ಸ್ವಾಭಿಮಾನ ಕಳೆದುಕೊಳ್ಳುತ್ತಿರುವ ಸಾಹಿತಿಗಳು: ಅರವಿಂದ್

| Published : Feb 18 2025, 12:33 AM IST

ಸಾರಾಂಶ

ಇತ್ತೀಚೆಗೆ ಕೆಲ ಸಾಹಿತಿಗಳು ಪಕ್ಷಗಳು ಮತ್ತು ಸರ್ಕಾರಗಳ ಹಿಂದೆ ಬಿದ್ದು ತಮ್ಮತನವನ್ನೇ ಕಳೆದುಕೊಳ್ಳುತ್ತಿದ್ದಾರೆ. ನಾಡು- ನುಡಿ, ನೆಲ- ಜಲದ ವಿಷಯವಾಗಿ ಅನ್ಯಾಯವಾಗುತ್ತಿದ್ದರೂ ದನಿ ಎತ್ತಲಾಗದಷ್ಟು ಶಕ್ತಿಯನ್ನು ಕಳೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ದಿನಗಳಲ್ಲಿ ಕೆಲ ಸಾಹಿತಿಗಳು ಯಾವುದೋ ಒಂದು ಪ್ರಶಸ್ತಿಗೆ, ಯಾವುದೋ ಒಂದು ಪಕ್ಷವನ್ನು ಓಲೈಕೆ ಮಾಡಿ ತಮ್ಮ ಸ್ವಾಭಿಮಾನವನ್ನೇ ಒತ್ತೆಯಾಗಿಡುತ್ತಿರುವುದು ದುರ್ದೈವದ ಸಂಗತಿ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ವಿಷಾದಿಸಿದರು.

ನಗರದಲ್ಲಿರುವ ಸೇವಾಕಿರಣ ವೃದ್ಧಾಶ್ರಮ ಸಭಾಂಗಣದಲ್ಲಿ ಕರುನಾಡ ಸಿರಿಸಂಪದ ಸಾಹಿತ್ಯ, ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ವಾರ್ಷಿಕೋತ್ಸವದ ಪ್ರಯುಕ್ತ ಕವಿ, ಕಾವ್ಯ, ಸಾಂಸ್ಕೃತಿಕ ಸಂಭ್ರಮಾಚರಣೆ- ರಾಜ್ಯ ಮಟ್ಟದ ಕವಿಗೋಷ್ಠಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇತ್ತೀಚೆಗೆ ಕೆಲ ಸಾಹಿತಿಗಳು ಪಕ್ಷಗಳು ಮತ್ತು ಸರ್ಕಾರಗಳ ಹಿಂದೆ ಬಿದ್ದು ತಮ್ಮತನವನ್ನೇ ಕಳೆದುಕೊಳ್ಳುತ್ತಿದ್ದಾರೆ. ನಾಡು- ನುಡಿ, ನೆಲ- ಜಲದ ವಿಷಯವಾಗಿ ಅನ್ಯಾಯವಾಗುತ್ತಿದ್ದರೂ ದನಿ ಎತ್ತಲಾಗದಷ್ಟು ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಕನ್ನಡ ಶಾಲೆಗಳು ಮುಚ್ಚುತ್ತಿದ್ದರೂ ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟಕ್ಕಿಳಿಯಲಾರದಷ್ಟು ಅಸಮರ್ಥರಾಗಿದ್ದಾರೆ. ಕನ್ನಡ ವಿರೋಧಿ ನಿಲುವುಗಳನ್ನು ಸಾಹಿತ್ಯದ ಮೂಲಕ ಸರ್ಕಾರಕ್ಕೆ ಬಿಸಿಮುಟ್ಟಿಸುವ, ಜನರನ್ನು ಜಾಗೃತಗೊಳಿಸುವ ಶಕ್ತಿಯೇ ಇಲ್ಲದಂತಾಗಿದ್ದಾರೆ. ಸಾಹಿತಿಗಳು ರಾಜಕಾರಣಿಗಳಾಗುತ್ತಿರುವರೆಂಬಂತೆ ಭಾಸವಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.

ಸಾಹಿತಿ ಮತ್ತು ಸಾಹಿತ್ಯ ಎಂದೂ ನಿಂತ ನೀರಾಗಬಾರದು. ಸಮಾಜ ಸುಧಾರಣೆಗೆ ತಮ್ಮಿಂದಾಗುವ ಸಂದೇಶಗಳನ್ನು ಸಮರ್ಥವಾಗಿ ನೀಡಬೇಕಾದದ್ದು ಸಾಹಿತಿಗಳ ಕರ್ತವ್ಯ ಎಂದರು.

ಹಿರಿಯ ಕವಯಿತ್ರಿ ಎಚ್.ಎಂ.ರತ್ನಾವತಿ ತಲಂಜೇರಿ ಮಾತನಾಡಿ, ಇತ್ತೀಚೆಗೆ ಹಲವು ಲೇಖಕರು ಮತ್ತು ಕವಿಗಳು ಪ್ರಸ್ತುತಪಡಿಸುವ ಕೃತಿಗಳಲ್ಲಿ ಸಾಕಷ್ಟು ಕೃತಿ ಚೌರ್ಯವಾಗಿರುವ ಅಂಶಗಳು ಕಂಡುಬರುತ್ತಿವೆ. ಸಾಹಿತಿ, ಕವಿಯಾದವರು ತಮಗನಿಸಿದ್ದನ್ನು ಒಳಗಣ್ಣಿನ ದೃಷ್ಟಿಯಲ್ಲಿ ಕಾಣುವ ವಾಸ್ತವಿಕತೆಯನ್ನು ಸಾಹಿತ್ಯಾಸಕ್ತರಿಗೆ ಉಣಬಡಿಸುವುದು ಪ್ರತಿಯೊಬ್ಬ ಕವಿಯ ಮೂಲ ಆಶಯವಾಗಿರಬೇಕು ಎಂದು ಸಲಹೆ ನೀಡಿದರು.

ದೊಡ್ಡ ದೊಡ್ಡ ಸಾಹಿತಿಗಳು, ವಿಮರ್ಶಕರು, ಕವನ ರಚನೆಯಲ್ಲಿ ಪ್ರಾಸ, ಗಣ, ಲಘು, ಗುರು ಮುಂತಾದ ಮಾಪನಗಳಿರಬೇಕೆಂದು ಪ್ರತಿಪಾದಿಸುತ್ತಾರೆ. ಆದರೆ, ಜನಸಾಮಾನ್ಯರ ನೋವು- ನಲಿವು ನಿತ್ಯದ ಅನುಭವಗಳನ್ನು ಅಭಿವ್ಯಕ್ತಿಸಲು ಈ ಯಾವ ಪ್ರಾಸಬದ್ಧಗಳೂ ಅನಿವಾರ್ಯವೇನೂ ಅಲ್ಲ. ಕವಿಯೊಬ್ಬ ತನಗನಿಸಿದ ವಾಸ್ತವಾಂಶದ ತಲ್ಲಣಗಳನ್ನು ಯಥಾವತ್ ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಎಷ್ಟು ಸಮರ್ಥನಾಗಿರುತ್ತಾನೋ ಅದನ್ನು ಆಸ್ವಾದಿಸುವ ಓದುಗರೂ ಕೂಡ ಆ ಕೃತಿಯನ್ನು ಒರೆಗೆ ಹಚ್ಚಿ ನೋಡುತ್ತಾರೆಯೇ ಹೊರತು ಅದರಲ್ಲಿ ಪ್ರಾಸ, ಲಘು, ಗುರು ಇವುಗಳನ್ನೆಲ್ಲ ಮಾಪನ ಮಾಡುತ್ತಾ ಕೂರುವುದಿಲ್ಲ ಎಂದು ಪ್ರತಿಪಾದಿಸಿದರು.

ಹಾಸ್ಯನಟ ಮಂಡ್ಯ ಸತ್ಯ, ಗಾಯಕ ಬೂದನೂರು ಸ್ವಾಮಿ ಅವರು ಪ್ರಸ್ತುತಪಡಿಸಿದ ಕುಡುಕನ ಪ್ರಸಂಗ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ಕುಡುಕ, ರಾಜ್ಯ ಸರ್ಕಾರಕ್ಕೆ ದಿನದ ೨೪ ಗಂಟೆಯೂ ಮದ್ಯದಂಗಡಿ ತೆರೆದಿರಬೇಕು, ಕುಡುಕರಿಗೆ ಸಾಲ ನೀಡಬೇಕು ಹಾಗೂ ಕುಡುಕರ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು ಎಂಬ ಮೂರು ಬೇಡಿಕೆಗಳನ್ನಿಟ್ಟ ಪ್ರಸಂಗ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತ್ತು.

ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಿಗೆ ಕರುನಾಡ ಸಿರಿಸಂಪದ, ಸಾಹಿತ್ಯ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರುನಾಡ ಸಿರಿಸಂಪದ ಸಾಹಿತ್ಯ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ, ಸಾಹಿತಿ ಕಟ್ಟೆ ಎಂ.ಎಸ್.ಕೃಷ್ಣಸ್ವಾಮಿ, ಜಿಲ್ಲಾ ಚುಸಾಪ ಅಧ್ಯಕ್ಷ ಜಿ.ವಿ.ನಾಗರಾಜು, ನಾಗಬಸವಯ್ಯ, ರಾಜಶ್ರೀ ಕೆ, ಶುಭಮಂಗಳ ಸತೀಶ್, ಜಯಲಕ್ಷ್ಮೀ ಶಿವಸ್ವಾಮಿ, ಮಮತ ಪ್ರವೀಣ್, ಚಲನಚಿತ್ರ ಹಾಸ್ಯನಟ ಮಂಡ್ಯ ಸತ್ಯ, ಶ್ಯಾಮಲಾದೇವಿ, ಭದ್ರಾವತಿ ಇತರರಿದ್ದರು.