ಸಾರಾಂಶ
ಕನ್ನಡಪ್ರಭ ವಾರ್ತೆ ಐಗಳಿಕಳಕೊಂಡ ತಾಯಿ, ತಂದೆ ಹಾಗೂ ಕಳೆದ ಸಮಯ ಎಂದಿಗೂ ಸಿಗುವುದಿಲ್ಲ. ಅವು ಬಜಾರದಲ್ಲಿ ಕೊಂಡು ತರುವ ವಸ್ತುಗಳಲ್ಲ, ಗಳಿಸಿದ ಆಸ್ತಿ ಹಾಗೂ ಹಣ ಕಳವುದಾರೇ ಮತ್ತೆ ಗಳಿಸಬಹುದು ಎಂದು ಕವಲಗುಡ್ಡ ಅಮರೇಶ್ವರ ಸ್ವಾಮೀಜಿ ನುಡಿದರು.
ಸ್ಥಳೀಯ ಶ್ರೀ ಅಂಕಲಸಿದ್ದೇಶ್ವರ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿರುವ ಶಿವಾನುಭವ ಗೋಷ್ಠಿಯ ಪ್ರಥಮ ದಿನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಾಡಿನಲ್ಲಿ ವಿದ್ಯಾವಂತ ಮಕ್ಕಳು ಸಿಗಬಹುದು. ಆದರೆ, ಹೃದಯವಂತ ಮಕ್ಕಳು ಸಿಗುವುದು ಕಡಿಮೆ. ನೀರು, ಗಾಳಿ, ನಿಸರ್ಗ ಕೊಟ್ಟ ಭಗವಂತನನ್ನು ಮರೆಯುತ್ತಿದ್ದೇವೆ. ತೋಟದ ಬದುವಿನಲ್ಲಿ, ಕೆರೆ ದಂಡೆಯಲ್ಲಿ ಹಳ್ಳದ ಎರಡು ಬದಿಯಲ್ಲಿರುವ ಮರಗಳನ್ನು ಕಡಿದು ಪರಿಸರ ನಾಶ ಮಾಡಿದ್ದೇವೆ. ಮಳೆ ಬರಲು ಹೇಗೆ ಸಾಧ್ಯ. ಇದರಿಂದ ಬರಗಾಲ ನಾವೇ ಅನುಭವಿಸಬೇಕು. ಉಷ್ಣಾಂಶ ಕಮ್ಮಿ ಮಾಡಲು ಮರ ಗಿಡ ಬೆಳೆಸಬೇಕು ಎಂದು ಸಲಹೆ ನೀಡಿದರು.ಸಿದ್ದೇಶ್ವರ ಮಹಾರಾಜರು ಮಾತನಾಡಿ, ಅಂಕಲ ಸಿದ್ದೇಶ್ವರರಿಗೆ ಭಕ್ತಿಯಿಂದ ನಡೆದುಕೊಂಡರೆ ನಿಮ್ಮನ್ನು ಏಂದಿಗೂ ಕೈ ಬಿಡುವುದಿಲ್ಲ. ಜೀವನದಲ್ಲಿ ಪುಣ್ಯ ಕಾರ್ಯ ಮಾಡಿದ್ದರೆ ಭಗವಂತ ನಿಮ್ಮನ್ನು ಕಾಪಾಡುತ್ತಾನೆ. ಒಳ್ಳೆಯ ಕೆಲಸ ಮಾಡದಿದ್ದರೂ ಪರವಾಗಿಲ್ಲ, ಕೆಟ್ಟ ಕೆಲಸ ಮಾಡಲೇಬಾರದು ಎಂದರು.
ವಿಶ್ರಾಂತಿ ಪ್ರಾಚಾರ್ಯ ಎ.ಎಸ್. ನಾಯಿಕ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ದಿನಗಳಲ್ಲಿ ಮಕ್ಕಳಿಗೆ ಸಂಸ್ಕಾರ ಇಲ್ಲ. ತಾಯಿ-ತಂದೆ, ಗುರುಗಳು ಮಕ್ಕಳಿಗೆ ಮೊದಲು ಸಂಸ್ಕಾರ ಕೊಡಬೇಕಿದೆ ಎಂದರು.ಜಾತ್ರೆಯ ನಿಮಿತ್ತ ಶ್ರೀ ಕವಿರತ್ನ ಕಾಳಿದಾಸ ನಾಟ್ಯ ಸಂಘ ಐಗಳಿ ಇವರಿಂದ ಅಣ್ಣನ ಒಡಲು ಬಂಗಾರದ ಕಡಲು ನಾಟಕದ ಭಿತ್ತಿಪತ್ರಗಳನ್ನು ಶ್ರೀಗಳು, ಗಣ್ಯರು ಬಿಡುಗಡೆ ಮಾಡಿದರು. ಈ ವೇಳೆ ಗ್ರಾಮದ ಹಿರಿಯರಾದ ಸಿ.ಎಸ್.ನೇಮಗೌಡ, ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ಬಿರಾದಾರ, ಅರ್ಚಕರು, ಜಾತ್ರಾ ಕಮಿಟಿ ಹಾಗೂ ಯುವಕರ ಬಳಗದವರು ಇದ್ದರು. ನಿಂಗಪ್ಪ ದಳವಾಯಿ ಸ್ವಾಗತಿಸಿದರು. ಕೆ.ಎಸ್.ಬಿರಾದಾರ ನಿರೂಪಿಸಿದರು. ಬತಮಣ್ಣ ಹಿರೇಕುರುಬರ ವಂದಿಸಿದರು.