ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಾನಗರ ಪಾಲಿಕೆಯ ಕಂದಾಯ ಇಲಾಖೆಯ ಅಧಿಕಾರಿಗಳು ಟೆಂಡರ್ ವಿಚಾರದಲ್ಲಿ ಕೋಟ್ಯಂತರ ರುಪಾಯಿ ನಷ್ಟ ಮಾಡಿದ್ದಾರೆ. ಅವರ ವಿರುದ್ಧ ಪಾಲಿಕೆ ಆಯುಕ್ತರು ತನಿಖೆ ನಡೆಸುವಂತೆ ಮೇಯರ್ ಸವಿತಾ ಕಾಂಬಳೆ ನಿರ್ಣಯ ತೆಗೆದುಕೊಂಡರು.ಇಲ್ಲಿನ ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಪಾಸ್ ಮಾಡಿದರು. ಪಾಲಿಕೆಯ ಕಂದಾಯ ಇಲಾಖೆ ಅಧಿಕಾರಿಗಳು ಬೀದಿ ಬದಿ ಹಾಗೂ ತಳ್ಳು ಗಾಡಿಯಲ್ಲಿ ವ್ಯಾಪಾರ ವಹಿವಾಟು ಮಾಡುವವರಿಗೆ ಕರ ವಸೂಲಿ ಮಾಡಲು ಟೆಂಡರ್ ಕರೆಯುತ್ತಾರೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಪೂರ್ಣ ಹಣ ತುಂಬಿಸಿಕೊಂಡು ನೀಡಬೇಕು. ಆದರೆ ಅರ್ಧ ಹಣ ತುಂಬಿಕೊಂಡು ಟೆಂಡರ್ ನೀಡಿದವರ ಬಳಿ ಹೆಚ್ಚುವರಿಯಾಗಿ ಹಣ ಪಡೆದು ಪಾಲಿಕೆಗೆ ಕೋಟ್ಯಂತರ ರು. ಆದಾಯ ನಷ್ಟ ಮಾಡಿದ್ದಾರೆ. ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಸದಸ್ಯ ಹನುಮಂತ ಕೊಂಗಾಲಿ ಒತ್ತಾಯಿಸಿದರು.
ಮೇಯರ್ ಸವಿತಾ ಕಾಂಬಳೆ ಮಾತನಾಡಿ, ಪಾಲಿಕೆಯ ಎಲ್ಲ ಸದಸ್ಯರ ಆರೋಪ ಇದೆ. ಪಾಲಿಕೆ ಆಯುಕ್ತರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಆಯುಕ್ತರ ನೇತೃತ್ವದಲ್ಲಿ ಕಮಿಟಿ ರಚನೆ ಮಾಡಿ ಲೋಪವಾಗಿದ್ದರೆ ಮುಂದಿನ ಸಾಮಾನ್ಯ ಸಭೆಯೊಳಗೆ ವರದಿ ಸಲ್ಲಿಸಬೇಕು. ಬಳಿಕ ಮುಂದಿನ ಕ್ರಮದ ಬಗ್ಗೆ ಸದಸ್ಯರು ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.ಇದಕ್ಕೂ ಮುನ್ನ ಪಾಲಿಕೆ ಸಭೆಯ ಆರಂಭದಲ್ಲಿ ವಿವಿಧ ಸ್ಥಾಯಿ ಸಮಿತಿಯಲ್ಲಿ ತೆಗೆದುಕೊಂಡ ನಿರ್ಣಯವನ್ನು ಕೌನ್ಸಿಲ್ ಸಭೆಯಲ್ಲಿ ಪಾಸ್ ಮಾಡುವ ವೇಳೆ ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ವಿಪಕ್ಷ ನಾಯಕ ಮುಜಮ್ಮಿಲ ಡೋಣಿ ಮಾತನಾಡಿ, ಹಿಂದಿನ ಮೇಯರ್, ಉಪಮೇಯರ್ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಕಳ್ಳರ ಹಾವಳಿ ಕಡಿಮೆಯಾಗಿದೆ. ಒಳಚರಂಡಿ ಸಮಸ್ಯೆ ಬಗೆಹರಿದಿದೆ. ಆದ್ದರಿಂದ ಅವರಿಗೆ ಸನ್ಮಾನ ಮಾಡಬೇಕು ಎಂದು ಲೇವಡಿ ಮಾಡಿದರು.ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿಯ ದಕ್ಷಿಣ ಕ್ಷೇತ್ರದ ಸದಸ್ಯರಿಗೆ ₹10 ಲಕ್ಷ ಅನುದಾನ ಹಾಗೂ ಉತ್ತರ ಕ್ಷೇತ್ರದ ಸದ್ಯರಿಗೆ ನಯಾಪೈಸೆ ಅನುದಾನವನ್ನು ಹಿಂದಿನ ಮೇಯರ್ ಮಾಡಲಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಸದಸ್ಯ ಅಜಿಂ ಪಟವೇಗಾರ ಮಾತನಾಡಿ, ಪಾಲಿಕೆಯ ಸ್ಥಾಯಿ ಸಮಿತಿಯಲ್ಲಿ ನಮ್ಮ ಸದಸ್ಯರಿಗೆ ಅವಕಾಶ ಕೊಡುವುದಿಲ್ಲ. ಪಾಲಿಕೆ ವಿಪಕ್ಷ ಸದಸ್ಯರ ಸಲಹೆಗೆ ಗೌರವ ಇಲ್ಲ. ಪಾಲಿಕೆ ಅಧಿಕಾರಿಗಳು ಸಹ ಹಾಗೆ ನೋಡುತ್ತಾರೆ. ನಮ್ಮ ಸಮಸ್ಯೆಯನ್ನು ಸ್ಥಾಯಿ ಸಮಿತಿಯಲ್ಲಿ ಹೇಳಲು ಬರುವುದಿಲ್ಲ. ಆದ್ದರಿಂದ ಕೌನ್ಸಿಲ್ ಸಭೆಯಲ್ಲಿ ಹೇಳುತ್ತೇವೆ ಎಂದರು.ಬಿಜೆಪಿ ಸದಸ್ಯ ಹನುಮಂತ ಕೊಂಗಾಲಿ ಮಾತನಾಡಿ, ಸ್ಥಾಯಿ ಸಮಿತಿಯ ಸಭೆಯಲ್ಲಿ ಎಲ್ಲ ಸದಸ್ಯರಿಗೂ ಆಹ್ವಾನ ಇರುತ್ತದೆ. ಯಾರಿಗೂ ಕಡೆಗಣನೆ ಮಾಡಿಲ್ಲ. ಅಭಿವೃದ್ಧಿಗಾಗಿ ಎಲ್ಲರೂ ಸಹಕಾರ ಕೊಡಬೇಕು ಎಂದರು. ಈ ಸಭೆಯಲ್ಲಿ ಉಪಮೇಯರ್ ಆನಂದ ಚೌಹಾಣ, ಆಡಳಿತ ಪಕ್ಷದ ನಾಯಕ ಗಿರೀಶ್ ದೋಂಗಡಿ, ಪಾಲಿಕೆ ಆಯುಕ್ತ ಪಿ.ಎಸ್.ಲೋಕೇಶ ಸೇರಿದಂತೆ ಇನ್ನಿತರರು ಇದ್ದರು.
---ಕೋಟ್
ಸರ್ಕಾರದಿಂದ ಉತ್ತರ ಕ್ಷೇತ್ರದ ಶಾಸಕರು ಕೋಟ್ಯಂತರ ರುಪಾಯಿ ಅನುದಾನ ಕೇವಲ ಉತ್ತರ ಕ್ಷೇತ್ರದ ಪಾಲಿಕೆ ಸದಸ್ಯರಿಗೆ ಮಾತ್ರ ಕೊಟ್ಟಿದ್ದಾರೆ. ಇದು ಯಾವ ನ್ಯಾಯ?.- ರವಿ ಧೋತ್ರೆ ಬಿಜೆಪಿ ಸದಸ್ಯ
----ಬಾಕ್ಸ್
ಹಿಂದಿನ ಪಾಲಿಕೆ ಆಯುಕ್ತರ ವಿರುದ್ಧಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನ
ಕನ್ನಡಪ್ರಭ ವಾರ್ತೆ ಬೆಳಗಾವಿಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪ ಹಿನ್ನೆಲೆಯಲ್ಲಿ ಪಾಲಿಕೆ ಹಿಂದಿನ ಆಯುಕ್ತ ಅಶೋಕ ದುಡಗುಂಟಿ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯಲು ಪರಿಷತ್ ಸಭೆಯಲ್ಲಿ ತೀರ್ಮಾನಿಸಲಾಯಿತು. ನಗರಾಭಿವೃದ್ಧಿ ಇಲಾಖೆ, ಲೋಕಾಯುಕ್ತರಿಗೂ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪಾಲಿಕೆಯ ಹಿಂದಿನ ಆಯುಕ್ತರು ಸ್ಥಾಯಿ ಸಮಿತಿ ಮತ್ತು ಪರಿಷತ್ ಸಭೆಯ ಗಮನಕ್ಕೂ ಬಾರದೇ ಕೇವಲ 18 ವಾರ್ಡ್‌ಗಳಿಗೆ ತಲಾ ₹30 ಲಕ್ಷ ಅನುದಾನ ಬಿಡುಗಡೆ ಮಾಡಿದ್ದರು. ಈ ಬಗ್ಗೆ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದು ಆ ಟೆಂಡರ್ ಪ್ರಕ್ರಿಯೆ ತಡೆ ನೀಡಿದ್ದಲ್ಲದೇ ಅಧಿಕಾರ ದುರ್ಬಳಕೆ ಮಾಡಿಕೊಂಡ ಆಯುಕ್ತ ದುಡಗುಂಟಿ ವಿರುದ್ಧ ಪತ್ರ ಬರೆಯಲು ನಿರ್ಧರಿಸಲಾಯಿತು.ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ವಿಲಾಸ ಜೋಶಿ ಅವರು ಮಾತನಾಡಿ, ಸ್ಥಾಯಿ ಸಮಿತಿ ಸಭೆಗೆ ಚರ್ಚೆಗೆಂದು ನೀಡಿದ್ದ ಕಡತಗಳನ್ನು ಮತ್ತೆ ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ದಾಖಲೆ ಕೂಡ ನಮ್ಮ ಬಳಿ ಇದೆ. ಇದರ ಬಗ್ಗೆ ನಾವು ಕಡತ ವಾಪಸ್ ತೆಗೆದುಕೊಂಡು ಹೋಗಿದ್ದರ ಬಗ್ಗೆ ಸ್ಪಷ್ಟನೆ ಕೇಳಿದ್ದರೂ ಉತ್ತರ ಬರಲಿಲ್ಲ. ಆದರೆ ಯಾವುದೇ ಅನುಮತಿ ಇಲ್ಲದೇ ಈ ರೀತಿ ಮಾಡಿದ್ದು ಸರಿಯಲ್ಲ ಎಂದರು.
ಪಾಲಿಕೆ ಆಡಳಿತ ಪಕ್ಷದ ನಾಯಕ ಗಿರೀಶ್ ಧೋಂಗಡಿ ಕೂಡ ಇದೇ ವಿಷಯವನ್ನು ಪ್ರಸ್ತಾಪಿಸಿ ತನಿಖೆಗೆ ಆಗ್ರಹಿಸಿದರು. ಆಡಳಿತ ಪಕ್ಷದ ನಗರಸೇವಕ ಹನುಮಂತ ಕೊಂಗಾಲಿ ಅವರು, ಈ ಹಿಂದೆ ಕೂಡ ಆಯುಕ್ತರು ಲೋಪವೆಸಗಿದ್ದರು. ಆಗಲೂ ಪತ್ರ ಬರೆಯುವ ತೀರ್ಮಾನ ಮಾಡಲಾಗಿತ್ತು. ಆದ್ದರಿಂದ ಎರಡೂ ವಿಷಯವನ್ಬು ಸೇರಿಸಿ ಪತ್ರ ಬರೆಯಬೇಕು. ಮುಂದಿನ ಪರಿಷತ್ ಸಭೆಯ ಹೊತ್ತಿಗೆ ಸ್ಪಷ್ಟತೆ ಬೇಕು ಎಂದರು. ಈ ವಿಷಯದಲ್ಲಿ ನಾವು ಯಾವುದೇ ರೀತಿಯ ಹೋರಾಟಕ್ಕೂ ಬದ್ಧ ಎಂದು ಸ್ಪಷ್ಟಪಡಿಸಿದರು.