ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿಚಾರಿಸಿದಾಗ, ಲಾರಿಯಲ್ಲಿ ಸಾಗಿಸುತ್ತಿದ್ದ ಅದಿರು ಅಕ್ರಮ ಎಂಬುದು ತಿಳಿದು ಬಂದಿದೆ.

ಸಂಡೂರು: ತಾಲೂಕಿನ ದೋಣಿಮಲೈನಲ್ಲಿ ಇರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್‌ಎಂಡಿಸಿ (ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್) ಸಂಸ್ಥೆಯ ಗಣಿಯಿಂದ ಜ.೧೬ರಂದು ಲಾರಿಯಲ್ಲಿ ೨೦ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ಯಾವುದೇ ಪರವಾನಗಿ ಪಡೆಯದೇ ಸಾಗಿಸುತ್ತಿದ್ದ ಪ್ರಕರಣ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಗಣಿ, ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸಂಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಎನ್‌ಎಂಡಿಸಿ ಸಂಸ್ಥೆಯ ಗಣಿ ಸಂಖ್ಯೆ ೧೧೧೧ರ ಸಿ ಬ್ಲಾಕ್‌ದಿಂದ ಉತ್ಕೃಷ್ಟ ಗುಣಮಟ್ಟದ (ಶೇ.೬೦-೬೨ ಎಫ್‌ಇ) ೨೦ ಮೆಟ್ರಿಕ್ ಟನ್ ಅದಿರನ್ನು ತುಂಬಿಕೊಂಡಿದ್ದ ಲಾರಿ ಜ.೧೬ರಂದು ಸಂಡೂರು ಸಮೀಪದ ಬಾಬಯ್ಯ ಕ್ರಾಸ್ ಬಳಿ ಬಂದಾಗ ಪೊಲೀಸರು ಲಾರಿಯನ್ನು ತಡೆದು ವಿಚಾರಿಸಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿಚಾರಿಸಿದಾಗ, ಲಾರಿಯಲ್ಲಿ ಸಾಗಿಸುತ್ತಿದ್ದ ಅದಿರು ಅಕ್ರಮ ಎಂಬುದು ತಿಳಿದು ಬಂದಿದೆ.

ಅಧಿಕಾರಿಗಳು ಲಾರಿ ಚಾಲಕ ತಿಪ್ಪೇಸ್ವಾಮಿಯನ್ನು ವಿಚಾರಿಸಿದಾಗ ಆತನು ಅದಿರನ್ನು ನೆರೆಯ ಆಂಧ್ರಪ್ರದೇಶದ ನೇಮಕಲ್‌ನಲ್ಲಿರುವ ಸಾಯಿ ಬಾಲಾಜಿ ಸ್ಪಾಂಜ್ ಘಟಕಕ್ಕೆ ಸಾಗಾಣಿಕೆ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಅದಿರು ಸಾಗಾಣಿಕೆಗೆ ಸಂಬಂಧಿಸಿ ಯಾವುದೇ ದಾಖಲೆಗಳು ಚಾಲಕನ ಬಳಿ ಲಭ್ಯವಿಲ್ಲದ ಕಾರಣ ಲಾರಿಯಲ್ಲಿ ಸಾಗಾಣಿಕೆ ಮಾಡುತ್ತಿದ್ದ ಅದಿರು ಅಕ್ರಮ ಮತ್ತು ಅನಧಿಕೃತ ಎಂದು ತೀರ್ಮಾನಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಈ ಕುರಿತು ದೂರು ದಾಖಲಿಸಿದ್ದಾರೆ.

ಈ ಮೊದಲು ಅಕ್ರಮ ಗಣಿಗಾರಿಕೆಗೆ ಬ್ರೇಕ್ ಬಿದ್ದಿತ್ತು. ೨೦೧೧ರಿಂದ ಸುಪ್ರೀಂ ಕೋರ್ಟ್‌ನ ಮೇಲುಸ್ತುವಾರಿ ಪ್ರಾಧಿಕಾರದ ಕಣ್ಗಾವಲಿನಲ್ಲಿ ರಾಜ್ಯದಲ್ಲಿ ಗಣಿ ಚಟುವಟಿಕೆ ನಡೆಯುತ್ತಿದ್ದರೂ ಜ.೧೬ರಂದು ಅಕ್ರಮವಾಗಿ ಎನ್‌ಎಂಡಿಸಿ ಗಣಿಯಿಂದ ಅದಿರನ್ನು ಸಾಗಾಣಿಕೆ ಮಾಡಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ಇನ್ನು ಜೀವಂತವಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಈ ಕುರಿತು ಕನ್ನಡಪ್ರಭದೊಂದಿಗೆ ಪ್ರತಿಕ್ರಿಯಿಸಿರುವ ಜನ ಸಂಗ್ರಾಮ ಪರಿಷತ್ ಮುಖಂಡ ಶ್ರೀಶೈಲ ಆಲ್ದಳ್ಳಿ, ಸಿಐಎಸ್‌ಎಫ್‌ನ್ನು ದಾಟಿ, ಎನ್‌ಎಂಡಿಸಿ ಗಣಿಯಿಂದ ಅಕ್ರಮ ಅದಿರು ಸಾಗಾಟ ವಿಷಯ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲರ ಕುರಿತು ಸೂಕ್ತ ತನಿಖೆಯಾಗಬೇಕು ಎಂದಿದ್ದಾರೆ.

ಎಲ್ಲ ಆಯಾಮಗಳಿಂದ ತನಿಖೆ: ಸಂಡೂರು ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿರುವ ಅದಿರು ಅಕ್ರಮ ಸಾಗಣೆ ಪ್ರಕರಣವನ್ನು ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತದೆ ಎಂದು ಎಸ್ಪಿ ಸುಮನ್ ಪನ್ನೇಕರ್ ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ, ಯಾವುದೇ ಪರ್ಮಿಟ್ ಇಲ್ಲದೇ ದಾಖಲೆಗಳಿಲ್ಲದೇ ಟ್ರಕ್‌ವೊಂದರಲ್ಲಿ ಕಬ್ಬಿಣದ ಅದಿರು ಸಾಗಣೆ ಬಗ್ಗೆ ಸಂಡೂರು ಠಾಣೆಗೆ ಮಾಹಿತಿ ಬಂದಿತ್ತು. ಲಾರಿ ವಶಕ್ಕೆ ಪಡೆದು ಪರಿಶೀಲಿಸಲಾಯಿತು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಕರೆಸಿಕೊಂಡು ದೂರು ಪಡೆದು ಭೂವಿಜ್ಞಾನಿಯಿಂದ ಪ್ರಕರಣ ದಾಖಲಿಸಿದ್ದೇವೆ ಎಂದರು.

ಅಕ್ರಮ ಅದಿರು ಸಾಗಿಸುತ್ತಿದ್ದ ಲಾರಿ ಚಾಲಕನ ಸಂಪರ್ಕದಲ್ಲಿ ಯಾರಿರಬಹುದು? ಪ್ರಕರಣದಲ್ಲಿ ಯರ‍್ಯಾರು ಇದ್ದಾರೆ? ಈ ಮೊದಲು ಇಂತಹ ಪ್ರಕರಣ ನಡೆದಿದ್ದವೇ ಎಂಬುದು ಸೇರಿದಂತೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಜಿಪಿಎಸ್ ಇರುವ ಲಾರಿಯಾದ್ದರಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಂದಲೂ ಒಂದಷ್ಟು ಮಾಹಿತಿ ಕೇಳಿದ್ದೇವೆ. ಲಾರಿ ಹೇಗೆ ಗಣಿಯಿಂದ ಹೊರಬಂದಿತು ಎಂಬುದರ ಕುರಿತು ಮಾಹಿತಿ ಕೇಳಿದ್ದೇವೆ. ಸಾಯಿ ಬಾಲಾಜಿ ಎಂಬ ಆಂಧ್ರದ ಕಾರ್ಖಾನೆಗೆ ಅದಿರು ಸಾಗಣೆಯಾಗುತ್ತಿತ್ತು ಎಂದು ಚಾಲಕ ಹೇಳಿದ್ದಾನೆ. ಆ ಕಾರ್ಖಾನೆಯವರನ್ನು ಕರೆಸಿ ವಿಚಾರಣೆ ಮಾಡುತ್ತೇವೆ ಎಂದು ಸುಮನ್ ಪನ್ನೇಕರ್ ತಿಳಿಸಿದರು.