿಗಳು ಹಿಡಿದು ದಂಡ ಹಾಕುವ ಪ್ರಯತ್ನ ಮಾಡುತ್ತಿಲ್ಲ. ಲಾರಿಗಳ ಸಾಮರ್ಥ್ಯ ಮೀರಿ ಮರಳು ಸಾಗಾಣೆಯಿಂದ ರಸ್ತೆಗಳಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿವೆ.
ನಿತ್ಯ ಬೆಳಗಾಗುತ್ತಲೇ ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಲ್ಲಿ ಮರಳು ತುಂಬಿಕೊಂಡು ಲಾರಿಗಳು ಸಂಚರಿಸುತ್ತಿವೆ. ಆದರೆ ಲಾರಿಗಳ ಮಾಲೀಕರಿಗೆ ಪೊಲೀಸರ ಭಯ ಇಲ್ಲದಂತೆ ವರ್ತಿಸುತ್ತಿರುವ ಹಿಂದೆ ಹಲವು ಸಂಶಯ ಕಾಡುತ್ತಿವೆ. ಸಣ್ಣಪುಟ್ಟ ತಪ್ಪುಗಳಿಗೆ ಪೊಲೀಸರು ಠಾಣೆಗೆ ಕರೆದು ಕೇಸ್ ಹಾಕುತ್ತಾರೆ, ಆದರೆ ಠಾಣೆ ಮುಂದೆಯೇ ಸಾಮರ್ಥ್ಯ ಮೀರಿ ಮರಳು ಸಾಗಾಣೆ ಮಾಡುವ ಲಾರಿಗಳ ವಿರುದ್ಧ ಕ್ರಮ ಯಾಕಿಲ್ಲ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.ಹಗಲು ಹೊತ್ತಿನಲ್ಲಿ ಕಾನೂನು ಮೀರಿ ಲಾರಿಗಳಲ್ಲಿ ಮರಳು ಸಾಮರ್ಥ್ಯ ಮೀರಿ ಸಾಗಾಣಿಕೆ ಮಾಡುತ್ತಿವೆ. ಲಾರಿಗೆ ಜಿಪಿಎಸ್ ಇದೆಯೋ, ಇಲ್ಲವೋ?, ಮರಳು ಸಾಗಾಣೆ ಮಾಡಲು ಎಲ್ಲಿಂದ ಎಲ್ಲಿಗೆ ಅಧಿಕೃತ ಪಾಸ್ ಪಡೆದಿದ್ದಾರೆ ಎಂಬ ಇತ್ಯಾದಿ ಮಾಹಿತಿ ಪರಿಶೀಲನೆ ಮಾಡುವ ಗೋಜಿಗೆ, ಅಧಿಕಾರಿಗಳು ಹೋಗದಿರುವ ಹಿಂದಿನ ಕಾರಣವೇನು? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ.
ತಾಲೂಕ ಮಟ್ಟದ ಅಕ್ರಮ ಮರಳು ತಡೆಗೆ ಕಾರ್ಯಪಡೆ ರಚನೆಯಾಗಿದೆ. ಇದರಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ, ಪೊಲೀಸ್, ಆರ್‌ಟಿಓ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳು ಸಮಿತಿ ಸದಸ್ಯರಿದ್ದಾರೆ. ಲಾರಿಗಳು ಎಷ್ಟು ಮರಳು ತುಂಬಿಕೊಂಡು ಹೋಗುತ್ತಿವೆ ಎಂದು ಚೆಕ್ ಮಾಡುವುದು ನಮ್ಮ ಕೆಲಸವಲ್ಲ ಇದಕ್ಕೆ ಆರ್‌ಟಿಓ ಇರುತ್ತಾರೆಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಹಾಗಾದರೇ ಅನೇಕ ಕಡೆಗಳಲ್ಲಿ ಪೊಲೀಸರೇ ಮರಳು ತುಂಬಿದ ಲಾರಿ ಹಿಡಿದು ಪರಿಶೀಲನೆ ಯಾಕೆ ಮಾಡುತ್ತಾರೆ ಬೇಕಾದಾಗ ನಮ್ಮ ಕೆಲಸ ಬೇಡವಾದಲ್ಲಿ ಅದು ನಮ್ಮ ಕೆಲಸ ಅಲ್ಲ ಎಂದು ನುಣುಚಿಕೊಳ್ಳುವ ಪ್ರಸಂಗಗಳೇ ಹೆಚ್ಚಾಗುತ್ತಿವೆ. ಲಾರಿಗಳಲ್ಲಿ ಸಾಮರ್ಥ್ಯ ಮೀರಿ ಮರಳು ಸಾಗಾಣೆಯಿಂದ ಮರಳಿನ ಸ್ಟಾಕ್‌ಯಾರ್ಡ್ ಗುತ್ತಿಗೆ ಪಡೆದ ಮಾಲೀಕರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಆದರೆ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಇದಕ್ಕೆ ಕಡಿವಾಣ ಯಾವಾಗ? ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.ತುಂಗಭದ್ರಾ ನದಿ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿ ತುಂಬಿ ಹರಿಯುತ್ತಿದೆ. ಈವರೆಗೂ ನದಿ ತೀರದಲ್ಲಿ ಮರಳಿನ ಸ್ಟಾಕ್‌ಯಾರ್ಡ್ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಒಂದು ವೇಳೆ ನಡೆದಿದ್ದರೂ ನದಿಯಿಂದ ಮರಳು ಹೊರಗೆ ತೆಗೆಯಲು ಅವಕಾಶವಿಲ್ಲ, ಆದರಿಂದ ನದಿ ತೀರ ಹೊರತುಪಡಿಸಿ ಉಳಿದ ಕಡೆಯಲ್ಲಿನ ಮರಳಿಗೆ ಭಾರಿ ಬೇಡಿಕೆ ಇದೆ. ಹಣ ಮಾಡಲು ಇದೇ ಸಮಯ ಎಂದು ತಿಳಿದು ದುಬಾರಿ ಬೆಲೆಗೆ ಮರಳು ಮಾರಾಟವಾಗುತ್ತಿದೆ. ಕಟ್ಟಡ ನಿರ್ಮಾಣ ಮಾಡುವ ಮನೆ ಮಾಲೀಕರು ವಿಧಿ ಇಲ್ಲದೇ ಹೆಚ್ಚಿನ ಬೆಲೆಯಾದರೂ ಮರಳು ಖರೀದಿ ಮಾಡುತ್ತಿದ್ದಾರೆ.