ಮಲೆ ಮಹದೇಶ್ವರ ಬೆಟ್ಟದಲ್ಲಿ ಜನಸಾಗರ

| Published : Jan 02 2024, 02:15 AM IST

ಸಾರಾಂಶ

ನೂತನ ವರ್ಷಾಚರಣೆ ಹಿನ್ನೆಲೆ ಮಲೆಮಹದೇಶ್ವರ ಬೆಟ್ಟಕ್ಕೆ ಹರಿದು ಬಂದ ಜನಸಾಗರ ಇಷ್ಟಾರ್ಥ ಸಿದ್ಧಿಸುವಂತೆ ಮಾಪಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹನೂರು ನೂತನ ವರ್ಷಾಚರಣೆ ಹಿನ್ನೆಲೆ ಮಲೆಮಹದೇಶ್ವರ ಬೆಟ್ಟಕ್ಕೆ ಹರಿದು ಬಂದ ಜನಸಾಗರ ಇಷ್ಟಾರ್ಥ ಸಿದ್ಧಿಸುವಂತೆ ಮಾಪಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಧನುರ್ಮಾಸ ಹಾಗೂ ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನಿಗೆ ಬೆಳಗಿನ ಜಾವ ಜಲ ಅಭಿಷೇಕ, ಎಣ್ಣೆ ಮಜ್ಜನ ಸೇವೆ, ದೂಪದ ಅಭಿಷೇಕ, ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿಯೊಂದಿಗೆ ಬೇಡಗಂಪಣ ಅರ್ಚಕರು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.ಮಲೆಮಹದೇಶ್ವರ ಬೆಟ್ಟದಲ್ಲಿ ಭಾನುವಾರ ರಾತ್ರಿಯಿಂದಲೇ ಭಕ್ತಸಾಗರ ಹರಿದು ಬಂದಿದ್ದು ಹೊಸ ವರ್ಷದಂದು ಸಾವಿರಾರು ಭಕ್ತರು ಚಿನ್ನದ ರಥ, ಬೆಳ್ಳಿ ರಥ, ಬಸವ ವಾಹನ, ರುದ್ರಾಕ್ಷಿ ಮಂಟಪೋತ್ಸವ, ಹುಲಿ ವಾಹನ ಉತ್ಸವ, ಪಂಜಿನ ಸೇವೆ ಸೇರಿದಂತೆ ಹರಕೆ ಹೊತ್ತ ಭಕ್ತರು ಮಾದಪ್ಪನಿಗೆ ಸೇವೆಗಳನ್ನು ಸಲ್ಲಿಸುವ ಮೂಲಕ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.ವಿಶೇಷ ಹೂವಿನ ಅಲಂಕಾರ ದೇವಾಲಯಕ್ಕೆ ಜಗಮಗಿಸುವ ದೀಪಾಲಂಕಾರ ಹಾಗೂ ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ದೇವಾಲಯ ಪ್ರಾಂಗಣ, ಗರ್ಭಗುಡಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.ತುಂಬಿ ತುಳುಕಿದ ವಸತಿಗೃಹಗಳು:

2023ರ ವರ್ಷದ ಕೊನೆಯ ದಿನ ಭಾನುವಾರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನ ದರ್ಶನ ಪಡೆಯಲು ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಮಾದಪ್ಪನ ಭಕ್ತರು ರಾತ್ರಿ ವಾಸ್ತವ್ಯ ಮಾಡುವ ಮೂಲಕ 2024ರ ಸೋಮವಾರ ಮಲೆ ಮಾದೇಶ್ವರ ದರ್ಶನ ಪಡೆಯಲು ವಿವಿಧ ವಸತಿಗೃಹಗಳಲ್ಲಿ ತಂಗುವ ಮೂಲಕ ವಸತಿ ಗೃಹಗಳು ಸಂಪೂರ್ಣ ಭರ್ತಿಯಾಗಿದ್ದವು.ಜನಸ್ತೋಮ :

ರಾಜ್ಯದ ನಾನಾ ಭಾಗಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ವರ್ಷಾಚರಣೆ ಪ್ರಯುಕ್ತ ಮಾದಪ್ಪನ ಭಕ್ತರು ವಿವಿಧ ಜಿಲ್ಲೆ ಹಾಗೂ ತಾಲೂಕುಗಳು ಹಾಗೂ ತಮಿಳುನಾಡಿನಿಂದಲೂ ಸಹ ಅಸಂಖ್ಯಾತ ಭಕ್ತರು ಮಲೆ ಮಾದೇಶ್ವರ ಬೆಟ್ಟಕ್ಕೆ ಆಗಮಿಸಿ ವಿವಿಧ ಉತ್ಸವಗಳಲ್ಲಿ ಪಾಲ್ಗೊಳ್ಳುವ ಮೂಲಕ ಭಾನುವಾರ ಸೋಮವಾರ ಸಹ ಬೆಟ್ಟದಲ್ಲಿ ಭಾರಿ ಜನಸ್ತೋಮವೇ ಹರಿದು ಬಂದಿತ್ತು.

ಸಕಲ ಸಿದ್ಧತೆ:

ಮಲೆ ಮಹದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೆಟ್ಟಕ್ಕೆ ಬರುವ ಭಕ್ತರ ಭಾವನೆಗಳಿಗೆ ಧಕ್ಕೆ ಬಾರದಂತೆ ಸಕಲ ರೀತಿಯಲ್ಲಿಯೂ ವ್ಯವಸ್ಥೆ ಕಲ್ಪಿಸುವ ಮೂಲಕ ಮಾದಪ್ಪನ ದರ್ಶನ ಪಡೆಯಲು ವಿಶೇಷ ಕೌಂಟರ್‌ಗಳನ್ನು ಸಹ ತೆರೆದು ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಜೊತೆಗೆ ಹಿರಿಯ ನಾಗರಿಕರಿಗೂ ಪ್ರತ್ಯೇಕ ಕೌಂಟರ್‌ನಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆ, ದಾಸೋಹ ವ್ಯವಸ್ಥೆ ಸೇರಿ ಸಕಲ ರೀತಿಯಲ್ಲಿಯೂ ಭಕ್ತರಿಗೆ ವ್ಯವಸ್ಥೆ ಮಾಡಲಾಗಿತ್ತು.

ನಾಗಮಲೆಗೆ ಭಕ್ತರ ದಂಡು:

ವರ್ಷಾಚರಣೆಗೆ ಬಂದಿದ್ದಂತ ಮಾದಪ್ಪನ ಭಕ್ತರು ದೇವರ ದರ್ಶನ ಪಡೆದು ನಾಗಮಲೆಗೆ ಇಂಡಿಗನತ್ತದವರೆಗೆ ವಾಹನಗಳಲ್ಲಿ ತೆರಳಿ, ಅಲ್ಲಿಂದ ಕಾಲು ನೆಡೆಗೆಯಲ್ಲಿ ನಾಗಮಲೆಗೆ ತೆರಳಿ ನಾಗಮಲ್ಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಸಾಲೂರು ಮಠಕ್ಕೆ ಭಕ್ತರ ಲಗ್ಗೆ

ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ಸಾಲೂರು ಮಠಕ್ಕೆ ಭೇಟಿ ನೀಡಿ ಹಿರಿಯ ಹಾಗೂ ಕಿರಿಯ ಸ್ವಾಮೀಜಿಗಳ ಆಶೀರ್ವಾದ ಪಡೆದು ಅಲ್ಲಿನ ಮಲೆ ಮಾದೇಶ್ವರನಿಗೆ ಪೂಜೆ ಸಲ್ಲಿಸಿದರು. ಸಾಲೂರು ಮಠದಲ್ಲಿಯೂ ಭಕ್ತರ ಅನುಕೂಲಕ್ಕಾಗಿ ವಿಶೇಷ ದಾಸೋಹವನ್ನು ಏರ್ಪಡಿಸಲಾಗಿತ್ತು.ಸೂಕ್ತ ಬಂದೋಬಸ್ತ್:

ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳ ಸೂಕ್ತ ಭದ್ರತೆಗಾಗಿ ಆಯಕಟ್ಟಿನ ಸ್ಥಳಗಳಲ್ಲಿ ಸಿಬ್ಬಂದಿ ನೇಮಿಸುವ ಮೂಲಕ ಬಿಗಿಪಹರೆ ಏರ್ಪಡಿಸಲಾಗಿತ್ತು.